ADVERTISEMENT

2025 ಹಿಂದಣ ಹೆಜ್ಜೆ | ಬಳ್ಳಾರಿ ಪಾಲಿಗೆ ಕಹಿಯಲ್ಲೇ ಸವೆದ ವರ್ಷ

ಇ.ಡಿ ದಾಳಿ, ಗುಂಡೇಟು, ಅಕ್ರಮ ಅದಿರು ಸಾಗಣೆ ಆರೋಪ, ಕಸಾಪ ಗೊಂದಲ| ವಿವಾದಗಳದ್ದೇ ಮೇಲಾಟ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 5:46 IST
Last Updated 30 ಡಿಸೆಂಬರ್ 2025, 5:46 IST
ಮೆಗಾ ಡೇರಿಯನ್ನು ಬಳ್ಳಾರಿಯಲ್ಲೇ ಉಳಿಸಬೇಕು ಎಂದು ಆಗ್ರಹಿಸಿ ಬಳ್ಳಾರಿಯ ರೈತ, ನಾಗರಿಕ ಸಂಘಟನೆಗಳು ನಡೆಸಿದ್ದ ಪ್ರತಿಭಟನೆ 
ಮೆಗಾ ಡೇರಿಯನ್ನು ಬಳ್ಳಾರಿಯಲ್ಲೇ ಉಳಿಸಬೇಕು ಎಂದು ಆಗ್ರಹಿಸಿ ಬಳ್ಳಾರಿಯ ರೈತ, ನಾಗರಿಕ ಸಂಘಟನೆಗಳು ನಡೆಸಿದ್ದ ಪ್ರತಿಭಟನೆ    

ಬಳ್ಳಾರಿ: ಚಾರಿತ್ರಿಕ, ರಾಜಕೀಯ, ಭೌಗೋಳಿಕವಾಗಿ ಪ್ರಧಾನ ಪಾತ್ರ ನಿರ್ವಹಿಸುವ ಬಳ್ಳಾರಿಯು 2025ನೇ ವರ್ಷವನ್ನು ಕಹಿಯಲ್ಲೇ ಸವೆಸಿದೆ. ಅಂತ್ಯಕ್ಕೆ ಬಂದು ನಿಂತಿರುವ ವರ್ಷವನ್ನು ಹಿಂದಿರುಗಿ ನೋಡಿದರೆ ಹಲವು ವಿವಾದ, ಗೊಂದಲ, ಅನಾಪೇಕ್ಷಣೀಯ ಘಟನೆಗಳೇ ಗೋಚರಿಸುತ್ತವೆ. 

ಜಿಲ್ಲೆಯ ರಾಜಕಾರಣಿಗಳಿಗೂ ತನಿಖಾ ಸಂಸ್ಥೆಗಳಿಗೂ ಗಂಟು ಬಿದ್ದಿರುವ ನಂಟು ಈ ವರ್ಷವೂ ಬಿಡುಗಡೆಯಾಗಲಿಲ್ಲ. ಅಕ್ರಮ ಗಣಿಗಾರಿಕೆ ಬಹುತೇಕ ನಿಂತಿದ್ದರೂ ಅದರ ಪರಿಣಾಮಗಳು ಕಾಣಿಸುತ್ತಲೇ ಇವೆ. ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಹೊರಗೆ ಬರಬೇಕಾಯಿತು. ಅಕ್ರಮ ಅದಿರು ಸಾಗಣೆಯ ಆರೋಪಗಳು ಕೇಳಿಬಂದವು. 

ಬಳ್ಳಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವೂ ರಾಜಕೀಯ ಅಖಾಡವಾಗಿ ಮಾರ್ಪಟ್ಟಿತು. ಜಿಲ್ಲೆಯ ರಾಜಕೀಯ ರಾಜ್ಯದಲ್ಲಿ ಸದ್ದು ಮಾಡಿತು. ಆಪ್ತಮಿತ್ರರಾಗಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಪರಸ್ಪರ ಕಿತ್ತಾಡಿಕೊಂಡರು. ಬಳಿಕ ಒಂದಾದರು. 

