ADVERTISEMENT

ಬಳ್ಳಾರಿ | ₹300 ಹಣಕ್ಕಾಗಿ ವ್ಯಕ್ತಿಯ ಕೊಲೆ: ಇಬ್ಬರು ಆರೋಪಿಗಳಿಂದ ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 4:23 IST
Last Updated 10 ಸೆಪ್ಟೆಂಬರ್ 2025, 4:23 IST
ಕೃತ್ಯ ನಡೆದ ಸ್ಥಳದ ಮಹಜರ್‌ ನಡೆಸಲು ಎಪಿಎಂಸಿ ಠಾಣೆ ಪೊಲೀಸರು ಆರೋಪಿಗಳನ್ನು ಕರೆದೊಯ್ದರು
ಕೃತ್ಯ ನಡೆದ ಸ್ಥಳದ ಮಹಜರ್‌ ನಡೆಸಲು ಎಪಿಎಂಸಿ ಠಾಣೆ ಪೊಲೀಸರು ಆರೋಪಿಗಳನ್ನು ಕರೆದೊಯ್ದರು   

ಬಳ್ಳಾರಿ: ನಗರದ ರೂಪನಗುಡಿ ರಸ್ತೆಯ ಹಳೇ ರೈಸ್‌ಮಿಲ್‌ ಎದುರು ನಡೆದಿದ್ದ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.   

‘ಮದ್ಯ ಖರೀದಿಗೆ ₹300 ಕೊಡದೇ ಇದ್ದದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ್ದಾಗಿ ಆರೋಪಿಗಳಾದ ಬಾಲರಾಜ್‌ (22), ಹನುಮಂತ (20) ತಪ್ಪೊಪ್ಪಿಕೊಂಡಿದ್ದಾರೆ.  ಮೃತನ ಸುಳಿವು ಇನ್ನೂ ಪತ್ತೆಯಾಗಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದರು.

‘ಮದ್ಯ ಸೇವಿಸಿ ಅಂಗಡಿಯೊಂದರ ಎದುರು ಮಲಗಿದ್ದ ವ್ಯಕ್ತಿಯನ್ನು ಆರೋಪಿಗಳು ಎಬ್ಬಿಸಿ ₹300 ಹಣ ಕೇಳಿದ್ದರು. ಇದರಿಂದ ಕುಪಿತಗೊಂಡು ಆತ ರೇಗಾಡಿದ್ದ. ಆಗ ವ್ಯಕ್ತಿಯನ್ನು ಅಲ್ಲಿಂದ ಬೇರೆ ಕಡೆಗೆ ಎಳೆದೊಯ್ದಿದ್ದ ಇಬ್ಬರೂ ಆರೋಪಿಗಳು ಹಣ ಕೊಡುವಂತೆ ಪೀಡಿಸಿದ್ದರು. ಹಣ ಕೊಡದೇ ಇದ್ದಾಗ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಅದಾಗಲೇ ಪಾನಮತ್ತರಾಗಿದ್ದ ಆರೋಪಿಗಳು ಮತ್ತೆ ಕುಡಿಯುವ ಉದ್ದೇಶಕ್ಕೆ ₹300 ಕೇಳಿದ್ದರು ಎನ್ನಲಾಗಿದೆ. ಸಿಸಿ ಕ್ಯಾಮೆರಾಗಳಲ್ಲಿನ ಚಲನವಲನ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಶೋಭಾರಾಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.