ADVERTISEMENT

₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 19:44 IST
Last Updated 31 ಡಿಸೆಂಬರ್ 2025, 19:44 IST
ಶಾಸಕ ನಾಗೇಂದ್ರ ಅವರ ಆಪ್ತ ವಿಶ್ವನಾಥ್‌ ಕುಟುಂಬಸ್ಥರು ವಿಚಾರಣೆಯಲ್ಲಿ ಭಾಗಿಯಾಗಿ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಿಂದ ಹೊರಬರುತ್ತಿರುವುದು. 
ಶಾಸಕ ನಾಗೇಂದ್ರ ಅವರ ಆಪ್ತ ವಿಶ್ವನಾಥ್‌ ಕುಟುಂಬಸ್ಥರು ವಿಚಾರಣೆಯಲ್ಲಿ ಭಾಗಿಯಾಗಿ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಿಂದ ಹೊರಬರುತ್ತಿರುವುದು.    

ಬಳ್ಳಾರಿ: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ), ಬುಧವಾರ ಶಾಸಕ ಬಿ. ನಾಗೇಂದ್ರ ಅವರ ಆಪ್ತರ ಕುಟುಂಬಸ್ಥರನ್ನು ಇಲ್ಲಿ ವಿಚಾರಣೆ ನಡೆಸಿತು. 

ಬೆಳಿಗ್ಗೆ ಬಳ್ಳಾರಿಗೆ ಬಂದ ಸಿಬಿಐ ಅಧಿಕಾರಿಗಳ ಎರಡು ತಂಡಗಳು ನಗರದ ತೇರುಬೀದಿಯಲ್ಲಿರುವ ವಿಶ್ವನಾಥ್‌ ಮತ್ತು ಹುಸೇನ್‌ ನಗರದಲ್ಲಿರುವ ಮಾರುತಿ ಎಂಬುವರ ಮನೆಗಳ ಮೇಲೆ ದಾಳಿ ನಡೆಸಿತು. ಈ ಇಬ್ಬರೂ ನಾಗೇಂದ್ರ ಅವರ ಮನೆಯ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.  

ದಾಳಿ ವೇಳೆ ವಿಶ್ವನಾಥ್‌ ಮತ್ತು ಮಾರುತಿ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಇಬ್ಬರ  ಕುಟುಂಬಸ್ಥರನ್ನು ಪೊಲೀಸ್‌ ಠಾಣೆಗಳಿಗೆ ಕರೆದೊಯ್ದು ವಿಚಾರಣೆ ಮಾಡಲಾಯಿತು. ವಿಶ್ವನಾಥ್‌ ಕುಟುಂಬಸ್ಥರನ್ನು ಬ್ರೂಸ್‌ಪೇಟೆ ಪೊಲೀಸ್‌ ಠಾಣೆಗೆ ಕರೆದೊಯ್ದರೆ, ಮಾರುತಿ ಮನೆಯವರನ್ನು ಗಾಂಧಿನಗರ ಠಾಣೆಗೆ ಕರೆದೊಯ್ದು ಪ್ರಶ್ನಿಸಲಾಯಿತು. 

ADVERTISEMENT

‘ಮಧ್ಯಾಹ್ನ 12.30ರಿಂದ ಸಂಜೆ 4ರವರೆಗೆ ಕುಟುಂಬಸ್ಥರನ್ನು ವಿಚಾರಣೆ ಮಾಡಿದ ಸಿಬಿಐ ಅಧಿಕಾರಿಗಳು ಬಳಿಕ ನಿರ್ಗಮಿಸಿದರು’ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.  

‘ಭದ್ರತಾ ವ್ಯವಸ್ಥೆ ಮಾಡಿಕೊಡುವಂತೆ ಸಿಐಬಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯನ್ನು ಕೋರಿದ್ದರು. ನಿರ್ದಿಷ್ಟ ಜಾಗದಲ್ಲಿ ಭದ್ರತೆ ಬೇಕು ಎಂದು ಅವರೇನೂ ಕೇಳಿರಲಿಲ್ಲ. ತನಿಖೆಗೆ ಠಾಣೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಅದರಂತೆ ಕೆಲ ಮಂದಿಯನ್ನು ಕರೆ ತಂದು ವಿಚಾರಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ‘ಪ್ರಜಾವಾಣಿ’ಗೆ ತಿಳಿಸಿದರು. 

ಬ್ಯಾಂಕ್‌ ಅಧಿಕಾರಿಯ ವಿಚಾರಣೆ: ವಿಶ್ವನಾಥ್ ಅವರ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಬಳ್ಳಾರಿಯ ಬ್ಯಾಂಕ್‌ವೊಂದರ ಪ್ರಾದೇಶಿಕ ವ್ಯವಸ್ಥಾಪಕರೊಬ್ಬರನ್ನು ಕರೆಸಿ ವಿಚಾರಣೆ ಮಾಡಲಾಯಿತು ಎಂದು ಗೊತ್ತಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 

ಪ್ರಕರಣದ ಹಿನ್ನೆಲೆ:

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಸಮಗ್ರ ಸಿಬಿಐ ತನಿಖೆ ಕೋರಿ ಶಾಸಕರಾದ ಬಸನಗೌಡ ಪಾಟೀಲ​ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್​ ಬಂಗಾರಪ್ಪ ಹೈಕೋರ್ಟ್‌ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದರು.‌ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತನಿಖೆಯನ್ನು ಸಿಬಿಐಗೆ ವಹಿಸಿ ಜುಲೈ 1ರಂದು ಆದೇಶ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.