ADVERTISEMENT

ಕೋವಿಡ್ ನಿರ್ವಹಣೆ ವಿಫಲ, ಮೋದಿಯವರದ್ದು ಭಂಡತನದ ಪರಮಾವಧಿ: ಸಂತೋಷ್ ಲಾಡ್

ಜನರ ದೋಚುತ್ತಿರುವ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 4:08 IST
Last Updated 21 ಜುಲೈ 2021, 4:08 IST
ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಕೋವಿಡ್ ಸಹಾಯ ಹಸ್ತದ ಪರಿಶೀಲನಾ ಸಭೆಯಲ್ಲಿ ಮುಖಂಡ ಸಂತೋಷ್ ಲಾಡ್ ಮಾತನಾಡಿದರು
ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಕೋವಿಡ್ ಸಹಾಯ ಹಸ್ತದ ಪರಿಶೀಲನಾ ಸಭೆಯಲ್ಲಿ ಮುಖಂಡ ಸಂತೋಷ್ ಲಾಡ್ ಮಾತನಾಡಿದರು   

ಹಗರಿಬೊಮ್ಮನಹಳ್ಳಿ: ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಸೋತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ನಡೆದ ಕೋವಿಡ್ ಸಹಾಯ ಹಸ್ತ ಕಾರ್ಯಕ್ರಮದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಕೇವಲ ಪ್ರಚಾರದಲ್ಲಿ ಮುಂದಿದೆ. ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರದ ಆದೇಶ ಕೇವಲ ಕಡತದಲ್ಲಿ ಮಾತ್ರ ಉಳಿದಿದೆ. ಯಾರಿಗೂ ಅದರ ಸೌಲಭ್ಯ ದೊರತಿಲ್ಲ ಎಂದು ದೂರಿದರು.

ಕಳೆದ ಏಳು ವರ್ಷದಿಂದ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಹಿಂದಿನ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರು ಬಡವರ ಕೈಯಲ್ಲಿ ಹಣ ಉಳಿಸುವ ಕೆಲಸ ಮಾಡಿದರು, ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲವನ್ನೂ ದೋಚುತ್ತಿದೆ. ಈ ಕುರಿತು ಎರಡೂ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯುವಕರಿಗೆ ತಿಳಿಸಬೇಕು.

ADVERTISEMENT

ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ ಶೋಧನೆ ಆಗಬೇಕಿದೆ, ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಅಗತ್ಯ ಇದೆ. ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಾಗಿ ಇಂದಿನಿಂದಲೇ ಸಿದ್ಧರಾಗಬೇಕಿದೆ ಎಂದರು.

ಶಾಸಕ ಎಸ್.ಭೀಮನಾಯ್ಕ ಮಾತನಾಡಿ, ರಾಜ್ಯದಲ್ಲಿ ಆರೋಗ್ಯ ಇಲಾಖೆ ಕೋವಿಡ್‍ ನಿರ್ವಹಣೆ ನೆಪದಲ್ಲಿ ಭಾರಿ ಭ್ರಷ್ಟಾಚಾರ ಎಸಗಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕರಿಗೆ ಅವಧಿ ಮೀರಿದರೂ ವ್ಯಾಕ್ಸಿನ್‍ನ ಎರಡನೇ ಡೋಸ್ ಕೊಡಲಾಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ವ್ಯಾಕ್ಸಿನ್ ಖರೀದಿಗೆ ತಲಾ ₹ 1ಕೋಟಿ ನೀಡಲು ಮುಂದಾಗಿದ್ದರೂ ಮುಖ್ಯಮಂತ್ರಿ ಸ್ವೀಕಾರ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಂಡೂರು ಶಾಸಕ ಈ.ತುಕಾರಂ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಗ್ರಾಮಾಂತರ ವಿಭಾಗದ ಅಧ್ಯಕ್ಷ ಬಿ.ವಿ.ಶಿವಯೋಗಿ, ನಗರ ಘಟಕದ ಅಧ್ಯಕ್ಷ ಮೊಹ್ಮದ್ ರಫೀಕ್, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ ಸೋಮಪ್ಪ ಮಾತನಾಡಿದರು.

ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ, ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್, ಮುಖಂಡರಾದ ಅಕ್ಕಿ ತೋಟೇಶ್, ಹೆಗ್ಡಾಳ್ ರಾಮಣ್ಣ, ಇಮಾಮ್ ನಿಯಾಜಿ, ಹೆಗ್ಡಾಳ್ ರಾಮಣ್ಣ, ನೆಲ್ಲು ಇಸ್ಮಾಯಿಲ್, ಪವಾಡಿ ಹನುಮಂತಪ್ಪ, ಡಿಶ್ ಮಂಜುನಾಥ, ಚಿಂತ್ರಪಳ್ಳಿ ದೇವೇಂದ್ರಪ್ಪ, ಡಿ.ಎಂ.ಅಜೀಜುಲ್ಲಾ, ಯಶೋಧಾ ಮಂಜುನಾಥ, ಶಾಹೀರಾಬಾನು, ನಾಗವೇಣಿ, ಕೆ.ನಾಗಮ್ಮ, ಕೊಚಾಲಿ ಸುಶೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.