
ಬಳ್ಳಾರಿ: ಎರಡನೇ ಬೆಳೆಗೆ ನೀರು ಬೇಕೆಂಬ ಕೂಗು ತುಂಗಭದ್ರಾ ಕೊಳ್ಳದಲ್ಲಿ ಜೋರಾಗಿದೆ. ಒಂದೆಡೆ ರಾಜ್ಯ ರೈತ ಸಂಘವು ನೀರಿಗೆ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿದ್ದರೆ, ಇದೇ 14ರಂದು ಸಭೆ ನಡೆಸಲು ನಿರ್ಧರಿಸಿರುವ ನೀರಾವರಿ ಸಲಹಾ ಸಮಿತಿ ತನ್ನ ನಿಲುವು ಪ್ರಕಟಿಸಲು ಸಜ್ಜಾದಂತೆ ಕಾಣಿಸುತ್ತಿದೆ. ಈ ಮಧ್ಯೆ, ನೀರು ಸಿಕ್ಕರೆ ಏನು ಮಾಡಬೇಕು? ನೀರು ಸಿಗದಿದ್ದರೆ ಏನು ಮಾಡಬೇಕು ಎಂಬ ಚರ್ಚೆಗಳು ರೈತರಲ್ಲಿ ಆರಂಭವಾಗಿದೆ.
ಸದ್ಯ ತುಂಗಭದ್ರಾ ಜಲಾಶಯದಲ್ಲಿರುವ ನೀರಿನ ಪ್ರಮಾಣ, ಸಚಿವರು, ಸರ್ಕಾರದ ಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಎರಡನೇ ಬೆಳೆಗೆ ನೀರು ಸಿಗುವುದು ಅನುಮಾನವೆಂಬಂತೆ ಭಾಸವಾಗುತ್ತಿದೆ. ಸಲಹಾ ಸಮಿತಿಯು ಲಭ್ಯ ನೀರನ್ನು ಹರಿಸಿ, ತನ್ನ ಕೈ ತೊಳೆದುಕೊಳ್ಳುವ ಸಾಧ್ಯತೆಗಳು ಸ್ಪಷ್ಟವಾಗುತ್ತಾ ಹೋಗುತ್ತಿದೆ. ಹೀಗಾಗಿ ರೈತರು ಲಭ್ಯ ನೀರನ್ನು ಆಧರಿಸಿ ಮುಂದಡಿ ಇಡುವುದು ಒಳಿತು ಎಂಬ ಸಲಹೆ ನೀಡುತ್ತಿದ್ದಾರೆ ಕೃಷಿ ತಜ್ಞರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು.
ನೀರಾವರಿ ಸಲಹಾ ಸಮಿತಿಯು ಒಂದು ವೇಳೆ ನೀರು ಪೂರೈಕೆ ಕಷ್ಟ, ಮುಂದಿನದ್ದು ರೈತರಿಗೆ ಬಿಟ್ಟಿದ್ದು ಎಂದು ಹೇಳಿದರೆ ಆಗ ರೈತರು ನೀರಾವರಿ ಬೆಳೆಗಳಾದ ಭತ್ತ ಮತ್ತು ಮೆಣಸಿನಕಾಯಿ ಬೆಳೆ ಬಿಟ್ಟು, ಅರೆ ನೀರಾವರಿ ಬೆಳೆಗಳನ್ನು, ಮೆಕ್ಕೆಜೋಳ, ಸಿರಿಧಾನ್ಯ ಬೆಳೆಯಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ತುಂಗಭದ್ರಾ ಕೊಳ್ಳದಲ್ಲಿ ಸಾಮಾನ್ಯವಾಗಿ ಎರಡನೇ ಬೆಳೆಗೆ ನೀರು ಲಭ್ಯವಾದರೆ ಭತ್ತದ ಬೆಳೆಯ ನಂತರ ಭತ್ತದ ಬೆಳೆಯನ್ನೇ ಬೆಳೆಯಲಾಗುತ್ತದೆ. ಮೆಣಸಿನಕಾಯಿ ಬೆಳೆಯ ನಂತರ ಮೆಣಸಿನಕಾಯಿ ಬೆಳೆಯನ್ನೇ ಬೆಳೆಯಲಾಗುತ್ತದೆ. ಹೀಗೆ ಮಾಡುವುದರಿಂದ ರಾಸಾಯನಿಕಗಳನ್ನು, ಕೀಟನಾಶಕಗಳನ್ನು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅನ್ಯ ಬೆಳೆಗಳನ್ನು ಬೆಳೆದು, ಈ ಸರಪಳಿಯನ್ನು ತುಂಡರಿಸಲು ಇದು ಸಕಾಲ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ರೈತರಿಗೆ ಅದರ ಜೊತೆಗೆ ಭೂಮಿಗೆ ಅನುಕೂಲವಾಗಲಿದೆ ಎಂಬ ನಿಲುವು ಹಲವರದ್ದು.