ADVERTISEMENT

ಕಂಪ್ಲಿ–ಗಂಗಾವತಿ ಸೇತುವೆ ಈ ವರ್ಷವೂ ಮುಳುಗಿತು. ಆದರೆ, ಬದಲಿ ಸೇತುವೆ ನಿರ್ಮಾಣಕ್ಕೆ ಈ ವರ್ಷವೂ ಯಾವುದೇ ನಿರ್ಧಾರ ಆಗಲಿಲ್ಲ. 

ಇದೆಲ್ಲದರ ನಡುವೆಯೂ, ಜಿಲ್ಲೆಗೆ ಕೆಲವೊಂದು ಖುಷಿಯ ಕ್ಷಣಗಳೂ ದಕ್ಕಿದವು. ಕೇಂದ್ರ ಸಾಹಿತ್ಯ ಅಕಾಡೆಮಿಯಂಥ ಮೇರು ಪುರಸ್ಕಾರ ಬಳ್ಳಾರಿಯವರೇ ಆದ ಲೇಖಕ ಕೆ.ಶಿವಲಿಂಗಪ್ಪ ಹಂದಿಹಾಳು ಅವರಿಗೆ ಲಭಿಸಿತು. ಪ್ರೊ. ಕೋರಿಶೆಟ್ಟರ್ ಅಂಥ ಇತಿಹಾಸ ಸಂಶೋಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. 

ಕೆಐಒಸಿಎಲ್‌ ತನ್ನ ದೇವದಾರಿ ಗಣಿಯನ್ನು ಆರಂಭಿಸಲು ಸಾಧ್ಯವೇ ಆಗಲಿಲ್ಲ. 

2025ರ ಪ್ರಮುಖ ಘಟನಾವಳಿಗಳು  

ಜ.16: ತೋರಣಗಲ್‌ ಪೋಕ್ಸೊ ಪ್ರಕರಣದ ಆರೋಪಿ ಮಂಜುನಾಥ ಕಾಲಿಗೆ ಪೊಲೀಸರ ಗುಂಡು‌

ಜ.22: ತಮ್ಮ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಪಿತೂರಿ ಮಾಡುತ್ತಿರುವುದಾಗಿ ಶ್ರೀರಾಮುಲು ಆರೋಪ. 

ಜ. 29: ಜಿಲ್ಲಾಸ್ಪತ್ರೆ ವೈದ್ಯನ ಅಪಹರಿಸಿದ್ದ ಏಳು ಮಂದಿ ಸೆರೆ. ಒಬ್ಬನ ಕಾಲಿಗೆ ಗುಂಡೇಟು. 

ಫೆ.20: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ಪ್ರಮಾಣಪತ್ರದಲ್ಲಿ ನಡೆದಿದ್ದ ಅಕ್ರಮದ ತನಿಖೆಗೆ ಸಮಿತಿ ರಚನೆ. 

ಮಾ. 02:  ಹಗಲು ವೇಷ ಕಲಾವಿದ ಕೆ. ಶಂಕ್ರಪ್ಪಗೆ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ

ಮಾ. 2: ಜಿಲ್ಲೆಯಲ್ಲಿ ಕೋಳಿ ಜ್ವರ ಪ್ರಕರಣಗಳು ಪತ್ತೆ. ‌7 ಸಾವಿರ ಕೋಳಿಗಳ ವಧೆ. ಕೋಳಿ ಫಾರಂ, ಕೋಳಿ ವ್ಯಾಪಾರಿಗಳು, ಮೊಟ್ಟೆ ಉದ್ಯಮ ತತ್ತರ. 

