ADVERTISEMENT

ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯುವ ಧೈರ್ಯ ಸಿಎಂಗೆ ಇಲ್ಲ: ಶಾಸಕ ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 9:50 IST
Last Updated 31 ಡಿಸೆಂಬರ್ 2024, 9:50 IST
<div class="paragraphs"><p>ಜನಾರ್ದನ ರೆಡ್ಡಿ </p></div>

ಜನಾರ್ದನ ರೆಡ್ಡಿ

   

ಬಳ್ಳಾರಿ: ‘ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮತಹ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹುಗುರುವಾಗಿ ಮಾತನಾಡುತ್ತಾ, ದುರಹಂಕಾರದ ವರ್ತನೆ ತೋರುತ್ತಿದ್ದಾರೆ. ಅವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಧೈರ್ಯ ಇಲ್ಲದಂತಾಗಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆಯು ಗಂಭೀರ ಪ್ರಕರಣ. ಡೆತ್‌ನೋಟ್‌ನಲ್ಲಿ ಅವರು ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಎಂಬುವರ ಹೆಸರು ಬರೆದಿಟ್ಟಿದ್ದಾರೆ. ಅವರಿಗಾದ ಕಿರುಕುಳ, ಶೇ 5ರ ಕಮಿಷನ್‌, ಹಣಕ್ಕಾಗಿ ಪೀಡನೆ, ಪ್ರಾಣ ಬೆದರಿಕೆ ಹಾಕಿರುವುದನ್ನು ಅವರು ಬರೆದಿಟ್ಟಿದ್ದಾರೆ. ಆದರೂ, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆತ್ಮಹತ್ಯೆ, ಕೊಲೆಗಳು ಈ ಸರ್ಕಾರಕ್ಕೆ ಲೆಕ್ಕವೇ ಇಲ್ಲ ಎಂಬಂತಾಗಿದೆ. ಡೆತ್‌ ನೋಟ್‌ ಬಗ್ಗೆ ಪ್ರಿಯಾಂಕ್‌ ಖರ್ಗೆ, ಗೃಹ ಮಂತ್ರಿ, ಉಪ ಮುಖ್ಯಮಂತ್ರಿ ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಚಂದ್ರಶೇಖರ್‌ ಎಂಬುವವರು ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ವಾಲ್ಮೀಕಿ ನಿಗಮದ ಹಗರಣ ಹೊರಗೇ ಬರುತ್ತಿರಲಿಲ್ಲ. ನಾಗೇಂದ್ರ ರಾಜೀನಾಮೆ ನೀಡುತ್ತಿರಲಿಲ್ಲ. ಸದ್ಯ ಈ ಪ್ರಕರಣದಲ್ಲಿ ಗುತ್ತಿಗೆದಾರ ಡೆತ್‌ ನೋಟ್‌ ಕೈಲಿ ಹಿಡಿದುಕೊಂಡೇ ಪ್ರಾಣ ಬಿಟ್ಟರೂ, ಸರ್ಕಾರ ಪ್ರಿಯಾಂಕ್‌ ಪರ ನಿಂತಿದೆ. ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ’ ಎಂದು ಎಚ್ಚರಿಸಿದರು.

‘ಲಕ್ಷ್ಮೀ ಹೆಬ್ಬಾಳಕರ್‌ ಆಪ್ತನ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ದಾವಣಗೆರೆಯಲ್ಲೂ ಇಂಥದ್ದೇ ಪ್ರಕರಣ ನಡೆಯಿತು. ಮಾಗಡಿಯಲ್ಲಿ ಕ್ರಷರ್‌ ಲಾರಿಯವರು ಮಾಮೂಲಿ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಯಾದಗಿರಿ ಎಎಸ್‌ಐ ಪರಶುರಾಮ್‌ ರಾಜಕೀಯ ಒತ್ತಡಗಳಿಂದ ಹೃದಯಘಾತಕ್ಕೀಡಾದರು. ಸಿದ್ದಲಿಂಗ ಸ್ವಾಮೀಜಿ ಅವರ ಕೊಲೆಗೆ ಸುಪಾರಿ ನೀಡಲಾಗಿತ್ತು. ಮಣಿಕಂಠ ರಾಠೋಡ್‌, ಚಂದು ಪಾಟೀಲ್‌, ಬಸವರಾಜ್‌ ಮತ್ತಿಮೂಡ್‌ ಅವರ ಕೊಲೆಗೂ ಸುಪಾರಿ ಕೊಡಲಾಗಿದೆ ಎಂಬ ಆರೋಪವಿದೆ. ರಾಜ್ಯ ಈ ಮಟ್ಟಕ್ಕೆ ಇಳಿದಿರುವುದು ನೋವಿನ ಸಂಗತಿ’ ಎಂದರು.

