ADVERTISEMENT

ಬಳ್ಳಾರಿ | ದರ ಕುಸಿತ: ಭತ್ತ ಬೆಳೆಗಾರರಿಗೆ ಸಂಕಷ್ಟ

₹500 ಪ್ರೋತ್ಸಾಹ ಧನ, ಶಾಶ್ವತ ಖರೀದಿ ಕೇಂದ್ರದ ಕೂಗು

ಆರ್. ಹರಿಶಂಕರ್
Published 17 ಡಿಸೆಂಬರ್ 2024, 4:47 IST
Last Updated 17 ಡಿಸೆಂಬರ್ 2024, 4:47 IST
ಮಳೆಗೆ ಭತ್ತದ ಬೆಳೆ ನೆಲಕ್ಕೊರಗಿರುವುದು (ಸಾಂದರ್ಭಿಕ ಚಿತ್ರ)
ಮಳೆಗೆ ಭತ್ತದ ಬೆಳೆ ನೆಲಕ್ಕೊರಗಿರುವುದು (ಸಾಂದರ್ಭಿಕ ಚಿತ್ರ)   

ಬಳ್ಳಾರಿ: ರಾಜ್ಯದಾದ್ಯಂತ ಈ ಬಾರಿ ಭತ್ತದ ಬೆಳೆ ಚೆನ್ನಾಗಿ ಆಗಿತ್ತು. ಉತ್ತಮ ಇಳುವರಿ ಬಂದು ಲಾಭ ಕಾಣುವ ನಿರೀಕ್ಷೆಯಲ್ಲಿದ್ದ ರೈತರಿಗೆ ನವೆಂಬರ್‌ ಮಧ್ಯಭಾಗದಲ್ಲಿ ಸುರಿದ ಮಳೆ, ಡಿಸೆಂಬರ್‌ ಆರಂಭದಲ್ಲಿ ಬಂದ ‘ಪೆಂಜಲ್‌’ ಚಂಡಮಾರುತ ಮತ್ತು ದರ ಕುಸಿತದಿಂದ ನಿರಾಶೆಯಾಗಿದೆ. 

ರಾಜ್ಯದಲ್ಲಿ ಸಾಮಾನ್ಯವಾಗಿ ‘ಸೋನಾ ಮಸೂರಿ’, ‘ಆರ್‌ಎನ್‌ಆರ್‌’ ಸೇರಿದಂತೆ ವಿವಿಧ ರೀತಿಯ ಭತ್ತದ ತಳಿಗಳನ್ನು ಬೆಳೆಯಲಾಗುತ್ತದೆ. ಇವು, ಎಕರೆಗೆ ಸರಾಸರಿ 28ರಿಂದ 35 ಕ್ವಿಂಟಾಲ್‌ ಫಸಲು ನೀಡುತ್ತವೆ. ಈ ಸಲ ರಾಜ್ಯದ ಬಹುತೇಕ ಕಡೆಗಳಲ್ಲಿ ಕಟಾವು ಹಂತದಲ್ಲೇ ಎರಡು ಮಳೆ ಆಯಿತು. ಹೀಗಾಗಿ ಕೆಲವು ಜಿಲ್ಲೆಗಳಲ್ಲಿ ಬೆಳೆ ಬಾಗಿದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಬೆಳೆ ನೆಲಕ್ಕೊರಗಿ ಮೊಳೆಕೆಯೊಡೆದು ಹಾನಿ ಸಂಭವಿಸಿದೆ. ಪರಿಣಾಮವಾಗಿ ಬಹುತೇಕ ಜಿಲ್ಲೆಗಳಲ್ಲಿ ಇಳುವರಿ ಕುಂಟಿತವಾಗಿದೆ. 

ಇನ್ನೊಂದೆಡೆ, 2023–24ನೇ ಸಾಲಿನಲ್ಲಿ ಕ್ವಿಂಟಾಲ್‌ ಭತ್ತಕ್ಕೆ ₹2183– ₹2,203 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಿದ್ದ ಕೇಂದ್ರ ಸರ್ಕಾರ ಈ ಬಾರಿ ₹2,300–₹2,320 ನಿಗದಿ ಮಾಡಿದೆ. ಅದೂ, ಪ್ರತಿ ಎಕರೆಗೆ ಕನಿಷ್ಠ 25 ಕ್ವಿಂಟಾಲ್‌, ಪ್ರತಿ ರೈತನಿಂದ ಗರಿಷ್ಠ 50 ಕ್ವಿಂಟಾಲ್‌ನಂತೆ ರಾಜ್ಯದಾದ್ಯಂತ ಒಟ್ಟು  2.24 ಲಕ್ಷ ಮೆಟ್ರಿಕ್‌ ಟನ್‌ ಮಾತ್ರ ಖರೀದಿ ಮಾಡುತ್ತಿದೆ.

ADVERTISEMENT

ಹೆಚ್ಚಿನ ಪ್ರಮಾಣದ ಭತ್ತ ಬೆಳೆದವರು ಮಾರುಕಟ್ಟೆಯಲ್ಲೇ ಭತ್ತ ಮಾರಾಟ ಮಾಡಬೇಕು. ಕಳೆದ ವರ್ಷ ಮಾರುಕಟ್ಟೆಯಲ್ಲಿ ₹3000ರ ವರೆಗೆ ದರ ಇತ್ತು. ಈ ವರ್ಷ ಕ್ವಿಂಟಾಲ್‌ಗೆ ₹1800–₹2000 ವರೆಗೆ ಇದೆ. ಇದು ರೈತರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ.  