ಏ.3: ರಾಜ್ಯದ ಕಬ್ಬಿಣದ ಅದಿರಿನ ವಾರ್ಷಿಕ ಏಕೀಕೃತ ಉತ್ಪಾದನೆ ಮಿತಿಯನ್ನು 57 ದಶಲಕ್ಷ ಟನ್‌ಗೆ ಹೆಚ್ಚಿಸಲು ಸುಪ್ರೀಂ ಕೋರ್ಟ್‌ಗೆ ಸಿಇಸಿ ಶಿಫಾರಸು. 

ಏ.9: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ. ಅವಿಭಜಿತ ಜಿಲ್ಲೆಗೆ 27ನೇ ಸ್ಥಾನ
ಶೇ 64.41ರಷ್ಟು ಫಲಿತಾಂಶ 

ಏ. 22: ₹1.75 ಲಕ್ಷ  ಲಂಚ ಪಡೆಯುತ್ತಿರುವಾಗಲೇ ಸಿರುಗುಪ್ಪ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಲೋಕಾಯುಕ್ತ ಬಲೆಗೆ. ಬಳಿಕ ಅಮಾನತು. 

ಏ. 25:ಜೋಳ ಖರೀದಿಗೆ ಬಳ್ಳಾರಿ ಜಿಲ್ಲೆಗೆ ವಿಧಿಸಲಾಗಿರುವ ಮಿತಿ ತೆರವು ಮಾಡಬೇಕು ಎಂದು ಆಗ್ರಹಿಸಿ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ. ಜಮೀರ್‌ ಅಹಮದ್‌ ಸಂಧಾನ. ರಾತ್ರಿ 9ರ ಹೊತ್ತಿಗೆ ರೈತರ ಧರಣಿ ಅಂತ್ಯ

ಏ. 30: ಬಳ್ಳಾರಿ ವಲಯದ ಐಜಿಪಿಯಾಗಿದ್ದ ಲೋಕೇಶ್ ಕುಮಾರ್ ಸೇವಾ ನಿವೃತ್ತಿ

ಮೇ 3:  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ. ಬಳ್ಳಾರಿಗೆ ನಿರಾಸೆ. ಶೇ 59.86ರ ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ

ಮೇ 6: ಅಕ್ರಮ ಗಣಿಗಾರಿಕೆ ಅಪರಾಧಿ ಜನಾರ್ದನ ರೆಡ್ಡಿ ಬಂಧನ. ಚಂಚಲಗೂಡ ಜೈಲಿಗೆ 

ಮೇ 15: ಸಿರುಗುಪ್ಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದ ಡಕಾಯಿತ ಕಾಲಿಗೆ ಗುಂಡು ಹೊಡೆದು ಡಕಾಯಿತನ ಸೆರೆ

ಮೇ. 16: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಬಳ್ಳಾರಿಯಲ್ಲಿ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳನ್ನು ವರ್ಗೀಕರಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿಯು (ಸಿಇಸಿ) ಸುಪ್ರೀಂ ಕೋರ್ಟ್‌ಗೆ ವರದಿ

ಜೂನ್ 11: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಬಿ. ನಾಗೇಂದ್ರ, ಸಂಸದ ತುಕಾರಾಂ, ಅನ್ನಪೂರ್ಣ, ನಾರಾ ಭರತ್‌ ರೆಡ್ಡಿ, ಜೆ.ಎನ್‌ ಗಣೇಶ್‌ ನಿವಾಸಗಳ ಮೇಲೆ ಇಡಿ ದಾಳಿ. 

ಜೂನ್‌ 18: ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ವು ಬಳ್ಳಾರಿಯ  ಲೇಖಕ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ ಬುಕ್‌’ ಮಕ್ಕಳ ಕಥಾಸಂಕಲನಕ್ಕೆ ಲಭಿಸಿತು. 

ಜೂನ್‌ 18: ಕುರುಗೋಡಿನ ದಮ್ಮೂರು ಗ್ರಾಮದ ಜಮೀನಿನಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮಹಾರಾಷ್ಟ್ರದ ಕುರಿಗಾಹಿ ಕುಟುಂಬದ ಮಹಿಳೆ, ಮೂವರು ಪುತ್ರಿಯರ ಜೊತೆಗೆ ಆತ್ಮಹತ್ಯೆ ಮಾಡಿಕೊಂಡರು. 

