ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಹೊಸಪೇಟೆಯಲ್ಲಿ ‘ಬ್ಯಾರಿಕೇಡ್‌ ಕೋಟೆ’ ನಿರ್ಮಾಣ

ಇಂದಿನಿಂದ ಬಿಗಿ ನಿಯಮ ಜಾರಿ; ವಾಹನಗಳೊಂದಿಗೆ ಹೊರಬಂದರೆ ದಂಡ

​ಪ್ರಜಾವಾಣಿ ವಾರ್ತೆ
Published 9 ಮೇ 2021, 13:08 IST
Last Updated 9 ಮೇ 2021, 13:08 IST
ಹೊಸಪೇಟೆಯ ರೋಟರಿ ವೃತ್ತದಲ್ಲಿ ಭಾನುವಾರ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ನಿರ್ಬಂಧಿಸಲಾಯಿತು
ಹೊಸಪೇಟೆಯ ರೋಟರಿ ವೃತ್ತದಲ್ಲಿ ಭಾನುವಾರ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ನಿರ್ಬಂಧಿಸಲಾಯಿತು   

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಘೋಷಿಸಿರುವ ನಿಷೇಧಾಜ್ಞೆ, ಹೊಸ ಮಾರ್ಗಸೂಚಿ ಸೋಮವಾರದಿಂದ (ಮೇ 10) ಜಾರಿಗೆ ಬರಲಿದ್ದು, ಅದರ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪೊಲೀಸ್‌ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಸೋಮವಾರದಿಂದ ನಗರದಲ್ಲಿ ಅನಗತ್ಯವಾಗಿ ತಿರುಗಾಡುವವರಿಗೆ ಬಿಸಿ ಮುಟ್ಟಿಸಲು ಪೊಲೀಸರು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನವೇ ಇಡೀ ನಗರ ‘ಬ್ಯಾರಿಕೇಡ್‌ ಕೋಟೆ’ಯಾಗಿ ಬದಲಾಗಿದೆ. ನಗರದ ಆಯಾ ಬಡಾವಣೆಗಳಿಂದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಭಾಗಗಳಲ್ಲಿ ಬ್ಯಾರಿಕೇಡ್‌, ಬಿದಿರಿನ ಕಟ್ಟಿಗೆಗಳನ್ನು ಕಟ್ಟಿ, ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ.

ಅನ್ಯ ಭಾಗಗಳಿಂದ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಟ್ಟು 15 ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಹಗಲಿರುಳು ಪಾಳಿ ರೂಪದಲ್ಲಿ ಕೆಲಸ ನಿರ್ವಹಿಸುವ ಪೊಲೀಸರು ಪ್ರತಿಯೊಬ್ಬರನ್ನೂ ಪರಿಶೀಲಿಸುವರು. ಪೂರ್ವಾನುಮತಿ ಪಡೆದು ಪ್ರಯಾಣಿಸುವವರು, ಆಸ್ಪತ್ರೆಗೆ ಹೋಗುವವರನ್ನು ಹೊರತುಪಡಿಸಿ ಅನ್ಯರು ಹೊರಗೆ ಬಂದರೆ ಅವರ ವಾಹನ ವಶಪಡಿಸಿಕೊಳ್ಳುವುದು ಖಚಿತ. ಅಷ್ಟೇ ಅಲ್ಲ, ಅವರ ಮೇಲೆ ದಂಡ ವಿಧಿಸಿ, ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ಪೊಲೀಸ್‌ ಇಲಾಖೆ ನೀಡಿದೆ.

ADVERTISEMENT

ಈ ಹಿಂದಿನಂತೆಯೇ ಅಗತ್ಯ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಲಾಗಿದೆ. ಆದರೆ, ಯಾರೊಬ್ಬರೂ ಕೂಡ ವಾಹನಗಳಲ್ಲಿ ಸಂಚರಿಸುವಂತಿಲ್ಲ. ಆಯಾ ಬಡಾವಣೆಗಳ ಅಂಗಡಿಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ವಸ್ತುಗಳನ್ನು ಖರೀದಿಸಿ ಮರಳಬೇಕು. ಒಂದು ಬಡಾವಣೆಯವರು ಇನ್ನೊಂದು ಬಡಾವಣೆಗೆ ಹೋದರೆ ಅಂತಹವರ ವಿರುದ್ಧವೂ ಖಾಕಿ ಪಡೆ ಕ್ರಮ ಜರುಗಿಸಲಿದೆ.

ಬಂದೋಬಸ್ತ್‌ಗೆ ಗೃಹರಕ್ಷಕ ದಳ, ದುರ್ಗಾ ಪಡೆಯವರನ್ನು ನಿಯೋಜಿಸಲಾಗಿದೆ. ದ್ವಿಚಕ್ರ ವಾಹನ, ಜೀಪ್‌ಗಳಲ್ಲಿ ನಿರಂತರವಾಗಿ ಪೊಲೀಸರು ಗಸ್ತು ತಿರುಗಲಿದ್ದಾರೆ. ದೇವಸ್ಥಾನ, ಕೂಡು ರಸ್ತೆ, ಮನೆ ಎದುರಿನ ಕಟ್ಟೆ ಸೇರಿದಂತೆ ಎಲ್ಲೂ ಕೂಡ ಜನ ಸೇರದಂತೆ ತಡೆಯುವುದು ಇದರ ಉದ್ದೇಶವಾಗಿದೆ.

ಭಾರಿ ಜನದಟ್ಟಣೆ:

ಸೋಮವಾರದಿಂದ ಮತ್ತಷ್ಟು ಬಿಗಿ ಕ್ರಮಗಳು ಜಾರಿಗೆ ಬರಲಿವೆ ಎಂದರಿತು ಜನ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ನಗರದ ಗಾಂಧಿ ವೃತ್ತ, ಮೇನ್‌ ಬಜಾರ್‌, ಮೂರಂಗಡಿ ವೃತ್ತ, ಸೋಗಿ ಮಾರುಕಟ್ಟೆ, ಉದ್ಯೋಗ ಪೆಟ್ರೋಲ್‌ ಬಂಕ್‌, ರಾಮ ಟಾಕೀಸ್‌, ಟಿ.ಬಿ. ಡ್ಯಾಂ ವೃತ್ತ ಸೇರಿದಂತೆ ಹಲವೆಡೆ ಭಾರಿ ಜನದಟ್ಟಣೆ ಇತ್ತು. ದಿನಸಿ, ತರಕಾರಿ, ಹಣ್ಣು ಖರೀದಿಗೆ ಜನ ಮೂಗಿ ಬಿದ್ದಿದ್ದರು. ಮಳಿಗೆಗಳ ಎದುರು ಉದ್ದನೆಯ ಸಾಲು ಕಂಡು ಬಂತು. ಬಹುತೇಕ ಕಡೆ ಅಂತರ ಕಾಯ್ದುಕೊಳ್ಳದೆ ಜನ ವ್ಯವಹರಿಸುತ್ತಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಪರದಾಟ ನಡೆಸಿದರು. ಹತ್ತು ಗಂಟೆಯಾಗುತ್ತಿದ್ದಂತೆ ಅಂಗಡಿಗಳು ಬಾಗಿಲು ಮುಚ್ಚಿದವು. ಜನರನ್ನು ಕಳುಹಿಸಿದ ನಂತರ ಇಡೀ ನಗರ ಸ್ತಬ್ಧಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.