ADVERTISEMENT

ಹನುಮಂತನಂತೆ ಬೆಂಕಿ ಹಚ್ಚಕ್ಕೂ ಬರುತ್ತೆ: ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 2:21 IST
Last Updated 25 ಆಗಸ್ಟ್ 2019, 2:21 IST
ಬಿ.ಎಲ್‌.ಸಂತೋಷ್
ಬಿ.ಎಲ್‌.ಸಂತೋಷ್   

ಬಳ್ಳಾರಿ: ‘ಹಿಂದೂ ಸಮಾಜವನ್ನು ಮತಾಂತರ, ಗೋಹತ್ಯೆ ಕಾಡುತ್ತಿದೆ. ಹಿಂದೂಗಳು ಗೌರವವಾಗಿ ನೋಡುವ ಎಲ್ಲವನ್ನೂ ಕೆಣಕಬೇಕು ಎಂದು ಅನೇಕರಿಗೆ ಅನ್ನಿಸುತ್ತದೆ. ಅಂಥವರಿಗೆ ಒಳ್ಳೆಯ ಮಾತಿನಲ್ಲಿ ಹೇಳೋದಕ್ಕೂ ಬರುತ್ತದೆ. ಹನುಮನಂತೆ ಬೆಂಕಿ ಹಚ್ಚೋಕು ಬರುತ್ತೆ. ಆದರೆ ಮೊದಲ ಉಪಯೋಗಿಸುವುದು ಒಳ್ಳೆಯ ಮಾತನ್ನೇ’ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಪ್ರತಿಪಾದಿಸಿದರು.

ತಾಲ್ಲೂಕಿನ ಮೋಕಾ ಗ್ರಾಮದಲ್ಲಿ ಶುಕ್ರವಾರ ಹನುಮಾನ್‌ ಗುಡಿಗೆ ಭೇಟಿ ನೀಡಿ ಮಾತನಾಡಿದ ಅವರು,‘ಹಿಂದೂ ಸಮಾಜವನ್ನು ಕಾಡುತ್ತಿರುವುದು ಮತಾಂತರ, ಗೋಹತ್ಯೆ. ಬುದ್ಧಿ ಕಲಿಸಲು ನಮ್ಮ ಸಂಸ್ಕೃತಿಯಲ್ಲಿ ನಾಲ್ಕು ಸಂಗತಿಗಳಿವೆ. ಸಾಮ, ದಾನ, ಭೇದದಿಂದ ಸಾಧ್ಯವಾಗದಿದ್ದರೆ ದಂಡ ಹಿಡಿಯಬೇಕಾಗುತ್ತದೆ’ ಎಂದರು.

‘ರಾಮಜನ್ಮಭೂಮಿಗೆ ಸಂಬಂಧಿಸಿ ನಾವು ಕೊಟ್ಟಿರುವ ದಾಖಲೆಗಳನ್ನುನೇರ ದೃಷ್ಟಿಯಿಂದ ನೋಡುವ ಸದ್ಬುದ್ಧಿಯನ್ನು ನ್ಯಾಯಾಧೀಶರಿಗೆ ಆ ಭಗವಂತ ಕೊಡಲಿ ಎಂದು ಪ್ರಾರ್ಥಿಸುವೆ. ದೇಗುಲ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಸರ್ಕಾರಜೊತೆಗಿದೆ ಎಂದಲ್ಲ, ಬದಲಿಗೆ ಸತ್ಯ ಇದೆ ಎಂದು. ನ್ಯಾಯಾಧೀಶರಿಗೆ ಭಕ್ತರ ಕೂಗು ಕೇಳುವಂತೆ ಹನುಮಮಾಲಾಧಾರಿಗಳು ಘೋಷಣೆ ಹಾಕಿ; ನಮ್ಮದು ಸತ್ಯದ ಭಕ್ತಿ, ಹುಚ್ಚು ಉನ್ಮಾದ ಅಲ್ಲ’ ಎಂದರು.

ADVERTISEMENT

‘ಮುಂಚೆ ಬೇರೆ ದೇಶದ ಪ್ರಧಾನಿಗಳು ಇಲ್ಲಿಗೆ ಬಂದರೆ ಕುತುಬ್‌ ಮಿನಾರ್‌ ತೋರಿಸುತ್ತಿದ್ದರು. ಈಗ ನಮ್ಮ ಪ್ರಧಾನಿ ಮೋದಿ ಗಂಗಾ ಆರತಿಯನ್ನು, ಮಹಾತ್ಮ ಗಾಂಧೀಜಿಯ ಸಬರಮತಿ ಆಶ್ರಮವನ್ನು ತೋರಿಸುತ್ತಾರೆ. ಸಾಂಸ್ಕೃತಿಕ ಪುನರುತ್ಥಾನದ ಕಡೆಗೆ ಇವತ್ತಿನ ಸಮಾಜ, ವ್ಯವಸ್ಥೆ ನಡೆಯುತ್ತಿದೆ’ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.