ಜುಲೈ 2: ಕೆ. ಎನ್‌.  ಬಸವರಾಜ್‌ ಬಳ್ಳಾರಿ ವಲಯದ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿಯೋಜನ.ಎ. ಹಿಂದಿನ ಡಿಸಿಎಫ್‌ ಸಂದೀಪ್‌ ಸೂರ್ಯವಂಶಿ ಶಿರಸಿಗೆ ವರ್ಗ. 

ಜುಲೈ 9: ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲಿ ಅಕ್ರಮ ನಡೆದ ಆರೋಪ. ಶಾಲಾ ಶಿಕ್ಷಣ ಇಲಾಖೆಯಿಂದ ಹಲವರಿಗೆ ನೋಟಿಸ್‌ ಜಾರಿ. 

ಜುಲೈ 11: ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ. 

ಜುಲೈ 15:  ವರ್ತಿಕಾ ಕಟಿಯಾರ್‌ ಬಳ್ಳಾರಿ ವಲಯ ಡಿಐಜಿಯಾಗಿ ನಿಯೋಜನೆ. 

ಜುಲೈ 27: ಮುನಿಸು ಜಗಳ ಮರೆತು ಒಂದಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು. ಬಳ್ಳಾರಿಯಲ್ಲಿ ಒಟ್ಟಾಗಿ ‘ಜೂನಿಯರ್‌’ ಸಿನಿಮಾ ವೀಕ್ಷಣೆ. 

ಜುಲೈ 29: ಬಳ್ಳಾರಿ ನಗರದ ಬಾಪೂಜಿ ನಗರದಲ್ಲಿ ಕಸದ ವಾಹನ ಹರಿದು ಮಗು ಸಾವು

ಆ. 26: ಬಳ್ಳಾರಿ ಪಾಲಿಕೆಗೆ ಮಂಜುನಾಥ್‌ ನೂತನ ಆಯುಕ್ತ
ಆ. 28: ‌ಅಕ್ರಮವಾಗಿ ನಡೆಯುತ್ತಿದೆ ಎಂಬ ಕಾರಣ ನೀಡಿ, ನಗರದ ಎರಡು ಕ್ಲಬ್‌ಗಳ ಬಾಗಿಲು ಬಂದ್‌ ಮಾಡಿಸಿದ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ

ಸೆ. 9: ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಅವರ ವರ್ಗಾವಣೆ. ನೂತನ ಜಿಲ್ಲಾಧಿಕಾರಿಯಾಗಿ  ನಾಗೇಂದ್ರಪ್ರಸಾದ್‌ ಕೆ. ನಿಯೋಜನೆ. 
ಸೆ. 13: ಬಳ್ಳಾರಿ ನಗರದಲ್ಲಿ ಮಹಿಳೆಯಿಂದ ಒಂದೂವರೆ ತಿಂಗಳ ಮಗು ಕಳ್ಳತನ. ಪ್ರಕರಣ ದಾಖಲು. ಒಂದೇ ದಿನದಲ್ಲೇ ನಾಲ್ವರು ಆರೋಪಿಗಳ ಬಂಧನ. ತಾಯಿ ಮಡಿಲು ಸೇರಿದ ಮಗು. 

ಸೆ. 13:  ಹಾಸನದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ದುರ್ಘಟನೆ: ಬಳ್ಳಾರಿ ಮೂಲದ ಎಂಜಿನಿಯರಿಂಗ ವಿದ್ಯಾರ್ಥಿ ಪ್ರವೀಣ್‌ ಸಾವು. 

