ADVERTISEMENT

ಕಾಂಗ್ರೆಸ್‌ ಭದ್ರಕೋಟೆ ವಿಜಯನಗರದ ಮೇಲೆ ಭರತ್‌ ರೆಡ್ಡಿ ಕಣ್ಣು?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಜನವರಿ 2020, 19:45 IST
Last Updated 1 ಜನವರಿ 2020, 19:45 IST
ಹೊಸಪೇಟೆಯ ರೋಟರಿ ವೃತ್ತದಲ್ಲಿ ಬುಧವಾರ ಹಾಕಿದ್ದ ಹೊಸ ವರ್ಷದ ಶುಭ ಕೋರುವ ಫ್ಲೆಕ್ಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಭರತ್‌ ರೆಡ್ಡಿ ಅವರ ಭಾವಚಿತ್ರ ಕಾಣಬಹುದು
ಹೊಸಪೇಟೆಯ ರೋಟರಿ ವೃತ್ತದಲ್ಲಿ ಬುಧವಾರ ಹಾಕಿದ್ದ ಹೊಸ ವರ್ಷದ ಶುಭ ಕೋರುವ ಫ್ಲೆಕ್ಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಭರತ್‌ ರೆಡ್ಡಿ ಅವರ ಭಾವಚಿತ್ರ ಕಾಣಬಹುದು   

ಹೊಸಪೇಟೆ: ಹಿರಿಯ ಕಾಂಗ್ರೆಸ್‌ ಮುಖಂಡ ಸೂರ್ಯನಾರಾಯಣ ರೆಡ್ಡಿ ಅವರ ಮಗ, ಕೊರ್ಲಗುಂದಿ ಜಿಲ್ಲಾ ಪಂಚಾಯಿತಿ ಸದಸ್ಯ ಭರತ್‌ ರೆಡ್ಡಿ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದತ್ತ ಒಲವು ತೋರಿಸುತ್ತಿದ್ದಾರೆಯೇ?

ಇಂತಹದ್ದೊಂದು ಪ್ರಶ್ನೆಯ ಸುತ್ತ, ಈಗ ಕ್ಷೇತ್ರದಾದ್ಯಂತ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣಗಳು ಇವೆ. ಹೊಸ ವರ್ಷದ ಶುಭ ಕೋರುವ ನೆಪದಲ್ಲಿ ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಭರತ್‌ ರೆಡ್ಡಿ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳು ಬುಧವಾರ ರಾರಾಜಿಸಿರುವುದು.

ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಭರತ್‌ ಗೆದ್ದು ನಾಲ್ಕು ವರ್ಷಗಳಾಗುತ್ತಿದೆ. ಆದರೆ, ಇದುವರೆಗೆ ಒಮ್ಮೆಯೂ ಅವರ ಫ್ಲೆಕ್ಸ್‌ಗಳು ನಗರದಲ್ಲಿ ಹಾಕಿರಲಿಲ್ಲ. ಈಗ ಏಕಾಏಕಿ ಅವುಗಳು ಎಲ್ಲೆಡೆ ಕಾಣಿಸಿಕೊಂಡಿರುವುದು ಸಹಜವಾಗಿಯೇ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ADVERTISEMENT

ಫ್ಲೆಕ್ಸ್‌ ಮೇಲ್ಭಾಗದಲ್ಲಿ ಜೈ ವಿರೂಪಾಕ್ಷ ಎಂಬ ಬರಹವಿದ್ದು, ಅದರ ಅಡಿ ಬಸವೇಶ್ವರ, ಮಹರ್ಷಿ ವಾಲ್ಮೀಕಿ, ಕನಕದಾಸ, ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಭಾವಚಿತ್ರಗಳಿವೆ. ಇನ್ನೊಂದು ಬದಿಯಲ್ಲಿ ಭರತ್‌ ರೆಡ್ಡಿ ನಿಂತಿರುವ ಭಂಗಿಯ ದೊಡ್ಡ ಚಿತ್ರವಿದೆ. ‘ಟಚ್‌ ಫಾರ್‌ ಲೈಫ್‌ ಫೌಂಡೇಶನ್‌’ ಹೆಸರಿನಲ್ಲಿ ಈ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.

