ADVERTISEMENT

ಬಳ್ಳಾರಿ | ಸ್ತನ ಕ್ಯಾನ್ಸರ್: ಜಾಗೃತಿ ಅಗತ್ಯ: ನಾಸಿರ್‌ ಹುಸೇನ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 1:51 IST
Last Updated 21 ಜನವರಿ 2026, 1:51 IST
ಬಳ್ಳಾರಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆಯ 2025-26 ನೇ ಸಾಲಿನ ವಾರ್ಷಿಕ ಮೌಲ್ಯಮಾಪನ ವರದಿ ಯೋಜನೆಯ ಹಸ್ತಾಂತರ ಕಾರ್ಯಕ್ರಮವನ್ನು ಮೇಯರ್‌ ಗಾದೆಪ್ಪ, ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌, ಶಾಸಕ ನಾರಾ ಭರತ್‌ ರೆಡ್ಡಿ ಉದ್ಘಾಟಿಸಿದರು
ಬಳ್ಳಾರಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆಯ 2025-26 ನೇ ಸಾಲಿನ ವಾರ್ಷಿಕ ಮೌಲ್ಯಮಾಪನ ವರದಿ ಯೋಜನೆಯ ಹಸ್ತಾಂತರ ಕಾರ್ಯಕ್ರಮವನ್ನು ಮೇಯರ್‌ ಗಾದೆಪ್ಪ, ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌, ಶಾಸಕ ನಾರಾ ಭರತ್‌ ರೆಡ್ಡಿ ಉದ್ಘಾಟಿಸಿದರು   

ಬಳ್ಳಾರಿ: ನಿಯಮಿತ ತಪಾಸಣೆ ಮತ್ತು ಆರಂಭಿಕ ಚಿಕಿತ್ಸೆ ಪಡೆದು ಜಾಗೃತಿ ವಹಿಸುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು ಎಂದು ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅಭಿಪ್ರಾಯಪಟ್ಟರು. 

‘ಸ್ವಸ್ಥ ಸೇತು’  ಯೋಜನೆಯಡಿಯ ‘ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ’ಯ 2025-26ನೇ ಸಾಲಿನ ವಾರ್ಷಿಕ ಮೌಲ್ಯಮಾಪನ ವರದಿಯನ್ನು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಹಸ್ತಾಂತರಿಸಲಾಯಿತು. ಈ ವೇಳೆ ಅವರು ಮಾತನಾಡಿದರು. 

‘ಜಿಲ್ಲೆಯಲ್ಲಿ 2025ರ ಫೆಬ್ರುವರಿಯಿಂದ ಡಿಸೆಂಬರ್ ಅವಧಿಯಲ್ಲಿ ‘ಸ್ವಸ್ಥ ಸೇತು - ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆಯಡಿ ಜಿಲ್ಲೆಯಲ್ಲಿ 537 ಆಶಾ ಕಾರ್ಯಕರ್ತೆಯರಿಗೆ ಸಮುದಾಯಗಳಲ್ಲಿ ತಪಾಸಣೆ ಕೈಗೊಳ್ಳುವ ಕುರಿತು ತರಬೇತಿ ನೀಡಲಾಗಿತ್ತು. ಅವರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸುಮಾರು 1,50,000 ಮಹಿಳೆಯರನ್ನು ತಪಾಸಣೆಗೆ ಒಳಪಡಿಸಿದ್ದರು. ಅದರಲ್ಲಿ 1,20,204 ಮಹಿಳೆಯರು ಸ್ವಯಂ ಪರೀಕ್ಷೆ ಕೈಗೊಂಡಿದ್ದರು. 42 ಮಹಿಳೆಯರು ಅನುಮಾನಾಸ್ಪದ ಲಕ್ಷಣ ಹೊಂದಿದ್ದರು. ಇವರಲ್ಲಿ 35 ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಅದರಲ್ಲಿ 15 ಜನ ಮಹಿಳೆಯರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 20 ಜನ ಮಹಿಳೆಯರಿಗೂ ಚಿಕಿತ್ಸೆ ನೀಡಲಾಗುವುದು’ ಎಂದರು.

ADVERTISEMENT

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ‘ಕ್ಯಾನ್ಸರ್ ತಡೆ ಹಾಗೂ ಆರಂಭದ ಹಂತದಲ್ಲೇ ಕಾಯಿಲೆ ಪತ್ತೆ ಹಚ್ಚುವಿಕೆ ಕುರಿತಂತೆ ಅರಿವು ಹೆಚ್ಚಿಸುವುದು ಮುಖ್ಯ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ‘ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯವು ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಜಾರಿಯಾಗಿದೆ. ಮುಂಬರುವ ದಿನಗಳಲ್ಲಿ ತಪಾಸಣಾ ಕಾರ್ಯವನ್ನು ಎಲ್ಲಾ ತಾಲ್ಲೂಕು ಮತ್ತು ಗ್ರಾಮಗಳಿಗೂ ವಿಸ್ತರಿಸಲಾಗುವುದು’ ಎಂದರು.

ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ವೈದ್ಯರು ಮತ್ತು ಆಶಾಕಾರ್ಯಕರ್ತೆಯರಿಗೆ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ ವಿತರಿಸಲಾಯಿತು.

ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ, ಬಿಎಂಸಿಆರ್‌ಸಿ ನಿರ್ದೇಶಕ ಗಂಗಾಧರ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಲ್ಲಾ ರಮೇಶ್ ಬಾಬು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.