ಸೆ. 15:  ಬಳ್ಳಾರಿ ಮಹಾನಗರ ಪಾಲಿಕೆಯ 11ನೇ ವಾರ್ಡ್‌ನ ಬಿಜೆಪಿ ಸದಸ್ಯ ಗೋವಿಂದರಾಜು ಮತ್ತು ಆವರ ತಂದೆ ಮೊಟ್ಟೆ ವ್ಯಾಪಾರಿ ಕುಮಾರಸ್ವಾಮಿ ಅವರ ಮನೆಯ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳ ದಾಳಿ.  

ಸೆ. 17:  ಜಿಂದಾಲ್‌ನ ಕಬ್ಬಿಣ ಕಾರ್ಖಾನೆಯ (ಕೋಲ್ಡ್ ರೋಲ್ಡ್ ಗ್ರೇನ್ ಓರಿಯೆಂಟೆಡ್ ಸ್ಟೀಲ್ ಪ್ಲಾಂಟ್) ಸ್ಥಾಪನೆಗೆಂದು ಕರೆದಿದ್ದ ಪರಿಸರ ಆಲಿಕೆ ಸಭೆಗೆ ಕುಡುತಿನಿ ಭೂಸಂತ್ರಸ್ತ ಹೋರಾಟಗಾರರಿಂದ ವಿರೋಧ.  

ಅ.17:  ದೇವದಾರಿ ಗಣಿಗಾರಿಕೆ ನಡೆಸಲು, ರಸ್ತೆ ಸರ್ವೆ. ಸ್ಥಳೀಯರು ಮತ್ತು ಹೊರಗಿನವರ ನಡುವೆ ಘರ್ಷಣೆ

ಅ. 16: ಶಾಸಕ ನಾಗೇಂದ್ರ ಅಪ್ತ ಕೆ. ನಾಗರಾಜ್‌ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ. 


ಅ. 19: ದೇವದಾರಿ ಗಣಿಗೆ ಅಕ್ರಮವಾಗಿ ಎಫ್‌ಆರ್‌ಎ (ಅರಣ್ಯ ಹಕ್ಕು) ಪ್ರಮಾಣ ಪತ್ರ  ಪಡೆದಿರುವುದು ಬಯಲು. 

ಅ. 23:  ಇಸ್ಪೀಟ್‌ ಅಡ್ಡೆಗಳ ಮೇಲೆ ಪೊಲೀಸರ ದಾಳಿ. 1136 ಮಂದಿ ಮೇಲೆ ಪ್ರಕರಣ ₹17,31,140 ದಂಡ.  ‌

ಅ. 25:  ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳ್ಳತನ ಪ್ರಕರಣ ಸಂಬಂಧ ಬಳ್ಳಾರಿಯ ರೊದ್ದಂ ಜ್ಯುವೆಲರಿ ಮಾಲೀಕ ಗೋವರ್ಧನ್‌ ಮನೆ, ಮಳಿಗೆಯಲ್ಲಿ ಕೇರಳದ ಎಸ್‌ಐಟಿ ಶೋಧ. 

ಅ.31: ಬಳ್ಳಾರಿಯವರಾದ ಪ್ರೊ. ಕೋರಿಶೆಟ್ಟರ್, ಶಾಂತಿಬಾಯಿಗೆ ರಾಜ್ಯೋತ್ಸವ ಪ್ರಶಸ್ತಿ

ನ.3: ಸಂಡೂರು ತಾಲೂಕಿನ ಬನ್ನಿಹಟ್ಟಿ ರೈಲ್ವೆ ಸೈಡಿಂಗ್ಸ್‌ ಮೂಲಕ ಕಬ್ಬಿಣದ ಅದಿರು ಸಾಗಣೆ ಮಾಡುತ್ತಿದ್ದ ಆರೋಪ; ಪಿಸಿಆರ್‌ ದಾಖಲಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. 

