ADVERTISEMENT

ಬೆಂಗಳೂರು ರಸ್ತೆ ಎಂಬ ನರಕಯಾತನೆ

ಕಿರಿದಾದ ಮಾರ್ಗ, ದೊಡ್ಡ ವಾಹನಗಳ ಸಂಚಾರ : ವಾಹನ ಸವಾರರಿಗೆ ನಿತ್ಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:19 IST
Last Updated 26 ಅಕ್ಟೋಬರ್ 2025, 7:19 IST
ಬಳ್ಳಾರಿಯ ಬೆಂಗಳೂರು ರಸ್ತೆಯ ಗುಗ್ಗರಹಟ್ಟಿ ಬಳಿ ಉಂಟಾಗಿರುವ ಟ್ರಾಫಿಕ್‌ ಸಮಸ್ಯೆ 
ಬಳ್ಳಾರಿಯ ಬೆಂಗಳೂರು ರಸ್ತೆಯ ಗುಗ್ಗರಹಟ್ಟಿ ಬಳಿ ಉಂಟಾಗಿರುವ ಟ್ರಾಫಿಕ್‌ ಸಮಸ್ಯೆ    

ಬಳ್ಳಾರಿ: ಬಳ್ಳಾರಿ ನಗರದಿಂದ ಗುಗ್ಗರಹಟ್ಟಿ, ಹಲಕುಂದಿ ಮಾರ್ಗವಾಗಿ ಚತುಷ್ಪತ ರಸ್ತೆಗೆ ಸಂಪರ್ಕ ಕಲ್ಪಿಸುವ ‘ಬೆಂಗಳೂರು ರಸ್ತೆ’ಯಲ್ಲಿ ಸಂಚಾರ ಎಂದರೆ, ನರಕ ಯಾತನೆ ಎಂಬಂತಾಗಿದೆ. 

ಕಿರಿದಾಗಿರುವ ಹಳ್ಳ ಬಿದ್ದ ರಸ್ತೆ, ಭಾರೀ ವಾಹನಗಳ ಸಂಚಾರ, ಸ್ಪಾಂಜ್‌ ಐರನ್‌ ಫ್ಯಾಕ್ಟರಿಗಳಿಗೆ ಅದಿರು ತುಂಬಿಕೊಂಡು ಬರುವ ಲಾರಿಗಳು, ಆಗಾಗ ಬರುವ ರೈಲುಗಳು, ಸಂಚಾರ ನಿಯಮಗಳ ಪರಿವೇ ಇಲ್ಲದೇ ಸಾಗುವ ವಾಹನ ಸವಾರರ ಆಟಾಟೋಪಗಳು, ತುಂಗಭದ್ರಾ ಕಾಲುವೆ ಕಿರಿದಾದ ಸೇತುವೆ... ಇವೆಲ್ಲ ಕಾರಣಗಳಿಂದಾಗಿ ಬೆಂಗಳೂರು ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ. 

ಬಳ್ಳಾರಿ ಹೈವೆಗೆ ಹೊರಳಿ 140 ಕಿ.ಮೀ ದೂರದ ಹಿರಿಯೂರಿಗೆ ಒಂದೂವರೆ ಗಂಟೆಯಲ್ಲಿ ಹೋಗಬಹುದು. ಆದರೆ, ಹೈವೆಗೆ ಹೋಗಲು ಕನಿಷ್ಟ ಮುಕ್ಕಾಲು ಗಂಟೆಯಾದರೂ ಬೇಕಾಗುತ್ತದೆ.

ADVERTISEMENT

ಬೆಂಗಳೂರು ರಸ್ತೆಯಿಂದ ಹೈವೆಗೆ ತೆರಳುವ ಮಾರ್ಗ ಮಧ್ಯೆ ಬರುವ ಹೊಸ ಬಸ್‌ ನಿಲ್ದಾಣ, ಕೌಲ್‌ ಬಜಾರ್‌ನ ಈದ್ಗಾ ಮೈದಾನಕ್ಕೆ ತೆರಳುವ ಮಾರ್ಗ, ಗುಗ್ಗರ ಹಟ್ಟಿ, ಹಲಕುಂದಿ, ಹೊಸಪೇಟೆ ರಸ್ತೆಗೆ ತಿರುವ ಪಡೆಯುವ ಸ್ಥಳ, ರೈಲ್ವೆ ಗೇಟ್‌, ಕೈಗಾರಿಕಾ ಪ್ರದೇಶದ ಬಳಿ ಯಾವಾಗಲೂ ಟ್ರಾಫಿಕ್‌ ಸಮಸ್ಯೆ ಇದ್ದೇ ಇರುತ್ತದೆ. ಕೂಡು ರಸ್ತೆಗಳು ಇರುವ ಜಾಗದಲ್ಲೇ ಗುಂಡಿಗಳೂ ಸೃಷ್ಟಿಯಾಗಿದ್ದು, ಟ್ರಾಫಿಕ್‌ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತಿದೆ. ಅದರ ಜತೆಗೆ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳ ಎದುರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದ್ದು, ಟ್ರಾಫಿಕ್‌ ಸಮಸ್ಯೆಗೆ ಮತ್ತಷ್ಟು ಕೊಡುಗೆ ಸಿಗುತ್ತದೆ. 

