ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆ: ಮೇಯರ್‌, ಉಪ ಮೇಯರ್‌ ಪಟ್ಟಕ್ಕೆ ಪೈಪೋಟಿ

ಆರ್. ಹರಿಶಂಕರ್
Published 14 ನವೆಂಬರ್ 2025, 5:15 IST
Last Updated 14 ನವೆಂಬರ್ 2025, 5:15 IST
ಅಲ್ಲಂ ಪ್ರಶಾಂತ್‌ 
ಅಲ್ಲಂ ಪ್ರಶಾಂತ್‌    

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಸ್ಥಾನಕ್ಕೆ ನ.15ರಂದು ಚುನಾವಣೆ ನಡೆಯುತ್ತಿದೆ. ಎರಡೂ ಸ್ಥಾನಗಳಿಗೂ ಕಾಂಗ್ರೆಸ್‌ನಲ್ಲಿ ಪ್ರಬಲ ಪೈಪೋಟಿ ಆರಂಭವಾಗಿದೆ.

ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಸಾಮಾನ್ಯ –ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಾಗಿದೆ.

ಒಟ್ಟು 39 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ 21 ಸ್ಥಾನಗಳನ್ನು ಗೆದ್ದಿತ್ತು. ಇದರ ಜತೆಗೆ, ಪಕ್ಷೇತರರಾಗಿ ಗೆದ್ದಿದ್ದ ಐವರು ಸದಸ್ಯರು ಚುನಾವಣೆ ನಂತರ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಹೀಗಾಗಿ ಪಾಲಿಕೆಯಲ್ಲಿ ಕಾಂಗ್ರೆಸ್‌ ಒಟ್ಟು 26 ಸ್ಥಾನಗಳನ್ನು ಹೊಂದಿದೆ. ಬಿಜೆಪಿ 13 ಸದಸ್ಯರನ್ನು ಹೊಂದಿದೆ.

ADVERTISEMENT

ಇದರ ಜತೆಗೆ, ಬಳ್ಳಾರಿ ನಗರ ಮತ್ತು ಗ್ರಾಮಾಂತರ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರನ್ನೂ ಹೊಂದಿರುವ ಕಾಂಗ್ರೆಸ್‌, ಪಾಲಿಕೆಯಲ್ಲಿ ಬಹುಮತ ಹೊಂದಿದೆ. ಹೀಗಾಗಿ ಬಿಜೆಪಿ ಮೇಯರ್‌ ಸ್ಥಾನದ ಬಗ್ಗೆ ಯೋಚನೆಯನ್ನೂ ಮಾಡದ ಸ್ಥಿತಿಯಲ್ಲಿದೆ.

ಸಾಮಾನ್ಯ ವರ್ಗಕ್ಕೆ ಮೇಯರ್‌ ಸ್ಥಾನ ಮೀಸಲಾಗಿರುವುದರಿಂದ ಎಲ್ಲ ಸಮುದಾಯ, ಪುರುಷ, ಮಹಿಳಾ ಕಾರ್ಪೊರೇಟರ್‌ಗಳೂ ತಮ್ಮನ್ನೇ ಮೇಯರ್‌ ಮಾಡಿ ಎಂದು ನಾಯಕರ ಬಳಿ ಮನವಿ ಮಾಡಿದ್ದರಾದರೂ, ಕೊನೆಗೆ ನಾಲ್ವರು ಮಾತ್ರ ಪ್ರಬಲ ಆಕಾಂಕ್ಷಿಗಳಾಗಿ ಕಣದಲ್ಲಿ ಉಳಿದಿದ್ದಾರೆ.

ಇಬ್ಬರು ಆಕಾಂಕ್ಷಿಗಳು ಮುಸ್ಲಿಂ ಸಮುದಾಯದವರಾಗಿದ್ದಾರೆ. ಇದರಲ್ಲಿ ಒಬ್ಬರು ತಮ್ಮ ಮಗಳಿಗೆ ಮೇಯರ್‌ ಸ್ಥಾನ ಕೇಳುತ್ತಿದ್ದಾರೆ. ಉಳಿದವರಲ್ಲಿ, ಒಬ್ಬರು ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದರೆ, ಇನ್ನೊಬ್ಬರು ಹಿರಿಯ ಕಾರ್ಪೊರೇಟರ್‌.

‘ಎಲ್ಲ ಚುನಾವಣೆಗಳಲ್ಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಪರವಾಗಿ ನಿಂತಿದೆ. ಬಳ್ಳಾರಿ ಗ್ರಾಮಾಂತರ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳ ಗೆಲುವಿನಲ್ಲಂತೂ ಮುಸ್ಲಿಂ ಸಮುದಾಯದ ಪಾತ್ರ ಪ್ರಧಾನವಾದದ್ದು. ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಆಗಿರುವಾಗಾದರೂ ನಮಗೆ ಅವಕಾಶ ಕೊಡಬೇಕು’ ಎಂದು ಮುಸ್ಲಿಂ ಅಭ್ಯರ್ಥಿಗಳು ಕೇಳುತ್ತಿದ್ದಾರೆ.

