ADVERTISEMENT

ಬಳ್ಳಾರಿ | ವಿವಾದ ಅಂತ್ಯ: ರತ್ನಮ್ಮವ್ವ ಅಂತ್ಯಸಂಸ್ಕಾರ ಇಂದು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 1:59 IST
Last Updated 27 ಡಿಸೆಂಬರ್ 2025, 1:59 IST
ಮೃತ ರತ್ನಮ್ಮವ್ವ ಅವರನ್ನು ಮಠದಲ್ಲಿಯೇ ಸಮಾಧಿ ಮಾಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಸಮುದಾಯದ ಮಹಿಳೆಯರು ಶುಕ್ರವಾರ ಮಠದ ಎದುರು ಪ್ರತಿಭಟನೆ ನಡೆಸಿದರು
ಮೃತ ರತ್ನಮ್ಮವ್ವ ಅವರನ್ನು ಮಠದಲ್ಲಿಯೇ ಸಮಾಧಿ ಮಾಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಸಮುದಾಯದ ಮಹಿಳೆಯರು ಶುಕ್ರವಾರ ಮಠದ ಎದುರು ಪ್ರತಿಭಟನೆ ನಡೆಸಿದರು   

ಬಳ್ಳಾರಿ: ತಾಲ್ಲೂಕಿನ ಕೊಳಗಲ್ಲಿನಲ್ಲಿ ರತ್ನಮ್ಮವ್ವ ಅವರ ಸಮಾಧಿ ಸ್ಥಳದ ವಿಚಾರವಾಗಿ ಶುಕ್ರವಾರ ಇಡೀ ದಿನ ಎರಡು ಬಣಗಳ ನಡುವೆ ವಾದ–ವಿವಾದ, ಪ್ರತಿಭಟನೆ, ಮೇಲಾಟಗಳು ನಡೆದವು. ಅಂತಿಮವಾಗಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕಗ್ಗಂಟು ಬಗೆಹರಿದಿದ್ದು, ಶನಿವಾರ ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲು ಗ್ರಾಮಸ್ಥರು ಒಪ್ಪಿದ್ದಾರೆ. 

ಎರ್ರಿತಾತನ ಮಠದ ಮೊದಲ ಪೀಠಾಧಿಪತಿ ಎರ್ರಿತಾತನವರ ಶಿಷ್ಯ, ಎರಡನೇ ಪೀಠಾಧಿಪತಿಯೂ ಆಗಿದ್ದ ಎರೆಪ್ಪತಾತನವರ ಪತ್ನಿ ರತ್ನಮ್ಮವ್ವ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರನ್ನು ಮಠದಲ್ಲಿರುವ ಎರೆಪ್ಪತಾತನವರ ಸಮಾಧಿ ಪಕ್ಕದಲ್ಲೇ ಮಣ್ಣು ಮಾಡಬೇಕು ಎಂದು ಗ್ರಾಮದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜನ ಪ್ರತಿಪಾದಿಸಿದ್ದರು. ಆದರೆ, ಇದಕ್ಕೆ ಅರ್ಚಕ ಮನೆತನಗಳಾದ ಕುರುಬ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರು.

ಇದರ ಜತೆಗೆ, ಮಠದ ಇಡೀ 34 ಎಕರೆ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಹೈಕೋರ್ಟ್‌ನ ಆದೇಶವಿದ್ದು, ಮಠದಲ್ಲಿಯೇ ಸಮಾಧಿ ಮಾಡುವ ಪ್ರಸ್ತಾಪಕ್ಕೆ ಅಧಿಕಾರಿಗಳೂ ಆಕ್ಷೇಪ ವ್ಯಕ್ತಪಡಿಸಿದ್ದರು. 

ADVERTISEMENT

ಹೀಗಾಗಿ ಪರಿಶಿಷ್ಟ ಸಮುದಾಯದವರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ವಿಚಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ವರೆಗೆ ತಲುಪಿತು. ಕೆಲಗಂಟೆಗಳ ಕಾಲ ಅಲ್ಲಿಯೂ ಸಂಧಾನ ಸಭೆಗಳು ನಡೆದವು. ಅಂತಿಮವಾಗಿ ಮಠಕ್ಕೆ ಸೇರಿದ 34 ಎಕರೆ ಪ್ರದೇಶದ ಒಳಗೆ, ಆದರೆ, ಮಠದ ಪ್ರಾಂಗಣದಿಂದ ಹೊರಗೆ ರತ್ನಮ್ಮವ್ವ ಅವರನ್ನು ಸಮಾಧಿ ಮಾಡಲು ತೀರ್ಮಾನಿಸಲಾಯಿತು.

ಶುಕ್ರವಾರವೇ ಅಂತ್ಯಕ್ರಿಯೆ ನೆರವೇರಿಸುವಂತೆ ಅಧಿಕಾರಿ ವರ್ಗ ಗ್ರಾಮಸ್ಥರಲ್ಲಿ ಮನವಿ  ಮಾಡಿತಾದರೂ, ಶನಿವಾರ ಮುಂಜಾನೆ 4ರಿಂದ 9ರ ನಡುವಿನ ಅವಧಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವುದಾಗಿ ಪರಿಶಿಷ್ಟ ಸಮುದಾಯದ ಮುಖಂಡರು ತಿಳಿಸಿದ್ದಾರೆ. 

ಗ್ರಾಮದಲ್ಲಿ 200ಕ್ಕೂ ಅಧಿಕ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹತ್ತಾರು ಮಂದಿ ಪೊಲೀಸರು ಮಫ್ತಿಯಲ್ಲಿದ್ದಾರೆ. ಮೀಸಲು ಪೊಲೀಸ್‌ ಪಡೆಯೂ ಗ್ರಾಮದಲ್ಲಿ ಬೀಡುಬಿಟ್ಟಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಗ್ರಾಮಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಹೆಚ್ಚುವರಿ ಎಸ್‌ಪಿ ರವಿ ಕುಮಾರ್ ಗ್ರಾಮದಲ್ಲೇ ಬೀಡು ಬಿಟ್ಟಿದ್ದರು. ಬಳ್ಳಾರಿ ಉಪ ವಿಭಾಗಾಧಿಕಾರಿ ರಾಜೇಶ್‌ ಎಚ್‌.ಡಿ, ಬಳ್ಳಾರಿ ತಹಶೀಲ್ದಾರ್‌ ರೇಖಾ ದಿನವಿಡೀ ಗ್ರಾಮದಲ್ಲೇ ಉಳಿದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.