
ಬಳ್ಳಾರಿ: ಜಿಲ್ಲೆಯಲ್ಲಿ ಮರಳು, ಗ್ರಾವೆಲ್, ಕಟ್ಟಡ ಕಲ್ಲು ಸೇರಿದಂತೆ ನೈಸರ್ಗಿಕ ಖನಿಜಗಳ ಅಕ್ರಮ ಗಣಿಗಾರಿಕೆ, ಸಾಗಣೆ ಅವ್ಯಾಹತವಾಗಿ ನಡೆಯುತ್ತಿವೆ ಎಂಬ ಆರೋಪಗಳ ನಡುವೆಯೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2025–26ನೇ ಸಾಲಿನಲ್ಲಿ ಒಟ್ಟು 213 ಪ್ರಕರಣಗಳಲ್ಲಿ ಒಟ್ಟು ₹1.30 ಕೋಟಿ ದಂಡ ಸಂಗ್ರಹಿಸಿರುವುದು ಸರ್ಕಾರ ಒದಗಿಸಿದ ದಾಖಲೆಗಳಿಂದ ಗೊತ್ತಾಗಿದೆ.
ಇದಿಷ್ಟೇ ಅಲ್ಲ, ಮರಳು, ಗ್ರಾವೆಲ್, ಕಟ್ಟಡಕಲ್ಲು, ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ, ಸಾಗಣೆ, ದಾಸ್ತಾನಿಗೆ ಸಂಬಂಧಿಸಿದಂತೆ ಗಣಿ ಇಲಾಖೆ ಈ ವರೆಗೆ 21 ಎಫ್‌ಐಆರ್/ ಪಿಸಿಎಆರ್ (ಖಾಸಗಿ ದೂರು)ಗಳನ್ನು ದಾಖಲು ಮಾಡಿದೆ.
ಬಳ್ಳಾರಿ ಜಿಲ್ಲೆಯು ತುಂಗಭದ್ರಾ ಮತ್ತು ವೇದಾವತಿ ನದಿಗಳ ಹರಿವನ್ನು ಹೊಂದಿದ್ದು, ಅಪಾರವಾದ ಮರಳು ನಿಕ್ಷೇಪ ಇಲ್ಲಿದೆ. ಮರಳನ್ನು ಅಕ್ರಮವಾಗಿ ತೆಗೆದು ಮಾರಾಟ ಮಾಡುವ ದಂಧೆಗಳೂ ಅಷ್ಟೇ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಜತೆಗೆ, ತೆರಿಗೆ, ರಾಯಧನ ವಂಚಿಸಿ ಆಂಧ್ರದಿಂದಲೂ ಮರಳನ್ನು ಹೊತ್ತು ತರಲಾಗುತ್ತಿದೆ. ಇದರಲ್ಲಿ ಪ್ರಭಾವಿಗಳೇ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಇವೆ.
ಇದೆಲ್ಲದರ ನಡುವೆಯೂ ಇಲಾಖೆ 2025–2026 ಸಾಲಿನಲ್ಲಿ ಒಟ್ಟು 55 ಪ್ರಕರಣಗಳಲ್ಲಿ ₹64,63,000 ದಂಡ ವಿಧಿಸಿದೆ. ಕಟ್ಟಡ ಕಲ್ಲು ಅಕ್ರಮಕ್ಕೆ ಸಂಬಂಧಿಸಿದಂತೆ ಇಲಾಖೆಯು ನಾಲ್ಕು ಎಫ್‌ಐಆರ್‌ಗಳನ್ನು ದಾಖಲು ಮಾಡಿದ್ದು, 37 ಪ್ರಕರಣಗಳಲ್ಲಿ ₹13.31 ಲಕ್ಷ ದಂಡ ವಿಧಿಸಿದೆ.
ಬಳ್ಳಾರಿ ನಗರದಲ್ಲಿ ತಲೆಎತ್ತುತ್ತಿರುವ ಲೇಔಟ್‌ಗಳು, ರಸ್ತೆ ಕಾಮಗಾರಿಗಳಿಗೆ ಗ್ರಾವೆಲ್ (ಗರಸು ಮಣ್ಣು) ಬೇಡಿಕೆ ಅಧಿಕವಾಗಿದೆ. ಗ್ರಾವೆಲ್ ಸಿಗದೇ ಹಲವು ಕಾಮಗಾರಿಗಳು ಸ್ಥಗಿತಗೊಂಡ ಉದಾಹರಣೆಗಳೂ ಇವೆ. ಹೀಗಾಗಿಯೇ ಗ್ರಾವೆಲ್ ಅನ್ನು ಅಕ್ರಮವಾಗಿ ತೆಗೆದು, ಮಾರಾಟ ಮಾಡುವ ದಂಧೆಯೂ ಬಳ್ಳಾರಿಯಲ್ಲಿ ಚುರುಕಾಗಿ ಕೆಲಸ ಮಾಡುತ್ತಿದೆ. ಗಣಿ ಇಲಾಖೆ ಇಂಥ ದಂಧೆಕೋರರ ವಿರುದ್ಧ ಈ ವರೆಗೆ 6 ಎಫ್‌ಐಆರ್‌ಗಳನ್ನು ಮಾಡಿದೆ. 125 ಪ್ರಕರಣಗಳಲ್ಲಿ ₹52.79 ಲಕ್ಷ ದಂಡ ಸಂಗ್ರಹಿಸಿದೆ.
