
ಬಳ್ಳಾರಿ: ‘ವೈದ್ಯಕೀಯ ತ್ಯಾಜ್ಯ’ ಅಥವಾ ‘ಜೈವಿಕ ತ್ಯಾಜ್ಯ’ದ ವಿಲೇವಾರಿಯನ್ನು ಸಮರ್ಪಕವಾಗಿ ಮಾಡದ ನಗರದ ಎರಡು ಖಾಸಗಿ ಆಸ್ಪತ್ರೆಗಳಿಗೆ ಬಳ್ಳಾರಿ ಮಹಾನಗರ ಪಾಲಿಕೆ ಬುಧವಾರ ಕಸದ ಪಾಠ ಹೇಳಿಕೊಟ್ಟಿದೆ.
ಕಸದ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿದ ಇಲ್ಲಿನ ಪಾರ್ವತಿ ನಗರ ‘ಪದ್ಮಾ ಕಿಡ್ನಿಕೇರ್ ಸೆಂಟರ್’ ಹಾಗೂ ಮೋಕಾ ರಸ್ತೆಯ ‘ದ್ವಾರಕಾ ಆಸ್ಪತ್ರೆ’ ಮುಂದೆ ಪಾಲಿಕೆಯ ಪೌರ ಕಾರ್ಮಿಕರು ಕಸ ಸುರಿದು ಎಚ್ಚರಿಕೆ ನೀಡಿದ್ದಾರೆ.
ಕಸದ ವಾಹನಗಳು ನಿತ್ಯ ಆಸ್ಪತ್ರೆಗಳ ಬಳಿಗೆ ಹೋಗುತ್ತಿದ್ದರೂ ಪದ್ಮಾ ಕಿಡ್ನಿಕೇರ್ ಸೆಂಟರ್ ಹಾಗೂ ದ್ವಾರಕಾ ಆಸ್ಪತ್ರೆಗಳು ಕಸವನ್ನು ರಸ್ತೆಗೆ ಎಸೆಯುತ್ತಿದ್ದವು. ವೈದ್ಯಕೀಯ ತ್ಯಾಜ್ಯ ಮತ್ತು ಜೈವಿಕ ತ್ಯಾಜ್ಯ ಅಪಾಯಕಾರಿಯಾಗಿದ್ದು, ಅದನ್ನು ಮತ್ತೆ ಕಸದ ವಾಹನಕ್ಕೆ ತುಂಬಲು ಪೌರಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದರು.
‘ಕಸವನ್ನು ರಸ್ತೆಗೆ ಹಾಕಬೇಡಿ. ಪಾಲಿಕೆ ವಾಹನಕ್ಕೆ ನೀಡುವಂತೆ ಅನೇಕ ಬಾರಿ ತಿಳಿಸಿ ಹೇಳಲಾಗಿತ್ತು. ಆದರೂ ಕೆಲವು ಆಸ್ಪತ್ರೆಗಳು ರಸ್ತೆಗೆ ಕಸ ಸುರಿಯುತ್ತಿವೆ. ಹೀಗಾಗಿ ಕಸವನ್ನು ಆಸ್ಪತ್ರೆಯ ಮುಂದೆ ಸುರಿದು, ದಂಡ ಹಾಕುವ ಪ್ರಕ್ರಿಯೆ ಆರಂಭಿಸಿದ್ದೇವೆ. ಕಸ ಸುರಿಯುವ ಕೆಲಸ ಮುಂದುವರಿಯಲಿದೆ. ನಗರದಾದ್ಯಂತ ಈ ಕಾರ್ಯ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಸದ್ಯ ಈ ಎರಡೂ ಆಸ್ಪತ್ರೆಗೆಗಳಿಗೆ ದಂಡ ವಿಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈದ್ಯಕೀಯ ತ್ಯಾಜ್ಯ ವಿಲೇವಾರಿ ಅತ್ಯಂತ ಅಪಾಯಕಾರಿ ಎಂಬುದು ತಿಳಿದೂ ಕೆಲ ಆಸ್ಪತ್ರೆಗಳು ಕಸದ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಆದ್ದರಿಂದಲೇ ಇಂಥ ಮಾರ್ಗ ಅನುಸರಿಸಲಾಯಿತು. ಇದು ಪ್ರತಿ ಆಸ್ಪತ್ರೆಗಳಿಗೆ ಎಚ್ಚರಿಕೆಯಾಗಲಿದೆ. -ಮಂಜುನಾಥ್ ಪಾಲಿಕೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.