‘ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಅವರ ಮೇಲೆ ವಿಧಾನಸೌಧಲ್ಲೇ ಹಲ್ಲೆಗೆ ಪ್ರಯತ್ನಿಸಲಾಯಿತು. ಪೊಲೀಸ್‌ ಇಲಾಖೆ ಅವರನ್ನು ರಾತ್ರಿ ಇಡೀ ಹಲವು ಜಿಲ್ಲೆ ಸುತ್ತಿಸಿತು. ಉಗ್ರವಾದಿಯಂತೆ ನಡೆಸಿಕೊಂಡಿತು. ಮಾಧ್ಯಮದವರು ಹಿಂಬಾಲಿಸದೇ ಹೋಗಿದ್ದರೆ ಅವರನ್ನು ಏನಾದರೂ ಮಾಡುತ್ತಿದ್ದರು. ಮುನಿರತ್ನ ಮೇಲೆ ದಾಳಿ ನಡೆದಿದೆ. ರಾಜ್ಯದಲ್ಲಿ ಶಾಸಕರ ಜೀವಕ್ಕೆ ಬೆಲೆ ಇಲ್ಲ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಖರ್ಗೆ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪಡೆಯುವ ಶಕ್ತಿ ಸಿಎಂಗೆ ಇಲ್ಲವಾಗಿದೆ. ಸರ್ಕಾರದಲ್ಲಿ ಖರ್ಗೆ ಅವರೇ ಎಲ್ಲ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿರುವುದರಿಂದ ಪ್ರಿಯಾಂಕ್‌ಗೆ ಸೊಕ್ಕು ಬಂದಿದೆ. ದುರಂಹಕಾರ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿನ್‌ ಸಾಯುವುದಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಾಕಿದ್ದರು. ಅದನ್ನು ಗಮನಿಸಿದ ಸೋದರಿಯರು ಠಾಣೆಗೆ ಹೋಗಿದ್ದರು. ಆದರೆ, ದೂರು ದಾಖಲಾಗಿಲ್ಲ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದರೆ ಸಚಿನ್‌ ಉಳಿಯುತ್ತಿದ್ದರು. ಆದರೆ, ಪೊಲೀಸರು ಪ್ರಯತ್ನವನ್ನೇ ಮಾಡಿಲ್ಲ. ಸೋದರಿಯರರನ್ನು ಹಿಯಾಳಿಸಿದ್ದರು. ಕಲಬುರಗಿ, ಬೀದರ್‌ ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿವೆ. ಯಾರೊಬ್ಬರೂ ದೂರು ಕೊಡಲು ಮುಂದೆ ಬರುತ್ತಿಲ್ಲ’ ಎಂದರು.

‘ಸಚಿನ್‌ ಕುಟುಂಬಕ್ಕೆ ಬಿಜೆಪಿ ಸಾಂತ್ವನ ಹೇಳಿದೆ. ಆದರೆ, ಕಾಂಗ್ರೆಸ್‌ ನಾಯಕರು ಬೆಳಿಗ್ಗೆ 3ಕ್ಕೆ ಹೋಗಿ ಕುಟುಂಬದವರಿಗೆ ಬೆದರಿಕೆ ಹಾಕಿ ಬಂದಿದ್ದಾರೆ’ ಎಂದು ಆರೋಪಿಸಿದರು.

‘ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪಡೆಯಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಿಐಡಿ ಸಿಒಡಿ ಕಾಂಗ್ರೆಸ್ ಕೈಗೊಂಬೆಗಳಾಗಿವೆ. ಸಚಿನ್‌ ಕಟುಂಬಕ್ಕೆ ಭದ್ರತೆ ಒದಗಿಸಬೇಕು. ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕು. ಕುಟುಂಬಸ್ಥರಲ್ಲಿ ಯಾರಿಗಾದರೂ ಸರ್ಕಾರಿ ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದರು.

‘ಬಳ್ಳಾರಿ ರಿಪಬ್ಲಿಕ್‌ ಎಂದು ಆರೋಪಿಸಿದ ಮುಖ್ಯಮಂತ್ರಿ ‘ರಿಪಬ್ಲಿಕ್‌ ಆಫ್‌ ಮೈಸೂರು’ ಮಾಡಿಕೊಂಡಿದ್ದಾರೆ. ‘ರಿಪಬ್ಲಿಕ್‌ ಆಫ್‌ ಕನಕಪುರ’ವೂ ಆಗಿದೆ. ಈಗ ರಿಪಬ್ಲಿಕ್‌ ಆಫ್‌ ಬೀದರ್‌, ಕಲಬುರಗಿ ಆಗಿದೆ’ ಎಂದು ಟೀಕಿಸಿದರು.

‘ಪ್ರಿಯಾಂಕ್‌ ತಮ್ಮ ಆಪ್ತನ ಮೂಲಕವೇ ವ್ಯವಹಾರ ಮಾಡುತ್ತಾರೆ. ಅದಕ್ಕಾಗಿಯೇ ಅವರ ಹೆಸರು ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿಲ್ಲ. ಸಿಬಿಐ ತನಿಖೆಯಾದರೆ ಎಲ್ಲವೂ ಹೊರಗೆ ಬರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.