ADVERTISEMENT

ವಿವಾದಿತ ಬಿ1 ಗಣಿಗಳ ವರ್ಗೀಕರಿಸಿ ‘ಸುಪ್ರೀಂ’ಗೆ ಸಿಇಸಿ ವರದಿ

ಕರ್ನಾಟಕ– ಆಂಧ್ರ ಗಡಿ ವಿವಾದದಲ್ಲಿ ಸಿಲುಕಿ ದಶಕದಿಂದಲೂ ಅತಂತ್ರ ಸ್ಥಿತಿಯಲ್ಲಿದ್ದ ಗುತ್ತಿಗೆಗಳು  

ಆರ್. ಹರಿಶಂಕರ್
Published 31 ಮೇ 2025, 5:16 IST
Last Updated 31 ಮೇ 2025, 5:16 IST
   

ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವೆ ಹಾದು ಹೋಗಿರುವ ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಏಳು ಬಿ–1 ವರ್ಗದ ಗಣಿ ಗುತ್ತಿಗೆಗಳನ್ನು ವರ್ಗೀಕರಿಸಿ ಕೇಂದ್ರದ ಉನ್ನತಾಧಿಕಾರ ಸಮಿತಿಯು ಮೇ 16ರಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ. 

ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಬಳ್ಳಾರಿ, ಚಿತ್ರದುರ್ಗ, ತುಮಕೂರಿನ ಒಟ್ಟು 166 ಗಣಿಗಳ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ 2011ರಲ್ಲಿ ನಿಷೇಧ ಹೇರಿತ್ತು. ಈ ಎಲ್ಲ ಗಣಿಗಳನ್ನು  ವರ್ಗೀಕರಿಸುವಂತೆ ಸುಪ್ರೀಂ ಕೋರ್ಟ್‌ ಜಂಟಿ ಸಮಿತಿಯನ್ನು ರಚಿಸಿತ್ತಾದರೂ, ಅಂತರರಾಜ್ಯ ಗಡಿಗೆ ಹೊಂದಿಕೊಂಡಿದ್ದ ಈ ಏಳು ಗಣಿಗಳನ್ನು ವರ್ಗೀಕರಣ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ‘ಬಿ–1’  ಎಂಬ ವಿಶೇಷ ವರ್ಗದಲ್ಲಿ ಇವುಗಳನ್ನು ಇರಿಸಿ, ಅಂತರರಾಜ್ಯ ಗಡಿ ಗುರುತು ಮುಗಿದ ಬಳಿಕ ವರ್ಗೀಕರಿಸಲು ನಿರ್ಧರಿಸಲಾಗಿತ್ತು. 

ಸದ್ಯ, ಸರ್ವೇ ಆಫ್‌ ಇಂಡಿಯಾ ಗುರುತಿಸಿದ ಅಂತರರಾಜ್ಯ ಗಡಿಯನ್ನು ಆಧಾರವಾಗಿಟ್ಟುಕೊಂಡು, ಎರಡೂ ರಾಜ್ಯಗಳ ಜಂಟಿ ಸರ್ವೆ ಸಮಿತಿ ಮತ್ತು ಸುರತ್ಕಲ್‌ನ ಎನ್‌ಐಟಿಕೆ ತಜ್ಞರ ತಂಡ ಏಳು ಗಣಿಗಳ ಎಲ್ಲೆಗಳನ್ನು ಗುರುತಿಸಿವೆ. ಇಲ್ಲಿ ಲಭ್ಯವಾದ ಅಂಶಗಳನ್ನು ಇಟ್ಟುಕೊಂಡು ಸಿಇಸಿ ಏಳು ಗಣಿಗಳ ವರ್ಗೀಕರಣ ಮಾಡಿದೆ. 

