ADVERTISEMENT

ಹಗರಿಬೊಮ್ಮನಹಳ್ಳಿ | ಮನುಷ್ಯರ ದುರಾಸೆ; ಪಕ್ಷಿ ಸಂಕುಲಕ್ಕೆ ಅಪಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:03 IST
Last Updated 5 ಫೆಬ್ರುವರಿ 2026, 2:03 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು  ಎಸಿಎಫ್ ಡಿ.ಭಾಸ್ಕರ್ ಉದ್ಘಾಟಿಸಿದರು 
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು  ಎಸಿಎಫ್ ಡಿ.ಭಾಸ್ಕರ್ ಉದ್ಘಾಟಿಸಿದರು    

ಹಗರಿಬೊಮ್ಮನಹಳ್ಳಿ: ‘ಮನುಷ್ಯರ ದುರಾಸೆಗಾಗಿ ಪಕ್ಷಿ ಸಂಕುಲ ಅಪಾಯದಲ್ಲಿದೆ’ ಎಂದು ಧಾರವಾಡದ ಪಕ್ಷಿತಜ್ಞ ಪ್ರಕಾಶ ಗೌಡರ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ, ಗ್ರೀನ್ ಎಚ್‍ಬಿಎಚ್ ಮತ್ತು ಬಿಎನ್‍ಎಚ್‍ಎಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ವಲಸೆ ಹಕ್ಕಿ ದಿನ’ ಮತ್ತು ‘ವಿಶ್ವ ಜೌಗು ಪ್ರದೇಶ ದಿನಾಚರಣೆ’ಯಲ್ಲಿ ಮಾತನಾಡಿದರು.

ಪಕ್ಷಿ ಸಂಕುಲ ಇಲ್ಲದೆ ಮಾನವ ಬದುಕಲಾರ, ಬೆಳಗಿನ ಜಾವ ಪಕ್ಷಿಧ್ವನಿ ಆಲಿಸಿದರೆ ಅದು ಧ್ಯಾನಕ್ಕೆ ಸಮ. ಪಕ್ಷಿಗಳಿಂದ ಪ್ರಕೃತಿಗೆ ನೀಡಿದ ಕೊಡುಗೆ ಅಪಾರ, ಆದರೆ ಹಣದ ಆಸೆಗಾಗಿ ಪಕ್ಷಿಗಳನ್ನು ಕೊಲ್ಲುವ ಅವುಗಳ ಕೊಕ್ಕರೆಯನ್ನು ಮಾರಾಟ ಮಾಡುವ ಘಟನೆಗಳು ಆವ್ಯಾಹತವಾಗಿ ನಡೆಯುತ್ತಿವೆ, ಈ ಕುರಿತು ಅರಿವು ಮೂಡಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.

ADVERTISEMENT

ವಿದೇಶದಿಂದ ವಲಸೆ ಬರುವ ಬಾರ್ ಹೆಡೆಡ್ ಗೂಸ್(ಪಟ್ಟಿ ತಲೆ ಹೆಬ್ಬಾತು), ಮ್ಯಾಂಕ್ಸ್‍ಶಿಯರ್ ವಾಟರ್ ಹಾಗೂ ಚಿಟಗುಬ್ಬಿ, ಹಾರ್ನ್‍ಬಿಲ್(ದಾಸಮಂಗಟ್ಟೆ) ಸೇರಿದಂತೆ ವಿವಿಧ ರೆಕ್ಕೆ ಮಿತ್ರರ ಜೀವನ ಚಕ್ರ ಕುರಿತು ಎಳೆಎಳೆಯಾಗಿ ಬಿಡಿಸಿದ ಕಥಾ ಹಂದರದ ಶೈಲಿ ಗಮನ ಸೆಳೆಯಿತು.

ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಡಿ.ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಬಾನಾಡಿಗಳು ಮತ್ತು ವನ್ಯಜೀವಿಗಳ ಆವಾಸ ಪ್ರದೇಶವನ್ನು ರಕ್ಷಿಸುವ ಹೊಣೆ ಯುವಕರ ಮೇಲಿದೆ, ಈ ಕುರಿತು ಪ್ರೌಢಶಾಲೆ ಹಂತದಿಂದಲೇ ವಿದ್ಯಾರ್ಥಿಗಳಿಗೆ ಅಂಕಸಮುದ್ರ ಪಕ್ಷಿಧಾಮದಲ್ಲಿನ ಜೀವವೈವಿಧ್ಯ ಕುರಿತು ಸಮಗ್ರ ಪರಿಚಯಿಸಬೇಕು ಎಂದರು.

ಪಕ್ಷಿತಜ್ಞ ವಿಜಯ್ ಇಟ್ಟಿಗಿ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ವಿದೇಶದ ವಲಸೆ ಹಕ್ಕಿ ಲಿಟಲ್ ಟರ್ನ್ 3ವರ್ಷಗಳ ಹಿಂದೆ 60ಗೂಡು ನಿರ್ಮಿಸುವ ಮೂಲಕ ಸಂತಾನೋತ್ಪತ್ತಿ ನಡೆಸಿದ್ದವು, ಈಗ ಕೇವಲ 2 ಉಳಿದಿವೆ, ಇದು ದುರಂತಕ್ಕೆ ಸಾಕ್ಷಿಯಾಗಿದೆ. ಇದು ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ, ಈ ಕುರಿತು ಆಂದೋಲನ ನಡೆಯಬೇಕು ಎಂದು ತಿಳಿಸಿದರು.

ವಲಯ ಅರಣ್ಯಾಧಿಕಾರಿಗಳಾದ ಆರ್.ಉಮೇಶ್, ಕೆ.ಎಂ.ನಾಗರಾಜ್, ಕಿರಣ್‍ಕುಮಾರ್ ಕಲ್ಲಮ್ಮನವರ್, ಗ್ರೀನ್ ಎಚ್‍ಬಿಎಚ್‍ನ ಆನಂದ್‍ಬಾಬು, ಶಾಲೆಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್ ಮಾತನಾಡಿದರು.

ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರೀನ್ ಎಚ್‍ಬಿಎಚ್‍ನಿಂದ ಹಮ್ಮಿಕೊಂಡಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಸ್.ವಿಜಯಕುಮಾರ್, ಯು.ವಾಯು, ಹೃತಿಕ್ ಹಾಗೂ ವಿದ್ಯಾ, ಪುಷ್ಪಾ, ರುಕ್ಮಿಣಿ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಕೆ.ನಾಗರಾಜ, ಸದಸ್ಯ ಎಸ್.ಕೊಟ್ರೇಶ್, ಗ್ರೀನ್ ಎಚ್‍ಬಿಎಚ್‍ನ ವಿಕಾಸ್ ಬಾಫನಾ, ಅಶೋಕ ಭಾವಿಕಟ್ಟಿ, ಕೆ.ಎಂ.ಪ್ರಶಾಂತ್, ರಾಜ್ಯ ಸಂಪನ್ಮೂಲ ವ್ಯಕ್ತಿ ಕೊಟ್ರೇಶ್ ಸೊನ್ನದ್, ಬಿಎನ್‍ಎಚ್‍ಎಸ್ ಸಂಶೋಧಕ ಎಚ್.ರಮೇಶ್, ಡಿಆರ್‌ಎಫ್‍ಒ ಹರೀಶ್, ಅರಣ್ಯಾಧಿಕಾರಿಗಳಾದ ಲೀಲಾ, ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.