
ಬಳ್ಳಾರಿ: ‘ಎನ್‌ಎಂಡಿಸಿ ಗಣಿಯಿಂದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿರುವುದು ವ್ಯವಸ್ಥಿತ ಸಂಚು. ಇದರ ಹಿಂದೆ ಯಾರಿದ್ದಾರೆ ಎಂಬುದರ ತನಿಖೆ ಆಗಬೇಕಿದೆ. ಸದ್ಯ ನಾಲ್ವರನ್ನು ಮಾತ್ರ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಲಾರಿ ಚಾಲಕ ತಿಪ್ಪೇಸ್ವಾಮಿ ನೀಡಿದ ಮಾಹಿತಿ ಆಧರಿಸಿ, ‘ಸಾಯಿ ಬಾಲಾಜಿ ಸ್ಪಾಂಜ್ ಐರನ್ ಇಂಡಿಯ ಪ್ರೈವೇಟ್ ಲಿಮಿಟೆಡ್’ ಕಾರ್ಖಾನೆಯಲ್ಲಿ 1,050 ಟನ್ ಕಬ್ಬಿಣದ ಅದಿರು ಹಾಗೂ ‘ನೋಬಲ್ ಇಸ್ಪಾತ್ ಆ್ಯಂಡ್ ಎನೆರ್ಜಿಸ್ ಲಿಮಿಟೆಡ್’ ಕಾರ್ಖಾನೆಯಿಂದ 1,437 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡುವುದು, ಕಂಪನಿಗಳಿಂದ ಪೂರಕ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುವುದು, ಜಿ.ಪಿ.ಎಸ್ ಟ್ರ್ಯಾಕಿಂಗ್ ಮಾಡುವುದು, ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯಿಂದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲಿಸುವುದು ಬಾಕಿ ಇದೆ’ ಎಂದು ಅವರು ತಿಳಿಸಿದರು.
‘ಪ್ರಕರಣದಲ್ಲಿ ಯಾವುದೇ ಇಲಾಖೆ, ಸಂಸ್ಥೆಯ ಸಿಬ್ಬಂದಿಯನ್ನು ವಶಕ್ಕೆ ಪಡೆದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ಸಬ್ಸಿಡಿ ರಸಗೊಬ್ಬರ ದಂಧೆ ಬಯಲು: ರೈತರಿಗೆ ಸರ್ಕಾರದಿಂದ ನೀಡುವ ಯೂರಿಯಾ ರಸಗೊಬ್ಬರವನ್ನು ಕಡಿಮೆ ದರದಲ್ಲಿ ಖರೀದಿಸಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡಲು ಸಂಗ್ರಹಿಸಿದ್ದ ಪ್ರಕರಣವನ್ನು ಬೇಧಿಸಿರುವುದಾಗಿ ಸುಮನ್ ಡಿ.ಪಿ ತಿಳಿಸಿದರು.
ಖಚಿತ ಮಾಹಿತಿ ಆಧಿರಿಸಿ ಎಪಿಎಂಸಿ ಯಾರ್ಡ್ ಪೊಲೀಸರು ನಗರದ ಹೊರ ವಲಯದ ಅಪೆರಲ್ ಪಾರ್ಕ್‌ನಲ್ಲಿರುವ ಗೋದಾಮಿನ ಮೇಲೆ ದಾಳಿಸಿ ನಡೆಸಿದ್ದರು. ಈ ವೇಳೆ ವಿವಿಧ ಬ್ರ್ಯಾಂಡ್‌ಗಳ ಅಂದಾಜು ₹9,50,950 ಮೌಲ್ಯದ ಒಟ್ಟು 3,575 ಚೀಲ (161 ಟನ್) ಯೂರಿಯಾ ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ರತ್ನರಾಜ್, ಶಾಕೀರ್, ರಮೇಶ, ಹನುಮಂತ, ರೆಹಮತ್ ಹುಸೇನ್, ವಿಪಿನ್ ಅಲಿಯಾಸ್ ಕಾರ್ತಿಕ್, ಲಕ್ಷ್ಮಣ ಬಂಧಿತರು. ಇದರಲ್ಲಿ ಕೇರಳ ಮೂಲದವರೂ ಇದ್ದಾರೆ ಎಂದು ಮಾಹಿತಿ ನೀಡಿದರು.
ಕೃತಕ ಅಭಾವ ಸೃಷ್ಟಿ ಮಾಡಿ, ಬೇಡಿಕೆ ಹೆಚ್ಚಿಸಿ, ಭಾರಿ ಬೆಲೆಗೆ ಮಾರಾಟ ಮಾಡುವುದು ಈ ಅಕ್ರಮ ದಾಸ್ತಾನು ಹಿಂದಿನ ಉದ್ದೇಶವಾಗಿತ್ತು. ಇದರಲ್ಲಿ ವಿತರಕರು ಭಾಗಿಯಾಗಿದ್ದಾರೆ. ಇದರ ಬಗ್ಗೆ ಆಳವಾದ ತನಿಖೆ ನಡೆಯುತ್ತಿದೆ.
ಅಕ್ರಮಗಳ ವಿರುದ್ಧ 127 ಪ್ರಕರಣ
‘ಜನವರಿ 8 ರಿಂದ ಫೆಬ್ರವರಿ 9ರವರೆಗೆ ನಡೆದ ವಿಶೇಷ ದಾಳಿಗಳಲ್ಲಿ ಮಟ್ಕಾ ಜೂಜು ಮರಳು ಕಳ್ಳಸಾಗಣೆ ಅಬಕಾರಿ ಹಾಗೂ ಇತರ ಅಪರಾಧಗಳಿಗೆ ಸಂಬಂಧಿಸಿ 127 ಪ್ರಕರಣಗಳು ದಾಖಲಾಗಿವೆ. ₹1840082 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಪ್ರಕರಣಗಳಿಂದ 61 ವಾಹನ (₹86.20 ಲಕ್ಷ ಮೌಲ್ಯ)ಗಳನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಸುಮನ್ ಡಿ.ಪಿ ಹೇಳಿದರು. ‘ಅಕ್ರಮ ಚಟುವಟಿಕೆಗಳ ವಿರುದ್ಧ ಇಂತಹ ದಾಳಿಗಳು ಮುಂದುವರೆಯಲಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.