ADVERTISEMENT

ಬಳ್ಳಾರಿ: ಭೂಸ್ವಾಧೀನ ವಿಳಂಬ; ಅಧಿಕಾರಿಗಳಿಂದ ಸಮಸ್ಯೆ ಚರ್ಚೆ

ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:45 IST
Last Updated 25 ಅಕ್ಟೋಬರ್ 2025, 5:45 IST
ಸಂಜಯ್ ಬಿಜ್ಜೂರು
ಸಂಜಯ್ ಬಿಜ್ಜೂರು   

ಬಳ್ಳಾರಿ: ‘ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತ ನಿಗಮ (ಕೆಎಂಇಆರ್‌ಸಿ)’ ‘ಗಣಿ ಬಾಧಿತ ಪ್ರದೇಶಗಳಿಗೆ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್‌)’ ಅಡಿಯಲ್ಲಿ ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಲ್ಲಿ ಕೈಗೊಂಡಿರುವ ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನ ಸಮಸ್ಯೆಯ ಕುರಿತು ಶುಕ್ರವಾರದ ಸಭೆಯಲ್ಲಿ ಚರ್ಚೆ ನಡೆಯಿತು. 

ಕೆಎಂಇಆರ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಬಿಜ್ಜೂರು ಅವರ ನೇತೃತ್ವದಲ್ಲಿ ನಗರದ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಹೆಚ್ಚುವರಿ ಜಿಲ್ಲಾಧಿಕಾರಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಗವಹಿಸಿದ್ದರು. 

‘ರಸ್ತೆ, ರೈಲ್ವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಭೂಮಿ ಲಭ್ಯತೆಯೇ ಪ್ರಮುಖ ಸವಾಲಾಗಿದೆ. ಖಾಸಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ತೀವ್ರ ವಿಳಂಬವಾಗುತ್ತಿದೆ. ಹೆಚ್ಚಿನ ಪರಿಹಾರ ಕೇಳಲಾಗುತ್ತಿದೆ. ಇದರಿಂದ ಯೋಜನೆಗಳು ಸಾಕಾರವೇ ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭೂ ಸ್ವಾಧೀನ ಸಾಧ್ಯವಾಗದೇ ಹೋದರೆ, ಯೋಜನೆಯಲ್ಲಿ ಮಾರ್ಪಾಟು ಮಾಡಲು ತಿಳಿಸಲಾಗಿದೆ’ ಎಂದು ಸಂಜಯ್‌ ಬಿಜ್ಜೂರು ಪ್ರಜಾವಾಣಿಗೆ ತಿಳಿಸಿದರು. 

ADVERTISEMENT

‘ಬಯಲು ಸೀಮೆ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ನೀರಿನ ಸಂಗ್ರಹ ಮತ್ತು ಅಂತರ್ಜಲ ವೃದ್ಧಿಗಾಗಿ ನೀರಾವರಿ, ಸಣ್ಣ ನೀರಾವರಿ ಇಲಾಖೆಗೆ ತಿಳಿಸಲಾಗಿದೆ. ಕೆರೆಗಳ ರಿಪೇರಿ ಕಾರ್ಯಕ್ಕೆ ತಾಕೀತು ಮಾಡಲಾಗಿದೆ’ ಎಂದರು. 

‘ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಲ್ಲಿನ ಶಾಲೆಗಳ ರಿಪೇರಿ ಕಾರ್ಯಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಕಾರ್ಯವನ್ನೂ ಕೂಡಲೇ ಆರಂಭಿಸಲು ಹೇಳಲಾಗಿದೆ. ಯಾವೆಲ್ಲ ಶಾಲೆಗಳಿಗೆ ರಿಪೇರಿಯ ಅಗತ್ಯವಿದೆಯೋ ಅದನ್ನು ತ್ವರಿತಗತಿಯಲ್ಲಿ ಮಾಡಬೇಕು. ಹೆಚ್ಚಿನ ಅನುದಾನದ ಅಗತ್ಯವಿದ್ದರೆ ಅನುದಾನ ಒದಗಿಸಲು ಕೆಎಂಇಆರ್‌ಸಿ ಸದಾ ಸಿದ್ಧವಿದೆ’ ಎಂಬ ಸಂದೇಶವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದು ಅವರು ಹೇಳಿದರು.  

ಬಳ್ಳಾರಿ ಹೊರವಲಯದ ಆಲದಹಳ್ಳಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು ಕೆಎಂಇಆರ್‌ಸಿಯಿಂದ ಅನುದಾನ ಒದಗಿಸಬಹುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅನುದಾನ ಒದಗಿಸಲು ಅವಕಾಶವಿದೆ. ಎಪಿಎಂಸಿ ಅಥವಾ ಜಿಲ್ಲಾಡಳಿತದಿಂದ ಪ್ರಸ್ತಾವನೆ ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ’ ಎಂದು ಅವರು ಭರವಸೆ ನೀಡಿದರು. 

ಆರೋಗ್ಯ ಇಲಾಖೆಗೆ ಅಗತ್ಯ ಅನುದಾನ: ‘ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡ (ಐಪಿಎಚ್‌ಎಸ್‌)’ ಅಡಿಯಲ್ಲಿ ಸೂಚಿತವಾಗಿರುವ ಎಲ್ಲ ಸವಲತ್ತುಗಳನ್ನು ಹೊಂದಲು ಆರೋಗ್ಯ ಇಲಾಖೆಗೆ ನೆರವು, ಅನುದಾನ ನೀಡಲಾಗುತ್ತದೆ. ಈ ಮಾನದಂಡದ ಪ್ರಕಾರ ಏನೇನು ಅಗತ್ಯವಿದೆಯೋ ಅದನ್ನೆಲ್ಲ ಪಡೆದುಕೊಳ್ಳುವಂತೆ ಹೇಳಲಾಗಿದೆ ಎಂದು ಸಂಜಯ್‌ ಬಿಜ್ಜೂರು ಹೇಳಿದರು. 

‘ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ–ವಿಮ್ಸ್‌)’ದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲು ಡಿಪಿಆರ್‌ ಸಿದ್ಧಪಡಿಸುವಂತೆ ತಿಳಿಸಲಾಗಿದೆ. ಕ್ಷಯ ರೋಗ ಕೇಂದ್ರವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು. 

ಕೆಎಂಇಆರ್‌ಸಿಯ ಯೋಜನೆಗಳಿಗೆ ಭೂಸ್ವಾಧೀನವೇ ಸಮಸ್ಯೆಯಾಗಿ ಕಾಡುತ್ತಿದೆ. ಇದನ್ನು ಬಗೆಹರಿಸಿಕೊಳ್ಳುವುದರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಚಿಂತಿಸಲಾಗಿದೆ 
–ಸಂಜಯ ಬಿಜ್ಜೂರು, ಕೆಎಂಇಆರ್‌ಸಿ ಎಂ.ಡಿ.
ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಎಪಿಎಂಸಿ ವತಿಯಿಂದ ಈ ಹಿಂದೆ ಸಲ್ಲಿಸಲಾಗಿದ್ದ ಡಿಪಿಆರ್‌ ಅನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸಿ ಕೆಎಂಇಆರ್‌ಸಿಗೆ ಸಲ್ಲಿಸಲಾಗುತ್ತದೆ
–ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.