
ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಪಟ್ಟಣದ 20ನೇ ವಾರ್ಡ್‌ನ ದೇವಿನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ ಬುಧವಾರ ನಸುಕಿನಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ನಿಟ್ಟೂರು ಪ್ರಸಾದ್ ರಾವ್ (75), ವಿಜಯ (70), ಸಂಧ್ಯಾ (35) ಎಂದು ಗುರುತಿಸಲಾಗಿದೆ.
ತೀವ್ರವಾಗಿ ಗಾಯಗೊಂಡ ಪದ್ಮಾ (70) ಹಾಗೂ ಬ್ರಹೇಶ್ವರರಾವ್ (45) ಅವರನ್ನು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ನಿಟ್ಟೂರು ಗ್ರಾಮದವರಾದ, ಸದ್ಯ ಸಿರುಗುಪ್ಪ ನಗರದಲ್ಲಿ ವಾಸವಾಗಿದ್ದ ಕುಟುಂಬದ ಐವರೂ ತಮಿಳುನಾಡಿನ ದೇವಸ್ಥಾನವೊಂದಕ್ಕೆ ತೆರಳಿ ವಾಪಸ್ಸು ಬರುತ್ತಿದ್ದರು. ಮನೆ ತಲುಪುವ ವೇಳೆ ಅಪಘಾತವಾಗಿದೆ. ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ, ಈ ಅವಘಢ ಸಂಭವಿಸಿರಬಹುದು ಎಂದು ಹೇಳಲಾಗಿದೆ. ಅಪಘಾತದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸ್ಥಳಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ ಭೇಟಿ ನೀಡಿ ಪರಿಶೀಲಿಸಿದರು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.