ADVERTISEMENT

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೇಲೇರಲು ಬಗೆಬಗೆಯ ಕಾರ್ಯಕ್ರಮ

ಆರ್. ಹರಿಶಂಕರ್
Published 2 ಡಿಸೆಂಬರ್ 2025, 6:17 IST
Last Updated 2 ಡಿಸೆಂಬರ್ 2025, 6:17 IST
<div class="paragraphs"><p>ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು</p></div>

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು

   

ಬಳ್ಳಾರಿ: ಕಳೆದ ಬಾರಿಯ ಪರೀಕ್ಷೆಯಲ್ಲಿನ ನಿರಾಶಾದಾಯಕ ಸಾಧನೆಯಿಂದಾದ ಹಿನ್ನಡೆ, ಶಿಕ್ಷಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿರುವ ಶಾಲಾ ಶಿಕ್ಷಣ ಇಲಾಖೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಸಿದ್ಧತೆ ನಡೆಸಿದೆ. 

2023–24ನೇ ಸಾಲಿನಲ್ಲಿ ಶೇ 64.99 ಫಲಿತಾಂಶದೊಂದಿಗೆ ರಾಜ್ಯದಲ್ಲಿ 28ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ 2024-25ನೇ ಸಾಲಿನಲ್ಲಿ ಶೇ 59.86ರ ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ ಬಂದು ನಿಂತಿತು. ಶಿಕ್ಷಣ ಇಲಾಖೆ ಹಾಕಿಕೊಟ್ಟ ಎಲ್ಲ ಸೂತ್ರಗಳು, ಮಾರ್ಗಸೂಚಿಗಳ ಪಾಲನೆಯ ಹೊರತಾಗಿಯೂ, ಫಲಿತಾಂಶದಲ್ಲಿನ ಹಿನ್ನಡೆ ಇಡೀ ಶಾಲಾ ಶಿಕ್ಷಣ ಇಲಾಖೆಯ ನೈತಿಕ ಸ್ಥೈರ್ಯಕ್ಕೇ ಪೆಟ್ಟು ನೀಡಿತ್ತು. 

ADVERTISEMENT

ಇಂಥದ್ದೊಂದು ಹಿನ್ನಡೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತೀವ್ರ ಟೀಕೆಗೆ ಗುರಿ ಮಾಡಿದೆ. ಕೆಡಿಪಿ ಸಭೆಗಳು, ದಿಶಾ ಸಭೆ, ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಉಪ ನಿರ್ದೇಶಕರನ್ನು ವಿಮರ್ಶೆಗೆ ಗುರಿಮಾಡಿದೆ. ತೀವ್ರ ತರಾಟೆಗೂ ಕಾರಣವಾಗಿದೆ. 

ಇದೆಲ್ಲವನ್ನು ಮೆಟ್ಟಿನಿಂತು, ಈ ಬಾರಿಯ ಪರೀಕ್ಷೆಯಲ್ಲಿ ಉತ್ತಮ ಸ್ಥಾನಗಳಿಸಲು ಶಿಕ್ಷಣ ಇಲಾಖೆ ತಯಾರಿ ಆರಂಭಿಸಿದೆ. ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಈಗಿನಿಂದಲೇ ಹಾಕಿಕೊಳ್ಳಲಾಗುತ್ತಿದೆ. 

ಈ ಬಾರಿ 1,9587 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 

ಜುಲೈನಿಂದಲೇ ‘ಲೆಸನ್ ಬೇಸ್ಡ್ ಅಸೆಸ್‌ಮೆಂಟ್ (ಪಾಠ ಆಧಾರಿತ ಮೌಲ್ಯಮಾಪನ)’ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಪಾಠ ಅರ್ಥ ಮಾಡಿಸಿಯೇ ಶಿಕ್ಷಕರು ಮುಂದಿನ ಪಾಠಕ್ಕೆ ಹೋಗಬೇಕೆಂಬ ಕಟ್ಟಪ್ಪಣೆ ವಿಧಿಸಲಾಗಿದೆ. ಘಟಕ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೋ, ಅಂಥ ವಿಷಯಗಳನ್ನು ಮತ್ತೆ ಬೋಧನೆ ಮಾಡುವಂತೆ ಶಿಕ್ಷಕರಿಗೆ ತೂಚಿಸಲಾಗಿದೆ. ಇದಕ್ಕಾಗಿ ಶಾಲೆ ಮುಗಿದ ಬಳಿಕ ಪ್ರತಿ ದಿನ ‘ಪರಿಹಾರ ಬೋಧನೆ’ ಎಂಬ ತರಗತಿಗಳನ್ನು ಆರಂಭಿಸಲಾಗಿದೆ.  

ವಿದ್ಯಾರ್ಥಿಗಳು ಕನಿಷ್ಠ 40 ಅಂಕಗಳನ್ನಾದರೂ ಗಳಿಸಲಿ ಎಂಬ ಉದ್ದೇಶದೊಂದಿಗೆ ‘ಮಿಷನ್ 40+’ ಕಾರ್ಯಕ್ರಮ ಸೂಚಿಸಿದೆ ಸರ್ಕಾರ. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ‘ಸಂಪನ್ಮೂಲಕ ಶಿಕ್ಷಕರ ತರಬೇತಿ ಸಾಹಿತ್ಯ’ ಪ್ರಕಟಿಸಲಾಗಿದೆ. ಈ  ಕಾರ್ಯಕ್ರಮದಲ್ಲಿ ಸೂಚಿಸಿದ ಪಾಠ ಮಾಡಿದರೆ, ವಿದ್ಯಾರ್ಥಿ ಪಾಸಾಗದೇ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. 

ಇದರ ಜತೆಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯ 73 ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದು, ಅಲ್ಲಿನ ಕಲಿಕಾ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಪೂರ್ವಭಾವಿ ಪರೀಕ್ಷೆಗೂ ವೆಬ್ ಕಾಸ್ಟಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.