ತಾನು ಅಥವಾ ತನ್ನ ಮಗ ಭರತ್‌ ರೆಡ್ಡಿ, ವಿಜಯನಗರ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸಣ್ಣ ಸುಳಿವನ್ನುಉಪಚುನಾವಣೆ ಫಲಿತಾಂಶದ ನಂತರ ಸ್ವತಃ ಸೂರ್ಯನಾರಾಯಣ ರೆಡ್ಡಿ ಅವರೇ ಬಿಟ್ಟುಕೊಟ್ಟಿದ್ದರು. ಅದರ ಸಿದ್ಧತೆಯ ಭಾಗವಾಗಿಯೇ ಈ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ ಎನ್ನಲಾಗಿದೆ.

ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸೂರ್ಯನಾರಾಯಣ ರೆಡ್ಡಿ ಅವರೇ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ‘ರಾಜ್ಯದಲ್ಲಿ ಸ್ಥಿರ ಸರ್ಕಾರ ಇಲ್ಲದಿರುವುದು, ಯಾವುದೇ ಸಂದರ್ಭದಲ್ಲಿ ಪುನಃ ಚುನಾವಣೆ ನಡೆಯಬಹುದು’ ಎಂಬ ಕಾರಣಗಳನ್ನು ಬೆಂಬಲಿಗರಿಗೆ ಕೊಟ್ಟು ರೆಡ್ಡಿ ಸ್ಪರ್ಧಿಸಲು ಮನಸ್ಸು ಮಾಡಿರಲಿಲ್ಲ.

ಆದರೆ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಪರ ಕೆಲಸ ನಿರ್ವಹಿಸಿದ್ದರು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲುಂಡರೂ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಭದ್ರ ನೆಲೆಯಿದೆ. ಸಾಂಪ್ರದಾಯಿಕ ಮತಗಳಿವೆ ಎಂಬುದನ್ನು ಅರಿತ ಸೂರ್ಯನಾರಾಯಣ ರೆಡ್ಡಿ, ಕ್ಷೇತ್ರಕ್ಕೆ ಬಂದು ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಕಚೇರಿ ತೆರೆಯುವ ಮಾತುಗಳನ್ನು ಆಡಿದ್ದಾರೆ.

‘ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ನಾಯಕರಿಲ್ಲ. ನೀವೇ ಕ್ಷೇತ್ರದ ಜವಾಬ್ದಾರಿ ವಹಿಸಿಕೊಳ್ಳಬೇಕು. ಮುಂದಿನ ಚುನಾವಣೆಗೆ ನೀವೇ ನಿಲ್ಲಬೇಕು. ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಪಕ್ಷದ ಸ್ಥಳೀಯ ಮುಖಂಡರು ರೆಡ್ಡಿ ಅವರಿಗೆ ಮನವಿ ಮಾಡಿಕೊಂಡಿದ್ದರು.

‘ಈ ಚುನಾವಣೆಯಲ್ಲಿ ನಾವು ನಯಾ ಪೈಸೆ ಖರ್ಚು ಮಾಡದಿದ್ದರೂ ನಮಗೆ 57,000ಕ್ಕಿಂತ ಅಧಿಕ ಮತಗಳು ಬಿದ್ದಿವೆ. ಬಿಜೆಪಿಯವರು ಚುನಾವಣೆ ಗೆಲ್ಲಲು ಹಣದ ಹೊಳೆಯೇ ಹರಿಸಿದ್ದಾರೆ. ಒಂದಂತೂ ಸತ್ಯ ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುವುದು ಖಚಿತ. ಅದು ಹೇಗಂತ ಎಂದು ಈಗಲೇ ಹೇಳುವುದಿಲ್ಲ’ ಎಂದು ಸೂರ್ಯನಾರಾಯಣ ರೆಡ್ಡಿ ಮಾರ್ಮಿಕವಾಗಿ ಹೇಳಿದ್ದರು.

ಅದಾದ ನಂತರ ರೆಡ್ಡಿ ಅವರು ಮೇಲಿಂದ ಮೇಲೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ಆಂತರಿಕವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಮುಂದಿನ ಚುನಾವಣೆಯ ತಯಾರಿ ಎನ್ನುವುದರಲ್ಲಿ ಎರಡೂ ಮಾತಿಲ್ಲ ಎನ್ನುವುದು ಪುಷ್ಟೀಕರಿಸುತ್ತದೆ. ಈ ಕುರಿತು ಸೂರ್ಯನಾರಾಯಣ ರೆಡ್ಡಿ, ಭರತ್‌ ರೆಡ್ಡಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.