ನ. 13: ಇನಾಂ ಭೂಮಿಯ ಹಕ್ಕು ಬದಲಾವಣೆ ಆರೋಪದ ಮೇಲೆ ಬಳ್ಳಾರಿಯ ಉಪ ವಿಭಾಗಾಧಿಕಾರಿ ಪ್ರಮೋದ್‌, ಅಮಾನತುಗೊಂಡಿದ್ದ ತಹಶೀಲ್ದಾರ್‌ ವಿಶ್ವನಾಥ್‌ ಮತ್ತು ಇಬ್ಬರು  ಸ್ವಾಮೀಜಿಗಳ ಮೇಲೆ ಲೋಕಾಯುಕ್ತ ಎಫ್‌ಐಆರ್‌. 

ನ.15: ಬಳ್ಳಾರಿಯ 24ನೇ ಮೇಯರ್‌ ಆಗಿ ಪಿ. ಗಾದೆಪ್ಪ ಆಯ್ಕೆ. 

ನ.27: ಬಳ್ಳಾರಿಯ ನೂತನ ಉಪ ವಿಭಾಗಾಧಿಕಾರಿಯಾಗಿ ರಾಜೇಶ್‌ ಎಚ್‌.ಡಿ ನಿಯೋಜನೆ. ಡಿ. 2ರಂದು ಅಧಿಕಾರ ಸ್ವೀಕಾರ   

ನ,. 28: ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಬೈಪಾಸ್ ಉದ್ಘಾಟನೆ ಮಾಡಿದ ಸಂಸದ ಇ. ತುಕಾರಾಂ. 

ಡಿ. 12: ಪಾಲಿಕೆಯ 24ನೇ ವಾರ್ಡ್‌ನ ಸದಸ್ಯ ಮೋತ್ಕರ್‌ ಶ್ರೀನಿವಾಸ್‌ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ. 

ಡಿ. 15: ಚೆನ್ನೈಯಿಂದ ಬಳ್ಳಾರಿಗೆ 40 ಬೈಕ್‌ಗಳನ್ನು ಹೊತ್ತು ತಂದಿದ್ದ ಕಂಟೇನರ್ ಬೈಪಾಸ್‌ ರಸ್ತೆ ಬಳಿ ಬೈಕ್‌ಗಳ ಸಮೇತ ಬೆಂಕಿಗೆ ಆಹುತಿ. ₹60 ಲಕ್ಷ ನಷ್ಟ. 

ಡಿ. 19:  ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೆರೆ 

ಡಿ. 25:  ಕೊಳಗಲ್‌ನ ಎರ್ರಿತಾತನ ಮಠದ ಎರಡನೇ ಪೀಠಾಧಿಪತಿ ಎರೆಪ್ಪ ತಾತನವರ ಪತ್ನಿ ರತ್ನಮ್ಮವ್ವ ನಿಧನ. ಸಮಾಧಿ ವಿಚಾರವಾಗಿ ಗ್ರಾಮದಲ್ಲಿ ಗೊಂದ. ಎರಡು ದಿನಗಳ ಬಳಿಕ ಡಿ. 27ಕ್ಕೆ ಅಂತ್ಯಕ್ರಿಯೆ. 

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ನಿವಾಸದ ಮೇಲೆ ನಡೆದಿದ್ದ ಇ.ಡಿ ದಾಳಿ 
ಬಳ್ಳಾರಿ ಜಿಲ್ಲೆಯಲ್ಲಿ ಮಿತಿ ಇಲ್ಲದೇ ಜೋಳ ಖರೀದಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ನಡೆದಿದ್ದ ಆಹೋರಾತ್ರಿ ಪ್ರತಿಭಟನೆ 