ಅನ್ಯ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಖರ್ಚು ಉಳಿತಾಯವಾಗುತ್ತದೆ, ಸಮಯ, ನೀರು ಉಳಿಯುತ್ತದೆ. ಜೊತೆಗೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಬೆಳೆಯಿಂದ ಬೆಳೆಗೆ ನಿರಂತರವಾಗಿ ಹರಡುತ್ತಿರುವ ರೋಗಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ಲಭ್ಯ ನೀರನ್ನೇ ಬಳಸಿಕೊಂಡು ಭತ್ತವನ್ನೇ ಬೆಳೆಯಬೇಕು ಎಂಬ ನಿಲುವಿಗೆ ರೈತರು ಬಂದರೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಸಲಹೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರವೇ ಭತ್ತೆ ಆದ್ಯತೆ ನೀಡಬೇಕು ಎಂದು ಕೆಲವು ರೈತರು ಅಭಿಪ್ರಾಯಪಟ್ಟಿದ್ದರು.
ಇದರ ಜತೆಗೆ, ಭತ್ತವನ್ನು ನೇರವಾಗಿ (ಕೂರಿಗೆ) ಬಿತ್ತನೆ ಮಾಡುವ ಪದ್ಧತಿ ಅಳವಡಿಸಿಕೊಳ್ಳಬೇಕು. ಇಂಥ ಪದ್ಧತಿಯಲ್ಲಿ ನೀರಿನ ಅಗತ್ಯ ಕಡಿಮೆ ಬೀಳುತ್ತದೆ. ರೋಗನಿರೋಧಕ ಶಕ್ತಿಯೂ ಬೆಳೆಗೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲವೇ, ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವಾರಬಂಧಿ ಪ್ರಯೋಗಕ್ಕೆ ಕೈ ಹಾಕಬೇಕು. ಅಂದರೆ ವಾರಕ್ಕೆ ಒಂದು ಬಾರಿ ಮಾತ್ರ ನೀರು ಪೂರೈಸಿ ಮತ್ತೊಂದು ವಾರ ನೀರು ನಿಲ್ಲಿಸುವುದು. ಇದರಿಂದ ನೀರಿನ ಸದ್ಬಳಕೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ.
ಸಲಹಾ ಸಮಿತಿ ಸಭೆ ನ.14ರಂದು ನಡೆಯುತ್ತಿದೆ. ನೀರು ಬಿಟ್ಟರೆ ಅನುಕೂಲ. ಪ್ರತಿಕೂಲ ಪರಿಸ್ಥಿತಿ ಎದುರಾದರೆ ಪರಿಸ್ಥಿತಿಗೆ ಅನುಗುಣವಾಗಿ ರೈತರು ಕೃಷಿ ಕೈಗೊಳ್ಳಬೇಕು. ಸಿರಿಧಾನ್ಯ ಬೆಳೆಯುವುದು ಹೆಚ್ಚು ಸೂಕ್ತಸೋಮಸುಂದರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ
ತೇವಾಂಶ ಅಧಿಕವಿರುವ ಪ್ರದೇಶಗಳ ರೈತರು ಭತ್ತಕ್ಕೆ ಆದ್ಯತೆ ನೀಡಬೇಕು. ಒಣಭೂಮಿಯ ರೈತರು ಸಿರಿಧಾನ್ಯಗಳ ಕಡೆಗೆ ಗಮನಹರಿಸಬೇಕು. ಇದರಿಂದ ರೈತರು ಭೂಮಿಗೆ ಅನುಕೂಲವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕುಈರಪ್ಪಯ್ಯ ಪ್ರಗತಿಪರ ರೈತ ಸಿರುಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.