ಪ್ರಬಲ ಸಮುದಾಯದ ಕಾರ್ಪೊರೇಟರ್‌ಗಳೂ ಮೇಯರ್‌ ಸ್ಥಾನದ ಮೇಲಿನ ಹಿಡಿತ ಬಿಟ್ಟುಕೊಡಲು ಸಿದ್ಧವಾಗಿಲ್ಲ. ಹೀಗಾಗಿಯೇ ಸಮುದಾಯದ ಹಿನ್ನೆಲೆಯಲ್ಲಿ ಒಂದಷ್ಟು ಕಾರ್ಪೊರೇಟರ್‌ಗಳು ಒಂದಾದಂತೆ ಕಾಣುತ್ತಿದೆ. ಇನ್ನು ಹಿರಿತನದ ಆಧಾರದಲ್ಲಿ ಅಭ್ಯರ್ಥಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಮುಸ್ಲಿಂ ಸಮುದಾಯಕ್ಕೆ ಅವಕಾಶ ಕೊಡಬೇಕು ಎಂಬ ಭಾವನೆ ಪಕ್ಷದ ನಾಯಕರಲ್ಲಿದೆಯಾದರೂ, ಪಕ್ಷದಲ್ಲಿ ಹಿರಿತನ ಹೊಂದಿರುವ, ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ ಇತರ ಅಭ್ಯರ್ಥಿಗಳೂ ಇದ್ದಾರೆ. ಇದೆಲ್ಲವನ್ನೂ ಗಮನಿಸಿರುವ ಪಕ್ಷದ ನಾಯಕರು, ಅಳೆದು ತೂಗಿ ಬಹುತೇಕ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.

ಇಂದು ಬಳ್ಳಾರಿಗೆ ಆಗಮಿಸುತ್ತಿರುವ ಕೆಪಿಸಿಸಿಯ ವೀಕ್ಷಕರ ತಂಡ ಶಾಸಕರು, ನಾಯಕರು, ಕಾರ್ಪೊರೇಟರ್‌ಗಳೊಂದಿಗೆ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನಕ್ಕೆ ಬರುವ ನಿರೀಕ್ಷೆಗಳಿವೆ.

ಕುತೂಹಲಕಾರಿ ಸಂಗತಿಯೆಂದರೆ, ಕಳೆದ ಬಾರಿಯಂತೆ ಈ ಬಾರಿ ಶಾಸಕರು ಯಾರ ಪರವೂ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಯಾರ ಪರವೂ ವಕಾಲತ್ತು ವಹಿಸುತ್ತಿಲ್ಲ. ಸರ್ವ ಸಮ್ಮತರೆನಿಸುವ ಅಭ್ಯರ್ಥಿಯೊಬ್ಬರು ಆಯ್ಕೆಯಾದರೆ ಸಾಕು ಎಂಬ ಸ್ಥಿತಿಗೆ ಶಾಸಕರು ಬಂದಿದ್ದಾರೆ.

‘ಆದರೆ, ಒಂದಂತೂ ನಿಜ. ಇದು ಕಾಂಗ್ರೆಸ್‌ ಪಕ್ಷ. ಇಲ್ಲಿ ಯಾರು ಅಭ್ಯರ್ಥಿ ಎಂಬುದು ಕೊನೆಗೇ ಗೊತ್ತಾಗುವುದು’ ಎಂದು ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ಹೇಳಿದರು.

ಪ್ರಭಂಜನ್‌
ಸಾಮಾನ್ಯ ವರ್ಗಕ್ಕೆ ಮೇಯರ್‌ ಸ್ಥಾನ ಮೀಸಲಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಎಲ್ಲರ ಅಭಿಮತ ಪಡೆದು ಹಿರಿಯರೊಂದಿಗೆ ಚರ್ಚಿಸಿ ತೀರ್ಮಾನವಾಗಲಿದೆ
ಅಲ್ಲಂ ಪ್ರಶಾಂತ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
ಪ್ರಭಂಜನ್‌ಗೆ ಹಣೆಪಟ್ಟಿ ಕಳಚುವುದೇ? 
ಮೇಯರ್‌ ಆಗಬೇಕೆಂಬ ಉಮೇದಿನೊಂದಿಗೆ ಎರಡು ಬಾರಿ ಪ್ರಯತ್ನ ನಡೆಸಿದ್ದ ಕಾರ್ಪೊರೇಟರ್‌ ಪ್ರಭಂಜನ್‌ ಅವರಿಗೆ ಪಕ್ಷೇತರ ಅಭ್ಯರ್ಥಿ ಎಂಬ ಹಣೆಪಟ್ಟಿ ಇನ್ನಿಲ್ಲದಂತೆ ಕಾಡಿದೆ. ಅವರು ಈ ಬಾರಿಯೂ ಮೇಯರ್‌ ಸ್ಥಾನದ ಪ್ರಬಲ ಆಕಾಂಕ್ಷಿ. ಈ ಸಲ ಹಣೆಪಟ್ಟಿ ಕಳಚಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಕಾಂಗ್ರೆಸ್‌ ಪಡಸಾಲೆಯಲ್ಲಿ ಗುಸುಗುಸು ಇದೆ. ಅದಕ್ಕೆ ಪೂರಕವಾಗಿ ಸಂಖ್ಯಾಬಲವೂ ಕ್ರೋಡೀಕರಣಗೊಳ್ಳುತ್ತಿರುವ ಮುನ್ಸೂಚನೆಗಳಿವೆ.