ADVERTISEMENT

ಪಕ್ಷ ನಿಷ್ಠೆಗೆ ಗೌರವ ಎಷ್ಟೆನ್ನುವುದಕ್ಕೆ ನಾನೇ ಸಾಕ್ಷಿ: ಲಕ್ಷ್ಮಣ ಸವದಿ

ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಉಪಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 14:46 IST
Last Updated 29 ನವೆಂಬರ್ 2020, 14:46 IST
ಹೊಸಪೇಟೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೇಸರಿ ಬಣ್ಣದ ಪೇಟಾ ಧರಿಸಿಕೊಂಡು ಗಮನ ಸೆಳೆದರು
ಹೊಸಪೇಟೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೇಸರಿ ಬಣ್ಣದ ಪೇಟಾ ಧರಿಸಿಕೊಂಡು ಗಮನ ಸೆಳೆದರು   

ಹೊಸಪೇಟೆ: ‘ಬಿಜೆಪಿಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ಎಷ್ಟಿದೆ ಎನ್ನುವುದಕ್ಕೆ ನಾನೇ ಜೀವಂತ ಸಾಕ್ಷಿ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಬಿಜೆಪಿಯಿಂದ ಭಾನುವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ‘ಗ್ರಾಮ ಸ್ವರಾಜ್ಯ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘2018ರ ವಿಧಾನಸಭೆ ಚುನಾವಣೆಯಲ್ಲಿ ನನಗೆ 16 ಕ್ಷೇತ್ರಗಳ ಜವಾಬ್ದಾರಿ ವಹಿಸಿದ್ದರು. ಈ ವೇಳೆ ನಾನು ನನ್ನ ಸ್ವಂತ ವಿಧಾನಸಭೆ ಕ್ಷೇತ್ರಕ್ಕೆ ನಿರ್ಲಕ್ಷ್ಯ ತೋರಿದ್ದರಿಂದ ಚುನಾವಣೆಯಲ್ಲಿ ಸೋತಿದ್ದೆ. ಆದರೆ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನ್ನುವುದನ್ನು ಹಿರಿಯ ಮುಖಂಡರು ಗುರುತಿಸಿ, ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಇಡೀ ದೇಶದಲ್ಲಿ ಇಷ್ಟು ದೊಡ್ಡ ಗೌರವ ಯಾರಿಗೂ ಸಿಕ್ಕಿಲ್ಲ’ ಎಂದು ಹೇಳಿದರು.

‘ಬಿಜೆಪಿ ಇತರೆ ಪಕ್ಷಗಳಿಗಿಂತ ವಿಭಿನ್ನ ಎನ್ನುವುದಕ್ಕೆ ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯೇ ಸಾಕ್ಷಿ. ಕಾಂಗ್ರೆಸ್‌ ಪಕ್ಷವು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸಿದರೆ, ಜೆಡಿಎಸ್‌ ಪಕ್ಷ ಎಚ್‌.ಡಿ. ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ರಾಜ್ಯಸಭೆಗೆ ಕಳುಹಿಸಿತು. ಆದರೆ, ಬಿಜೆಪಿಯು ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಅಶೋಕ್‌ ಗಸ್ತಿ, ಈರಣ್ಣ ಕಡಾಡಿ ಅವರನ್ನು ರಾಜ್ಯಸಭೆಗೆ ಕಳುಹಿಸಿತು. ಇಷ್ಟೇ ಅಲ್ಲ, ಸಿದ್ಧಿ ಸಮುದಾಯದ ಒಬ್ಬ ಸಾಮಾನ್ಯ ವ್ಯಕ್ತಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಮಾಡಲಾಗಿದೆ. ಪಕ್ಷಕ್ಕಾಗಿ ಕಷ್ಟಪಟ್ಟು ದುಡಿಯುವ ಸಾಮಾನ್ಯ ಕಾರ್ಯಕರ್ತನನ್ನು ದೆಹಲಿಯ ಮುಖಂಡರು ಯಾವ ರೀತಿ ಗುರುತಿಸುತ್ತಾರೆ ಎನ್ನುವುದಕ್ಕೆ ತಾಜಾ ನಿದರ್ಶನ’ ಎಂದು ತಿಳಿಸಿದರು.

