ADVERTISEMENT

ಬಳ್ಳಾರಿ: ಕೋಟೆ ಮಲ್ಲೇಶ್ವರ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:01 IST
Last Updated 2 ಫೆಬ್ರುವರಿ 2026, 2:01 IST
ಬಳ್ಳಾರಿಯ ತೇರು ಬೀದಿಯಲ್ಲಿ ಭಾನುವಾರ ಸಂಜೆ ಕೋಟೆ ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು
ಚಿತ್ರ: ಮುರಳಿಕಾಂತ ರಾವ್‌ 
ಬಳ್ಳಾರಿಯ ತೇರು ಬೀದಿಯಲ್ಲಿ ಭಾನುವಾರ ಸಂಜೆ ಕೋಟೆ ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು ಚಿತ್ರ: ಮುರಳಿಕಾಂತ ರಾವ್‌    

ಬಳ್ಳಾರಿ: ಬಳ್ಳಾರಿಯ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 

ನಗರದ ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಬಳ್ಳಾರಿ ನಗರ, ಜಿಲ್ಲೆಯಲ್ಲದೇ, ಹೊರ ಜಿಲ್ಲೆಗಳಿಂದಲೂ ಬಂದಿದ್ದ ಸಾವಿರಾರು ಭಕ್ತರು ತಮ್ಮ ಆರಾಧ್ಯ ದೈವಕ್ಕೆ ಭಕ್ತಿ ಸಮರ್ಪಿಸಿ ಧನ್ಯತಾ ಭಾವ ಮೆರೆದರು. ಡೊಳ್ಳು ಕುಣಿತ, ಗೊರವರ ಕುಣಿತ, ಗೊಂಬೆ ಕುಣಿತ, ಮಂಗಳ ವಾದ್ಯಗಳ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದವು. 

ADVERTISEMENT

ಬ್ರಹ್ಮರಥವನ್ನು ಸಂಜೆ ನಗರದ ಬೆಂಗಳೂರು ರಸ್ತೆಯ ತೇರು ಬೀದಿಯಿಂದ ಸಮೀಪದ ಕಣೇಕಲ್ ಬಸ್ ನಿಲ್ದಾಣ ಬಳಿಯ ಗಣೇಶನ ದೇವಸ್ಥಾನದವರೆಗೆ ಭಕ್ತರೆಲ್ಲ ಸೇರಿ ಎಳೆದರು. ಅಲ್ಲಿಂದ ಮತ್ತೆ ಮೂಲ ಸ್ಥಾನಕ್ಕೆ ತರಲಾಯಿತು. ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. 

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಒಂದು ವಾರದಿಂದಲೂ ಕೋಟೆ ಮಲ್ಲೇಶ್ವರ ಸ್ವಾಮಿಗೆ ಪೂಜೆ, ಪುನಸ್ಕಾರ ನಡೆದವು. ಭಾನುವಾರ ಭರತ ಹುಣ್ಣಿಮೆ ರಥೋತ್ಸವದೊಂದಿಗೆ ಜಾತ್ರೆ ಕೊನೆಗೊಂಡಿತು.

ಬ್ರಹ್ಮರಥೋತ್ಸವ ಹಿನ್ನಲೆಯಲ್ಲಿ ಭಾನುವಾರ ನಗರದ ಕೋಟೆ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.