
ಬಳ್ಳಾರಿ: ಜಿಲ್ಲೆಯಲ್ಲಿ ಮರಳು, ಕಟ್ಟಡ ಕಲ್ಲು ಅಕ್ರಮ ಸಾಗಣೆ, ಸಂಗ್ರಹ ತಾಣಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಈ ವೇಳೆ 63 ಟನ್ ಮರಳು, 25 ಟನ್ ಕಟ್ಟಡ ಕಲ್ಲು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ₹2,00,570 ದಂಡ ವಿಧಿಸಿದ್ದಾರೆ.
ಮರಳು ಅಕ್ರಮ ದಾಸ್ತಾನು ಕುರಿತ ಮೂಲಗಳ ಮಾಹಿತಿ ಆಧರಿಸಿ ಶುಕ್ರವಾರ ಸಿರುಗುಪ್ಪದ ಖಾಸಗಿ ಶಾಲೆಯೊಂದರಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು 55 ಟನ್ ಅಕ್ರಮ ಮರಳು ಪತ್ತೆ ಹಚ್ಚಿದರು. ಮರಳು ವಶಕ್ಕೆ ಪಡೆದ ಅಧಿಕಾರಿಗಳು ಒಟ್ಟು ₹46,750 ದಂಡ ವಿಧಿಸಿದ್ದಾರೆ.
ನಗರದ ಹೊರ ವಲಯದ ಪರಮದೇವನಹಳ್ಳಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕಟ್ಟಡ ಕಲ್ಲು ಸಾಗಣೆ ಮಾಡುತ್ತಿದ್ದ ಟ್ರಕ್‌ವೊಂದನ್ನು ಅಧಿಕಾರಿಗಳು ಹಿಡಿದಿದ್ದು, ಅದರಲ್ಲಿದ್ದ 25 ಟನ್ ಕಲ್ಲು ವಶಕ್ಕೆ ಪಡೆಸಿಕೊಂಡಿದ್ದಾರೆ. ₹69,500 ದಂಡ ವಿಧಿಸಲಾಗಿದೆ.
ಮೋಕಾ ಹೋಬಳಿಯ ಶಿವಪುರದ ಬಳಿ 8 ಎತ್ತಿನ ಬಂಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4 ಟನ್ ಮರಳನ್ನು ಕಂದಾಯ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭಾನುವಾರ ವಶಕ್ಕೆ ಪಡೆದರು. ಎಲ್ಲ ಬಂಡಿಗಳಿಗೆ ಒಟ್ಟು ₹52,000 ದಂಡ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.