ADVERTISEMENT

‘ಮುಂಬರುವ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಶೇ 80ರಷ್ಟು ಕಡೆಗಳಲ್ಲಿ ಗೆಲ್ಲಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಏಳು ಸಾವಿರ ಪಂಚಾಯಿತಿ ಸದಸ್ಯರ ಪೈಕಿ 3,000 ಅಭ್ಯರ್ಥಿಗಳು ಬಿಜೆಪಿಯವರು ಜಯಿಸಬೇಕು. ಇದರೊಂದಿಗೆ ಮುಂದಿನ 50 ವರ್ಷಗಳ ಕಾಲ ಬಿಜೆಪಿ ಈ ದೇಶ ಆಳುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದರು.

‘ಕಾಂಗ್ರೆಸ್‌ ಮುಕ್ತ ಗ್ರಾಮ ಪಂಚಾಯಿತಿ’:

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುತ್ತಿದ್ದಾರೆ. ನಾವೆಲ್ಲ ಸೇರಿಕೊಂಡು ಕಾಂಗ್ರೆಸ್‌ ಮುಕ್ತ ಗ್ರಾಮ ಪಂಚಾಯಿತಿ ಮಾಡಬೇಕು. ಬಿಜೆಪಿಯಲ್ಲಿ ವ್ಯಕ್ತಿ ದೊಡ್ಡವನಲ್ಲ. ಪಕ್ಷ ಮುಖ್ಯ’ ಎಂದರು.

‘ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಲು ಶ್ರಮಿಸಿದ ಕಾರ್ಯಕರ್ತರ ಗೆಲುವಿಗೆ ಈಗ ನಾವು ಶ್ರಮಿಸುತ್ತೇವೆ. ಎಲ್ಲ ಪಂಚಾಯಿತಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಧಿಕಾರ ನಡೆಸುವಂತಾಗಬೇಕು’ ಎಂದು ಹೇಳಿದರು.

ಅರಣ್ಯ ಸಚಿವ ಆನಂದ್‌ ಸಿಂಗ್‌, ಸಂಸದ ವೈ.ದೇವೇಂದ್ರಪ್ಪ, ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಸ್‌. ನವೀನ್‌, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಂಗಾರು ಹನುಮಂತ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಮುಖಂಡರಾದ ಸಿದ್ದೇಶ್‌ ಯಾದವ್‌, ನೇಮರಾಜ ನಾಯ್ಕ, ಚಂದ್ರ ನಾಯ್ಕ, ತಿಪ್ಪೇಸ್ವಾಮಿ, ಅಯ್ಯಾಳಿ ತಿಮ್ಮಪ್ಪ ಇದ್ದರು.

‘ಆರ್ಥಿಕ ಸಂಕಷ್ಟದ ನಡುವೆ ಜಿಲ್ಲೆ ಘೋಷಣೆ’

‘ರಾಜ್ಯದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ವಿಜಯನಗರ ಜಿಲ್ಲೆ ಘೋಷಿಸಲಾಗಿದೆ. ಆನಂದ್‌ ಸಿಂಗ್‌ ಅವರು ಶಾಸಕ ಸ್ಥಾನ ತ್ಯಾಗ ಮಾಡಿ ಬಂದಿದ್ದಕ್ಕಾಗಿ ರಾಜ್ಯ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸಿದೆ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
‘ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಆನಂದ್‌ ಸಿಂಗ್‌ ಅವರು ಸಿಕ್ಕಾಗಲೆಲ್ಲ, ‘ವಿಜಯನಗರ ಜಿಲ್ಲೆ ರಚನೆಗೆ ಸಹಕಾರ ಕೊಡಬೇಕು’ ಎಂದು ಕೋರುತ್ತಿದ್ದರು. ಈಗ ಅವರ ಆಸೆ ಈಡೇರಿದೆ’ ಎಂದರು.

ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ‘ವಿಜಯನಗರ ಜಿಲ್ಲೆ ಘೋಷಣೆಯಾದರೂ ಸಹ ಈಗಲೂ ನನಗೆ ನಂಬಲು ಆಗುತ್ತಿಲ್ಲ. ಈಗಲೂ ಕ್ಷೇತ್ರದಲ್ಲಿ ಚರ್ಚೆಗಳು ನಡೆಯುತ್ತಿವೆ. ಅನೇಕರಿಗೆ ಈಗಲೂ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಬಂದಿಲ್ಲ. ನನ್ನ ಪರಿಸ್ಥಿತಿಯೂ ಕೂಡ ಅವರಂತೆ ಆಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.