ಗ್ರಾನೈಟ್‌ಗೆ ಸಂಬಂಧಿಸಿದಂತೆ ಈ ವರ್ಷ ಯಾವುದೇ ಎಫ್‌ಐಆರ್ ಆಗಲಿ, ದಂಡ ವಿಧಿಸಿದ ಪ್ರಕರಣಗಳಾಗಲಿ ಇಲ್ಲ. ಈ ಮಧ್ಯೆ, ಕಬ್ಬಿಣದ ಅದಿರುವ ಅಕ್ರಮ ಸಾಗಣೆ ಪ್ರಕರಣಗಳೂ ಬಯಲಾಗಿದ್ದು, ಎರಡು ಪ್ರಕರಣಗಳು (ಎಫ್‌ಐಆರ್ ಮತ್ತು ಪಿಸಿಆರ್)ಗಳು ದಾಖಲಾಗಿವೆ ಎಂದು ಸರ್ಕಾರ ತಿಳಿಸಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಖನಿಜ ಅಕ್ರಮಗಳಿಗೆ ಹೋಲಿಸಿದರೆ, ಸದ್ಯದ ಪ್ರಕರಣಗಳು, ಸಂಗ್ರಹಿಸಿದ ದಂಡದ ಪ್ರಮಾಣ ಕಡಿಮೆ. ದಾಳಿ ಪ್ರಕರಣಗಳು ಮತ್ತಷ್ಟು ವ್ಯಾಪಕವಾಗಿ, ಹೆಚ್ಚಾಗಿ ನಡೆಯಬೇಕು. ಈ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂಬ ಮಾತುಗಳೂ ಕೇಳಿಬಂದಿವೆ.
ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲಾಖೆ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಿದೆ. ನಿಯಮಿತ ತಪಾಸಣೆ ಮಾಡಲಾಗುತ್ತಿದೆ. ಟಾಸ್ಕ್‌ಫೋರ್ಸ್‌ನಿಂದಲೂ ಪರಿಶೀಲನೆಗಳು ನಿರಂತರವಾಗಿ ನಡೆಯುತ್ತಿದೆದ್ವಿತೀಯಾ ಇ.ಸಿ ಉಪ ನಿರ್ದೇಶಕಿ ಗಣಿ ಇಲಾಖೆ
ಬಂಡಿಗಳನ್ನೂ ಬಿಡದೇ ದಂಡ ಲಾರಿ ಜೆಸಿಬಿ ಟ್ರ್ಯಾಕ್ಟರ್ ಬಳಸದೇ ಮರಳನ್ನು ಕದ್ದು ಎತ್ತಿನ ಬಂಡಿಗಳಿಗೆ ತುಂಬಿ ನಿಗದಿತ ಸ್ಥಳಕ್ಕೆ ಕೊಂಡೊಯ್ದು ಅಕ್ರಮವಾಗಿ ಮಾರಾಟ ಮಾಡುವುದು ಮರಳು ದಂಧೆಕೋರರ ಅನುಸರಿಸುತ್ತಿರುವ ಹೊಸ ಅಕ್ರಮದ ವಿಧಾನ. ಇತ್ತೀಚೆಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೇ ಬಂಡಿಗಳನ್ನು ಹಿಡಿದು ಮರಳು ಗಣಿಗಾರಿಕೆಗೆ ಛಾಟಿ ಬೀಸಿದ್ದರು. ಅದನ್ನು ಮುಂದುವರಿಸಿರುವ ಗಣಿ ಅಧಿಕಾರಿಗಳು ಎತ್ತಿನ ಬಂಡಿಗಳನ್ನೂ ಬಿಡದೇ ಈಗ ದಂಡ ವಿಧಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ರೂಪಾಯಿಗಳ ದಂಡ ವಸೂಲಿ ಮಾಡಿದ್ದಾರೆ.