ADVERTISEMENT

ಬಳ್ಳಾರಿ: ಬಾಣಂತಿ ಸಾವು ಪ್ರಕರಣ; ವೈದ್ಯೆ ಅಮಾನತು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 8:02 IST
Last Updated 23 ಏಪ್ರಿಲ್ 2024, 8:02 IST

ಬಳ್ಳಾರಿ: ಬಳ್ಳಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಲೋಪದ ಆರೋಪದ ಮೇಲೆ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞೆ ಪರಿಮಳಾ ದೇಸಾಯಿ ಅವರನ್ನು ಅಮಾನತು ಮಾಡಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಆದೇಶ ಹೊರಡಿಸಿದೆ.

ಚಿಕಿತ್ಸೆಯಲ್ಲಿ ಲೋಪ, ಬೇಜವಾಬ್ದಾರಿತನ, ಕರ್ತವ್ಯದಲ್ಲಿ ನಿರ್ಲಕ್ಷ್ಯತೆ, ಮೇಲುಸ್ತುವಾರಿಯಲ್ಲಿ ನಿಗಾವಹಿಸದೇ ಇರುವುದು ಹಾಗೂ ಮೇಲಾಧಿಕಾರಿಗಳಿಗೆ ಸಕಾಲದಲ್ಲಿ ವರದಿ ಸಲ್ಲಿಸದೇ ಇರುವ ಆರೋಪಕ್ಕೆ ಸಂಬಂಧಿಸಿದಂತೆ ಶಿಸ್ತುಕ್ರಮ ಬಾಕಿ ಇರಿಸಿ ವೈದ್ಯೆ ಪರಿಮಳಾ ದೇಸಾಯಿ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಹೆರಿಗೆಗೆಂದು ಮಾರ್ಚ್‌ 6ರಂದು ಮೋಕಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ ರಾಜಮ್ಮ ಅವರಿಗೆ ಮಾ.7ರಂದು ಸಿಸೇರಿಯನ್‌ ನೆರವೇರಿಸಲಾಗಿತ್ತು. ಅವರಿಗೆ ಹೆಣ್ಣು ಮಗು ಜನಿಸಿತ್ತು. ಅದೇ ದಿನ ರಾಜಮ್ಮಗೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ವೈದ್ಯರು ರಕ್ತ ತರಿಸಿ ಹಾಕಿದ್ದರು. ಆದರೂ ಪರಿಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಅಲ್ಲಿ 18 ದಿನ ಚಿಕಿತ್ಸೆ ನೀಡಲಾಗಿತ್ತು. ಆದರೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮಾ. 25ರಂದು ರಾಜಮ್ಮಳನ್ನು ಬೆಂಗಳೂರಿನ ವಿಕ್ಟೋರಿಯಾಗೆ ಸೇರಿಸಲಾಗಿತ್ತು. ಅಲ್ಲಿನ ಚಿಕಿತ್ಸೆಯೂ ಫಲ ಕಾಣದೇ ರಾಜಮ್ಮ ಏ. 20ರಂದು ಮೃತಪಟ್ಟಿದ್ದರು.

ADVERTISEMENT

ಪ್ರಜಾವಾಣಿ ವರದಿ ಆಧಾರ: ರಾಜಮ್ಮಗೆ ನೆರವೇರಿಸಲಾಗಿದ್ದ ಶಸ್ತ್ರಚಿಕಿತ್ಸೆಯಲ್ಲಿ ಲೋಪವಾಗಿದೆ ಎಂದು ಕುಟುಂಬಸ್ಥರು ಮಾ. 13ರಂದೇ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ವೈದ್ಯೆ ವಿರುದ್ಧ ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆಗೆ ಮಾ.15ರಂದು ವರದಿ ನೀಡಿದ್ದರು. ಇದಾದ ಬಳಿಕ ಏ. 20ರಂದು ರಾಜಮ್ಮ ಮೃತಪಟ್ಟಿದ್ದರು. ರಾಜಮ್ಮ ಸಾವಿನ ಕುರಿತು ‘ಬಾಣಂತಿ ಸಾವು: ಪ್ರಕರಣ ದಾಖಲು‘ ಎಂಬ ಶೀರ್ಷಿಕೆಯ ಅಡಿ ಪ್ರಜಾವಾಣಿಯ ಏ.22ರ ಬಳ್ಳಾರಿ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಪತ್ರಿಕೆಯ ಈ ವರದಿಯನ್ನೂ ಆಧಾರವಾಗಿಟ್ಟುಕೊಂಡಿರುವುದಾಗಿ ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.