‘ಒಂದು ಎಕರೆಯಲ್ಲಿ ಭತ್ತ ಬೆಳೆಯಬೇಕಿದ್ದರೆ ಸಾಮಾನ್ಯವಾಗಿ ₹38–42 ಸಾವಿರ ಖರ್ಚು ಬರುತ್ತದೆ. ಈ ಬಾರಿ ಬೆಳೆ ಬಾಗಿರುವುದರಿಂದ ಕಟಾವು ಯಂತ್ರ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗಿ ಬಂದಿದ್ದು, ಯಂತ್ರದ ಬಾಡಿಗೆ ಹೊರೆಯಾಗುತ್ತಿದೆ. ಮಳೆಯಿಂದಾಗಿ ಒಂದಷ್ಟು ಬೆಳೆ ಹಾಳಾಗಿದೆ. ಇನ್ನೊಂದೆಡೆ, ಫಸಲಿನ ಗುಣಮಟ್ಟವೂ ಕುಸಿದೆ. ಎಕರೆಗೆ ಕನಿಷ್ಠ 4ರಿಂದ 7 ಕ್ವಿಂಟಾಲ್‌ ಇಳುವರಿ ಕುಂಟಿತವಾಗಿದೆ. 30–35 ಕ್ವಿಂಟಾಲ್‌ ಉತ್ಪಾದನೆಯಾಗಬೇಕಿದ್ದ ಜಾಗದಲ್ಲಿ 25–28 ಕ್ವಿಂಟಾಲ್‌ ಉತ್ಪಾದನೆಯಾಗುತ್ತಿದೆ’ ಎನ್ನುತ್ತಾರೆ ರೈತರು. 

‘ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ ಸದ್ಯ ಉತ್ಪಾದನಾ ವೆಚ್ಚ ಎಕರೆಗೆ ₹42 ಸಾವಿರ ದಾಟಿದೆ. ಇನ್ನೊಂದೆಡೆ, ಇಳುವರಿ ಕುಸಿದಿದೆ. ಸದ್ಯ ಸಿಗುವ ಇಳುವರಿಯನ್ನು ಸರಾಸರಿ ₹1900ಕ್ಕೇ ಮಾರಾಟ ಮಾಡಿದರೂ ಎಕರೆಗೆ ₹45-₹50 ಸಾವಿರ ಸಿಗಬಹುದು. ಹಗಲು ರಾತ್ರಿ ಎನ್ನದೇ ದುಡಿದ ರೈತನಿಗೆ ಇಲ್ಲೇನು ಸಿಗುತ್ತಿದೆ’ ಎನ್ನುತ್ತಾರೆ ರೈತ ಹೋರಾಟಗಾರ ಗೋವಿಂದ.   

ಪರಿಹಾರ ಏನು?: ಇದೇ ಪರಿಸ್ಥಿತಿ ತೆಲಂಗಾಣದಲ್ಲೂ ಉದ್ಭವಿಸಿದ್ದು ಅಲ್ಲಿನ ಸರ್ಕಾರ ಈಗಾಗಲೇ ಕ್ವಿಂಟಾಲ್‌ಗೆ ₹500 ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದೆ. ಅದೇ ರೀತಿ ಇಲ್ಲಿಯೂ ಪ್ರೋತ್ಸಾಹ ಧನ ನೀಡಬೇಕು ಎಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ ಆಗ್ರಹಿಸಿದ್ದಾರೆ. 

ಸರ್ಕಾರದಿಂದ ಭತ್ತ ಖರೀದಿ ಆರಂಭವಾದರೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿರುತ್ತದೆ. ದಲ್ಲಾಳಿಗಳೂ ಮೂಗುದಾರ ಬೀಳುತ್ತದೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರ ಆರಂಭವಾಗಬೇಕು. ಶಾಶ್ವತ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಬೇಕು ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ. ಪ್ರತಿ ವರ್ಷ ರಾಜ್ಯದಲ್ಲಿ ರೈತರು ಹೋರಾಟ ಮಾಡಿದ ಬಳಿಕವೇ ಖರೀದಿ ಕೇಂದ್ರ ಆರಂಭಿಸುವ ಪರಿಪಾಠ ನಿಲ್ಲಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.     

ಬೆಳೆ ಹಾನಿಯ ಜಂಟಿ ಸರ್ವೆ 

ರಾಜ್ಯದಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿವೆ. ಆಯಾ ಜಿಲ್ಲಾಧಿಕಾರಿಗಳು ಹಾನಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 1845 ರೈತರ 651 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದೆ. ಅಂದಾಜು ₹1.08 ಕೋಟಿಯ ಪರಿಹಾರಕ್ಕೆ ನಾವು ಮನವಿ ಮಾಡಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖೆ ಬಳ್ಳಾರಿ ಜಿಲ್ಲಾ ಉಪ ನಿರ್ದೇಶಕ ಸೋಮಸುಂದರ್‌. 

ಈ ಬಾರಿ ಭತ್ತದ ಬೆಳೆ ಹಾನಿಯಾಗಿದೆ, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ನಿಗದಿ ಮಾಡಿರುವ ಎಂಎಸ್‌ಪಿ ಚಿಲ್ಲರೆ ಕಾಸು. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಎಷ್ಟು ವಸ್ತುಗಳ ಬೆಲೆ ಏರಿಕೆಯಾಗಿಲ್ಲ? ರಾಜ್ಯ ಸರ್ಕಾರ ಕೂಡಲೇ ₹500 ಪ್ರೋತ್ಸಾಹ ಧನ ನೀಡಬೇಕು. 
ಕುರುಬೂರು ಶಾಂತಕುಮಾರ, ಪ್ರಾಂತ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.