ಕಸಾಪ ವಿವಾದ: ನಡೆಯದ ಸಮ್ಮೇಳನ  ಏ. 20: ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ (ಬೈಲಾ) ತಿದ್ದುಪಡಿ ಉದ್ದೇಶ ಹೊಂದಿದ್ದ ಸರ್ವ ಸದಸ್ಯರ ಸಾಮಾನ್ಯ ಸಂಡೂರಿನಲ್ಲಿ ಏಪ್ರಿಲ್ 27ಕ್ಕೆ ನಿಗದಿ ಭುಗಿಲೆದ್ದ ವಿವಾದ. ಏ. 22: ಕಸಾಪ ಸಭೆ ಮುಂದೂಡಿಕೆ. ಜೂನ್‌ 23:   ಸಂಡೂರಿನಲ್ಲಿ ಜೂನ್‌ 29ಕ್ಕೆ ಕಸಾಪ ವಾರ್ಷಿಕ ಸಾಮಾನ್ಯ ಸಭೆ ನಿಗದಿ. ಪೊಲೀಸ್‌ ಇಲಾಖೆ ಆಕ್ಷೇಪ. ಬಳಿಕ ಅದೇ ದಿನ ಬಳ್ಳಾರಿಯ ಹೋಟೆಲ್‌ನಲ್ಲಿ ಸಭೆ ನಿಗದಿ.  ಜೂನ್‌ 29:  88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಮುಷ್ತಾಕ್‌ ಆಯ್ಕೆ   ಕಸಾಪದಲ್ಲಿ ನಡೆಯುತ್ತಿರುವ ಬೆಳವಣಿಗೆ ತನಿಖೆಗಳಿಂದಾಗಿ ಸಮ್ಮೇಳನ ವಿಳಂಬವಾಗುತ್ತಿದೆ ಎಂದು ಸರ್ಕಾರದ ಉತ್ತರ. 

ಮತ್ತೆ ಬಾಣಂತಿಯರ ಸಾವು  ಫೆ. 1: ಬಿಎಂಸಿಆರ್‌ಸಿ–ವಿಮ್ಸ್‌ ನಲ್ಲಿ ಮಹಾದೇವಿ (21) ಎಂಬ ಬಾಣಂತಿ ಸಾವು. ಸಂಬಂಧಿಕರ ಆಕ್ರೋಶ  ಫೆ.4: ಬಿಎಂಸಿಆರ್‌ಸಿಯಲ್ಲಿ ತೆಕ್ಕಲಕೋಟೆಯ ರೇಷ್ಮಾ ಗೌಸ್‌ಫೀರ್ (20) ಎಂಬ ಬಾಣಂತಿ ಸಾವು.  ಫೆ.9: ಜಿಲ್ಲಾಸ್ಪತ್ರೆಯಲ್ಲಿ ಕಕ್ಕಬೇವಿನಹಳ್ಳಿಯ ಗಂಗಮ್ಮ (20) ಎಂಬ ಬಾಣಂತಿ ಸಾವು. 

ಮೆಗಾ ಡೇರಿಗಾಗಿ ಒಂದಾದ ಜಿಲ್ಲೆ ಬಳ್ಳಾರಿಗೆಂದು ಮಂಜೂರಾಗಿದ್ದ ಮೆಗಾಡೇರಿಯನ್ನು ರಾಬಕೊವಿಯ ಈ ಹಿಂದಿನ ಆಡಳಿತ ಮಂಡಳಿಯು ವಿಜಯನಗರಕ್ಕೆ ಸ್ಥಳಾಂತರ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಜಿಲ್ಲೆಯಲ್ಲಿ ಹೋರಾಟಗಳು ಆರಂಭವಾದವು. ಜಿಲ್ಲೆಯ ನಾಗರಿಕ ರೈತ ಸಂಘಟನೆಗಳು ಇದಕ್ಕೆ ಒಂದಾದವು. ಅಂತಿಮವಾಗಿ ಇದು ಆಡಳಿತ ಮಂಡಳಿಯ ಬದಲಾವಣೆಗೂ ಕಾರಣವಾಯಿತು. ಜುಲೈ 10ರಂದು ನಡೆದ ಚುನಾವಣೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರು. ಜುಲೈ 25ರಂದು ಹಿಟ್ನಾಳ್‌ ರಾಬಕೊವಿ ಅಧ್ಯಕ್ಷರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.