
ಸಂಡೂರು: ‘ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಶಾಲೆಗಳ ಆವರಣದಲ್ಲಿ ಕುಡುಕರ ಹಾವಳಿಯನ್ನು ತಪ್ಪಿಸಿ ಬಾಲಕಿಯರಿಗೆ ರಕ್ಷಣೆ ಒದಗಿಸುವುದು ಪೋಲಿಸ್ ಇಲಾಖೆಯ ಆದ್ಯ ಕರ್ತವ್ಯ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಶೌಚಾಲಯಕ್ಕಾಗಿ ಪ್ರತ್ಯೇಕ ನೂತನ ಕಟ್ಟಡಗಳನ್ನು ನಿರ್ಮಿಸಲು ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ಪಟ್ಟಣದ ಸರ್ಕಾರಿ ಎಪಿಎಂಸಿ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲಾ ಮಕ್ಕಳ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಯಲ್ಲಿ ಮಕ್ಕಳ ವಿಶೇಷ ಸಭೆಗಳನ್ನು ನಡೆಸಲಾಗುತ್ತಿದ್ದು, ಅಧಿಕಾರಿಗಳು ಮಕ್ಕಳ ಸಮಸ್ಯೆಗಳಿಗೆ ಸಕಾಲಕ್ಕೆ ಪರಿಹಾರ ಕಲ್ಪಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿಸಬೇಕು’ ಎಂದರು.
‘ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಗ್ರಾಮಗಳಿಗೆ ಸಕಾಲಕ್ಕೆ ತೆರಳಲು ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಸಾರಿಗೆ ಇಲಾಖೆಯವರು ಆದಾಯಕ್ಕೆ ಹೆಚ್ಚಿನ ಒತ್ತು ನೀಡದೆ ಮಕ್ಕಳಿಗೆ ವಿಶೇಷ ಸಾರಿಗೆ ಸೌಲಭ್ಯ ಒದಗಿಸಿಬೇಕು. ವಿದ್ಯಾರ್ಥಿನಿಯರ ಉತ್ತಮ ಆರೋಗ್ಯಕ್ಕಾಗಿ ನ್ಯಾಪ್‌ಕಿನ್ ವಿತರಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವೆಂಕಟಗಿರಿ, ದೌಲತ್ ಪುರ, ಸುಶೀಲಾನಗರ, ಬಂಡ್ರಿ, ಸಿದ್ದಾಪುರ ಗ್ರಾಮಗಳು ಸೇರಿದಂತೆ ಇತರೆ ಗ್ರಾಮಗಳ ವಿದ್ಯಾರ್ಥಿಗಳು, ನಾವು ಸಂಡೂರು ಪಟ್ಟಣಕ್ಕೆ ಬರಲು ದಿನ ನಿತ್ಯ ಸಾರಿಗೆ ಬಸ್‌ಗಳ ಸಮಸ್ಯೆ ಇದೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ವಿಶೇಷ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಲಕ್ಷ್ಮಿಪುರದ ಗ್ರಾಮದ ಶಾಲಾ ವಿದ್ಯಾರ್ಥಿಗಳು, ನಮ್ಮ ಶಾಲೆಯಲ್ಲಿ ಕಲಿಕೆಗಾಗಿ ನೂತನ ಶಾಲಾ ಕೊಠಡಿಗಳ ಕೊರತೆಯಿದೆ. ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಬಿಇಒ ಐ.ಆರ್.ಅಕ್ಕಿ ಮಾತನಾಡಿ, ‘ಲಕ್ಷ್ಮಿಪುರ ಗ್ರಾಮ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನೂತನ ಶಾಲಾ ಕೊಠಡಿಗಳನ್ನು ಜೂನ್ ಅಂತ್ಯದ ವೇಳೆಗೆ ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಶಾಲೆಗಳ ಆವರಣದಲ್ಲಿ ಸರ್ಕಾರದ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ನೂತನವಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು’ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ ಮಾತನಾಡಿ, ‘ತಾಲ್ಲೂಕಿನ ಎಲ್ಲಾ 26 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು, ಸೇರಿದಂತೆ ಇತರ ಪ್ರಮುಖ ಅಂಶಗಳ ಬಗ್ಗೆ ಕಿರು ಚಿತ್ರಗಳನ್ನು ತೋರಿಸುವುದರ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಅಧಿಕಾರಿ ವೆಂಕಟೇಶ್, ಬಿಸಿಯೂಟ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ, ಶಿಕ್ಷಣ ಸಂಯೋಜಕ ಶರಣಬಸಪ್ಪ, ವಿವಿಧ ಶಾಲೆಗಳ ಶಿಕ್ಷಕರು ಮಕ್ಕಳು ಇದ್ದರು.
ಪಟ್ಟಣದ ಹೊರವಲಯದ ಕೃಷ್ಣಾನಗರ ಗ್ರಾಮದ ಸರ್ಕಾರಿ ಶಾಲೆಗೆ ಅಧಿಕಾರಿಗಳು ಭೇಟಿ ನೀಡಿ ಮಕ್ಕಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಉಪಹಾರ ಸೇವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.