ADVERTISEMENT

ಗಣಿ ಗುತ್ತಿಗೆ ವರ್ಗೀಕರಣ

‘ಸಿ’ ವರ್ಗ:  ‘ಸುಗ್ಗುಲಮ್ಮ ಗುಡ್ಡ ಮೈನಿಂಗ್‌ ಅ್ಯಂಡ್‌ ಕಂಪನಿ’ ಮತ್ತು ‘ಬಳ್ಳಾರಿ ಮೈನಿಂಗ್‌ ಕಾರ್ಪೊರೇಷನ್‌’ನ ಗಣಿ ಗುತ್ತಿಗೆಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದೆ.

ಮಿತಿ ಮೀರಿದ ಒತ್ತುವರಿ, ಅಕ್ರಮ, ಗುತ್ತಿಗೆ ಪ್ರದೇಶದ ಶೇ 15ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅಥವಾ ಓವರ್‌ಬರ್ಡನ್ ಡಂಪಿಂಗ್ ಮಾಡಿರುವುದನ್ನು ಗಮನಿಸಿ ಈ ಎರಡು ಗಣಿಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶಗಳ ಪ್ರಕಾರ ‘ಸಿ’ ವರ್ಗದ ಗುತ್ತಿಗೆಗಳು ರದ್ದಾಗಲಿವೆ. ಹಿಂದೆ ಗಣಿಗಾರಿಕೆ ಮಾಡಿದ ಖನಿಜದ ಸಂಪೂರ್ಣ ದಾಸ್ತಾನು, ಮಾರಾಟದ ಆದಾಯ ಮತ್ತು ದಾಸ್ತಾನು ಮಾಡಿದ ಖನಿಜವನ್ನು ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಶಿಫಾರಸು ಮಾಡಲಾಗಿದೆ.  

‘ಬಿ’ ವರ್ಗ: ‘ಟಿ. ನಾರಾಯಣ ರೆಡ್ಡಿ’, ‘ಎನ್‌.ರತ್ನಯ್ಯ’, ‘ಹಿಂದ್‌ ಟ್ರೇಡರ್ಸ್‌’, ‘ಮೆಹಬೂಬ್‌ ಟ್ರಾನ್ಸ್‌ಪೋರ್ಟ್‌ ಕಂಪನಿ’ಗಳ ಗಣಿ ಗುತ್ತಿಗೆಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗಿದೆ. 

ಸೂಚಿತ ನಿಬಂಧನೆಗಳನ್ನು ಪೂರೈಸಿದ ಬಳಿಕ 'ಬಿ' ವರ್ಗದ ಗಣಿಗಳು ಗಣಿಗಾರಿಕೆ ಕೈಗೊಳ್ಳಲು ಅವಕಾಶವಿರಲಿದೆ. ಹಿಂದೆ ಗಣಿಗಾರಿಕೆ ಮಾಡಿದ ವಸ್ತುಗಳ ಮಾರಾಟದಿಂದ ಬಂದ ಆದಾಯದ ಶೇ 15ರಷ್ಟನ್ನು ಈ ಗಣಿಗಳು ಹಿಂದಿರುಗಿಸಬೇಕು. ‘ಪುನಶ್ಚೇತನ ಮತ್ತು ಪುನರ್ವಸತಿ’ ಯೋಜನೆ ( ಆರ್ ಆ್ಯಂಡ್‌ ಆರ್) ಯಶಸ್ವಿ ಅನುಷ್ಠಾನ, ನಿರ್ದಿಷ್ಟ ಅನುಮೋದನೆ ಬಳಿಕ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತದೆ. 

‘ಎ’ ವರ್ಗ: ‘ವಿಭೂತಿಗುಡ್ಡ ಮೈನ್ಸ್ ಪ್ರೈ.ಲಿ.’ಯ ಗಣಿಯನ್ನು ‘ಎ’ ವರ್ಗಕ್ಕೆ ಸೇರಿಸಿ ಸಿಇಸಿ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದೆ. ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದು ಗಣಿ  ಕಾರ್ಯಾರಂಭ ಮಾಡಲು ಅನುವು ಮಾಡಿಕೊಡಬಹುದು ಎಂದು ವರದಿಯಲ್ಲಿ ಸಿಇಸಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.