ಇದೇ ರಸ್ತೆಯ ಪಕ್ಕದಲ್ಲೇ ರೈಲು ಹಳಿಯೂ ಇದೆ. ರೈಲು ಬಂದಾಗ ಪಕ್ಕದ ಪ್ರದೇಶಗಳಿಗೆ ಹೋಗಲಾಗದ ವಾಹನಗಳು ಬೆಂಗಳೂರು ರಸ್ತೆಯಲ್ಲೇ ಸಾಲಾಗಿ ನಿಂತುಕೊಳ್ಳುತ್ತವೆ. ಆಗ ಟ್ರಾಫಿಕ್‌ ಸಮಸ್ಯೆ ತಾರಕ್ಕಕೇರುತ್ತದೆ ಎನ್ನುತ್ತಾರೆ ಎಪಿಎಂಸಿ ವ್ಯಾಪಾರಿ ಹನುಮೇಶ. 

‘ರಾತ್ರಿ ವೇಳೆ ದೊಡ್ಡ ದೊಡ್ಡ ಟ್ರಕ್‌ಗಳು ನಗರದ ಮೂಲಕ ಸಿರುಗುಪ್ಪ, ಅನಂತಪುರ, ಕರ್ನೂಲು ಕಡೆಗೆ ತೆರಳುತ್ತವೆ. ಈ ವೇಳೆ ತುಂಗಭದ್ರಾ ಕಿರಿದಾದ ಕಾಲುವೆ ಬಳಿ ತೀವ್ರ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ರಾತ್ರಿ 11 ಗಂಟೆಗೆ ಬಸ್‌ ನಿಲ್ದಾಣದಿಂದ ಬಸ್‌ ತೆಗೆದುಕೊಂಡು ಹೊರಟರೆ, 8–10 ಕಿ.ಮೀ ದೂರದ ಹೈವೆ ತಲುಪಲು ರಾತ್ರಿ 1 ಗಂಟೆಯಾಗುತ್ತದೆ. ಬೆಳಗ್ಗೆ 5 ಗಂಟೆಗೆ ಬೆಂಗಳೂರು ಸೇರಲೇ ಬೇಕು. ಅನಿವಾರ್ಯಕ್ಕೆ ಬಿದ್ದು, ಬಸ್‌ ಅನ್ನು ವೇಗವಾಗಿ ನಡೆಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ’ ಎಂದು ಕೆಕೆಆರ್‌ಟಿಸಿಯ ಹೆಸರು ಹೇಳಲು ಇಚ್ಚಿಸದ ಬಸ್‌ ಚಾಲಕರೊಬ್ಬರು ತಿಳಿಸಿದ್ದಾರೆ.     

ಜಿಲ್ಲಾಡಳಿತ, ಜನಪ್ರತಿನಿಧಿಗಳು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಲೇ ಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ, ಪರಿಸ್ಥಿತಿ ಭವಿಷ್ಯದಲ್ಲಿ ಮತ್ತಷ್ಟು ಭೀಕರವಾಗಲಿದೆ. ಶಾಶ್ವತ ಪರಿಹಾರ ಸಿಗುವ ವರೆಗೆ ರಸ್ತೆಯಲ್ಲಿ ಟ್ರಾಫಕ್‌ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು ಎನ್ನುತ್ತಾರೆ ಉದ್ದಿಮೆದಾರ ರಾಜಶೇಖರ ಎಂಬುವವರು. 

ಟ್ರಾಫಿಕ್‌ ತಪ್ಪಿಸಲು ಸುತ್ತು ಬಳಸು ಮಾರ್ಗ

  ಬೆಂಗಳೂರು ರಸ್ತೆಯಲ್ಲಿನ ಟ್ರಾಫಿಕ್‌ ಸಮಸ್ಯೆಯಿಂದ ತಪ್ಪ‍ಸಿಕೊಳ್ಳಲು ಬೈಪಾಸ್‌ ಆಶ್ರಯಿಸಲಾಗುತ್ತಿದೆ. ಇದಕ್ಕೆ ಅನಂತಪುರ ರಸ್ತೆ ಬೈಪಾಸ್‌ ಬೊಮ್ಮನಾಳ್‌ ರಸ್ತೆ ಮೂಲಕ ಹೈವೆಗೆ ಸೇರಿಕೊಳ್ಳಬೇಕು. ಆದರೆ ಬೊಮ್ಮನಾಳ್‌ ರಸ್ತೆಯಲ್ಲಿ ಅಡಿಗಡಿಗೂ ಹಳ್ಳಕೊಳ್ಳಗಳಿವೆ. ಹೀಗಾಗಿ ಇಲ್ಲಿಯೂ ಸಂಚಾರ ಪ್ರಯಾಸ ಎಂಬಂತಾಗಿದೆ. ಕನಿಷ್ಠ ಈ ರಸ್ತೆಯನ್ನಾದರೂ ಅಭಿವೃದ್ಧಪಡಿಸಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ನಗರದ ನೆಹರು ಕಾಲೋನಿಯ ನಿವಾಸಿ ಮೂರ್ತಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.