ADVERTISEMENT

ಬಳ್ಳಾರಿ: ನವೀನ ಚಿಂತನೆಯ ಶಿಕ್ಷಕ ಮಹಾಂತೇಶ್‌ಗೆ ರಾಜ್ಯ ಪ್ರಶಸ್ತಿ ಗರಿ

ಬಾಲಯ್ಯ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹಾಂತೇಶ್‌ಗೆ ಮನ್ನಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:06 IST
Last Updated 5 ಸೆಪ್ಟೆಂಬರ್ 2025, 6:06 IST
ಕುರುಗೋಡು ತಾಲೂಕಿನ ಬಾಲಯ್ಯ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಡಿಜಿಟಲ್‌ ಕ್ಲಾಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವುದು. 
ಕುರುಗೋಡು ತಾಲೂಕಿನ ಬಾಲಯ್ಯ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಡಿಜಿಟಲ್‌ ಕ್ಲಾಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವುದು.    

ಬಳ್ಳಾರಿ: ಕುರುಗೋಡು ತಾಲೂಕಿನ ಬಾಲಯ್ಯ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಾಂತೇಶ್‌ ಮೇಟಿ ಅವರಿಗೆ ಈ ಬಾರಿ ರಾಜ್ಯ ಮಟ್ಟದ ಅತ್ಯುನ್ನತ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಶಸ್ತಿ ಲಭಿಸಿದೆ. 

ಮೂಲತಃ ಬಾಗಲಕೋಟೆಯ ಬೀಳಗಿ ಪಟ್ಟಣದ 32 ವರ್ಷದ ಮಹಾಂತೇಶ ಮೇಟಿ, 21 ವರ್ಷಕ್ಕೇ ಶಿಕ್ಷಕರಾಗಿ ನೇಮಕಗೊಂಡವರು. ಬಾಲಯ್ಯ ಕ್ಯಾಂಪ್‌ನ ಕಿರಿಯ ಪ್ರಾಥಮಿಕ ಶಾಲೆಯಿಂದಲೇ ಬೋಧಕ ವೃತ್ತಿ ಆರಂಭಿಸಿದ ಅವರಿಗೆ ಆರಂಭದಲ್ಲೇ ಮುಖ್ಯೋಪಾಧ್ಯಾಯರಾಗುವ ಅವಕಾಶ ಸಿಕ್ಕಿತ್ತು. 

ಇದನ್ನು ಸಮರ್ಪಕವಾಗಿ ಬಳಸಿಕೊಂಡ ಅವರು, ಶಾಲೆಯಲ್ಲಿ ಇತರ ಶಿಕ್ಷಕರೊಂದಿಗೆ ಸೇರಿ ಹಲವು ಬದಲಾವಣೆಗಳನ್ನು ತಂದರು. ಅದರ ಪರಿಣಾಮವಾಗಿ ಇಂದು ಸರ್ಕಾರ ಅವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ‌. 

ADVERTISEMENT

‘ಬಾಲಯ್ಯ ಕ್ಯಾಂಪ್‌ನ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ವಸತಿ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಕಲಿಕಾ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗುತ್ತಿದ್ದಾರೆ. ಇಲ್ಲಿನ ತರಗತಿಗಳನ್ನು ಡಿಜಿಟಲ್‌ ಕ್ಲಾಸ್‌ ಆಗಿ ಪರಿವರ್ತಿಸಲಾಗಿದೆ. ಟಿ.ವಿ ಮೂಲಕ ಪಾಠ ಹೇಳಿಕೊಡಲಾಗುತ್ತಿದೆ. ಇದಕ್ಕಾಗಿ ಕೆಕೆಆರ್‌ಡಿಬಿ ಅನುದಾನ ಬಳಸಿಕೊಳ್ಳಲಾಗಿದೆ’ ಎಂದು ಶಿಕ್ಷಕ ಮಹಾಂತೇಶ ‘ಪ್ರಜಾವಾಣಿ’ಗೆ ಹೇಳಿದರು. 

ಮಹಾಂತೇಶ ಅವರು ಇತರ ಶಿಕ್ಷಕರೊಂದಿಗೆ ಕೂಡಿ ಸ್ವಂತ ಖರ್ಚಿನಿಂದಲೇ ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದಾರೆ. ನಲಿ ಕಲಿ ಕೋಣೆಯಲ್ಲಿ ತಾರಾಲಯವಾಗಿ ಪರಿವರ್ತಿಸಿದ್ದಾರೆ. ಕಲಿಕಾ ಮೇಳ, ಕಲಿಕಾ ಸಾಮಾಗ್ರಿಗಳ ಪ್ರದರ್ಶವನ್ನು ಶಾಲೆಯಲ್ಲೇ ಆಯೋಜಿಸಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಶಿಕ್ಷಕನಾಗಬೇಕು ಎಂಬ ಹಂಬಲ ಮೊದಲಿನಿಂದಲೂ ಇತ್ತು. ಗುಣಮಟ್ಟದ ಶಿಕ್ಷಣ ಕೊಡಲು ಪ್ರಯತ್ನಸುತ್ತಿದ್ದೇನೆ
ಮಹಾಂತೇಶ ಮೇಟಿ ಶಿಕ್ಷಕ ಬಾಲಯ್ಯ ಕ್ಯಾಂಪ್‌ ಕಿರಿಯ ಪ್ರಾಥಮಿಕ ಶಾಲೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.