ಕೋಳಿಗಳು
ಬಳ್ಳಾರಿ: ಬಳ್ಳಾರಿ ಹೊರ ವಲಯದ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ವಾರದಿಂದ ಈಚೆಗೆ 8 ಸಾವಿರ ಕೋಳಿಗಳು ಸಾವಿಗೀಡಾಗಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
‘ರವಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಮೊದಲು 15 ಸಾವಿರ ಕೋಳಿಗಳಿದ್ದವು. ಈವರೆಗೆ 8 ಸಾವಿರ ಕೋಳಿ ಮೃತಪಟ್ಟಿವೆ. ಸದ್ಯ 7 ಸಾವಿರ ಕೋಳಿಗಳು ಮಾತ್ರವೇ ಉಳಿದಿವೆ. ಇನ್ನೂ, ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುವ ಸಾಧ್ಯತೆಗಳಿವೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಮೃತ ಕೋಳಿಗಳ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಅದನ್ನು ಭೂಪಾಲ್‌ನಲ್ಲಿರುವ ‘ರಾಷ್ಟ್ರೀಯ ಉನ್ನತ ಭಧ್ರತಾ ಪ್ರಾಣಿ ರೋಗಗಳ ಸಂಸ್ಥೆ’ಗೆ ರವಾನಿಸಿ ಪರೀಕ್ಷೆ ಮಾಡಿಸಲಾಗುತ್ತದೆ. ಸೋಮವಾರದ ವೇಳೆಗೆ ಪರೀಕ್ಷಾ ವರದಿ ಬರಬಹುದು. ಹಕ್ಕಿ ಜ್ವರ ಇರುವುದು ದೃಢಪಟ್ಟರೆ, ಉಳಿದ ಕೋಳಿಗಳನ್ನೂ ವಧೆ ಮಾಡಲಾಗುವುದು’ ಎಂದು ಇಲಾಖೆಯ ಉಪನಿರ್ದೇಶಕ ಡಾ. ಕಾರಬಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಹಕ್ಕಿ ಜ್ವರ ತಡೆಯಲು ಮತ್ತು ಪರಿಶೀಲಿಸಲು ಪಶು ಸಂಗೋಪನಾ ಇಲಾಖೆಯು 10 ತಂಡಗಳನ್ನು ರಚಿಸಿದೆ. ಈ ತಂಡಗಳು ನಿತ್ಯ ಇಲಾಖೆಗೆ ವರದಿ ನೀಡಲಿವೆ. ಜಿಲ್ಲೆಯು ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಚೆಕ್‌ಪೋಸ್ಟ್‌ಗಳಲ್ಲೂ ಪರಿಶೀಲನೆ ನಡೆದಿದೆ. ಬಳ್ಳಾರಿಯಲ್ಲಿ ಒಟ್ಟು 74 ಕೋಳಿ ಫಾರಂಗಳಿವೆ. 14 ಮೊಟ್ಟೆ ಸಂವರ್ಧನಾ ಕೇಂದ್ರಗಳಿವೆ. ಇವುಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದರು.
ಸಂಡೂರು ತಾಲ್ಲೂಕಿನ ಕುರೇಕುಪ್ಪದ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಹಕ್ಕಿಜ್ವರದಿಂದ 2,400 ಕೋಳಿಗಳು ಸಾವಿಗೀಡಾಗಿದ್ದರಿಂದ ಕುರೇಕುಪ್ಪ ಪುರಸಭೆ ಮತ್ತು ತೋರಣಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟ ನಿಷೇಧಿಸಲಾಗಿದೆ. ಹೊಟೇಲ್ ಮತ್ತು ಡಾಬಾಗಳಲ್ಲಿ, ರಸ್ತೆ ಬದಿಯ ತಳ್ಳುವ ಬಂಡಿಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಬಳಸಿ, ಆಹಾರ ಪದಾರ್ಥ ಸಿದ್ಧಪಡಿಸದಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.