ADVERTISEMENT

ಬಡವರ ಕೂಲಿ ಕಸಿದ ಮೋದಿ ಸರ್ಕಾರ; ಕಾಂಗ್ರೆಸ್ ಪಕ್ಷದಿಂದ ‘ನರೇಗಾ ಉಳಿಸಿ’ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 2:19 IST
Last Updated 18 ಫೆಬ್ರುವರಿ 2026, 2:19 IST
ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿಯಲ್ಲಿ ‘ಮನರೇಗಾ ಉಳಿಸಿ’ ಪಾದಯಾತ್ರೆಯ ಬಹಿರಂಗ ಸಭೆಯನ್ನು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಉದ್ಘಾಟಿಸಿದರು
ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿಯಲ್ಲಿ ‘ಮನರೇಗಾ ಉಳಿಸಿ’ ಪಾದಯಾತ್ರೆಯ ಬಹಿರಂಗ ಸಭೆಯನ್ನು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಉದ್ಘಾಟಿಸಿದರು   

ಹೂವಿನಹಡಗಲಿ: ‘ಗ್ರಾಮೀಣ ಕೂಲಿಕಾರರು, ರೈತರಿಗೆ ವರದಾನವಾಗಿದ್ದ ಮನರೇಗಾ ಯೋಜನೆಯ ಸ್ವರೂಪ ಬದಲಾಯಿಸಿರುವ ಮೋದಿ ಸರ್ಕಾರ, ಬಡವರ ಉದ್ಯೋಗದ ಹಕ್ಕು ಕಸಿದಿದೆ’ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಸೋಮವಾರ ‘ಮನರೇಗಾ ಉಳಿಸಿ’ ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಕಟ್ಟಕಡೆಯ ವ್ಯಕ್ತಿಯೂ ಘನತೆಯಿಂದ ಬದುಕಬೇಕೆಂಬ ಮಹಾತ್ಮ ಗಾಂಧೀಜಿಯ ಆಶಯದಂತೆ ಯುಪಿಎ ಸರ್ಕಾರ ಮಹಾತ್ವಾಕಾಂಕ್ಷಿ ಮನರೇಗಾ ಯೋಜನೆ ಜಾರಿಗೊಳಿಸಿತ್ತು. ಬಡವರಿಗೆ ಉದ್ಯೋಗದ ಗ್ಯಾರಂಟಿ, ಆರ್ಥಿಕ ಗ್ಯಾರಂಟಿ ಕಲ್ಪಿಸಿದ್ದ ಯೋಜನೆಯನ್ನು ಬದಲಾವಣೆ ಮಾಡಿ, ಕೇಂದ್ರ ಸರ್ಕಾರ ಬಡವರ ಬದುಕನ್ನೇ ಕಿತ್ತುಕೊಂಡಿದೆ’ ಎಂದು ಟೀಕಿಸಿದರು.

ADVERTISEMENT

‘ಹೊಸ ಯೋಜನೆಯಲ್ಲಿ ಸುಲಭವಾಗಿ ಯಾರಿಗೂ ಕೂಲಿ ಕೆಲಸ ಸಿಗದಂತೆ ಷರತ್ತು ವಿಧಿಸಲಾಗಿದೆ. ಮನರೇಗಾ ಯೋಜನೆ ಉಳಿದರೆ ಮಾತ್ರ ಬಡವರಿಗೆ ಕೂಲಿ ಕೆಲಸ ಸಿಗುತ್ತದೆ. ಇಲ್ಲದಿದ್ದರೆ ಕೂಲಿಕಾರರೂ ರಾಮಜಪ ಮಾಡಬೇಕಾಗುತ್ತದೆ. ಯೋಜನೆಯ ಎಲ್ಲ ಫಲಾನುಭವಿಗಳು ಕಾಂಗ್ರೆಸ್ ಹೋರಾಟಕ್ಕೆ ಕೈ ಜೋಡಿಸಿ, ಜನಾಂದೋಲನ ರೂಪಿಸಬೇಕು’ ಎಂದು ಕರೆ ನೀಡಿದರು.

ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ‘ಕೇಂದ್ರ ಸರ್ಕಾರ ನರೇಗಾ ಯೋಜನೆ ಬದಲಾಯಿಸುವ ಮೂಲಕ ಬಡವರು, ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ. ಬಡವರು, ಶ್ರಮಿಕರನ್ನು ಅತಂತ್ರಗೊಳಿಸುವುದೇ ಬಿಜೆಪಿ ಸಿದ್ಧಾಂತ’ ಎಂದು ಕಿಡಿ ಕಾರಿದರು.

‘ಕ್ಷೇತ್ರದಲ್ಲಿ ಶೇ 57ರಷ್ಟು ಮಹಿಳೆಯರು, ಶೇ 43 ಪುರುಷರು ಸೇರಿದಂತೆ 1,05,396 ಜನರು ನರೇಗಾ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆ ಬದಲಾವಣೆಯಿಂದ ಗ್ರಾಮೀಣ ಕೂಲಿಕಾರರಿಗೆ ಸಂಕಷ್ಟ ಎದುರಾಗಿದೆ. ಮುಂಬರುವ ದಿನಗಳಲ್ಲಿ ಬಡ ವಿರೋಧಿ ಬಿಜೆಪಿಗೆ ಪಾಠ ಕಲಿಸಬೇಕು’ ಎಂದು ಹೇಳಿದರು.

ಮುಖಂಡರಾದ ಎಂ.ಪಿ.ವೀಣಾ ಮಹಾಂತೇಶ ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡ ಚಂದ್ರಶೇಖರ ಭಟ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಹನುಮಂತಪ್ಪ, ಅಟವಾಳಗಿ ಕೊಟ್ರೇಶ, ಮುಖಂಡರಾದ ಎಸ್.ಹಾಲೇಶ, ಬಸವನಗೌಡ ಪಾಟೀಲ್, ಕೆ.ಎಸ್.ಶಾಂತನಗೌಡ, ಎಸ್.ದೂದನಾಯ್ಕ, ಜಿ.ವಸಂತ, ಜ್ಯೋತಿ ಮಲ್ಲಣ್ಣ, ಚಂದ್ರನಾಯ್ಕ, ಗುರುವಿನ ರಾಜಣ್ಣ, ನವಲಿ ಗುಡುದಯ್ಯ, ಕುಂಚೂರು ಕೊಟ್ರೇಶ ಇದ್ದರು.

‘ಬೇಲಿಯೇ ಎದ್ದು ಹೊಲ ಮೇಯುತ್ತಿದೆ’

‘ಹಡಗಲಿ ಕ್ಷೇತ್ರದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಕ್ರಿಯಾ ಯೋಜನೆ ರೂಪಿಸುವವರು ಅವರೇ ಟೆಂಡರ್ ಕಾಲ್ ಮಾಡಿಸುವವರು ಅವರೇ ಕೆಲಸ ಮಾಡಿ ಬಿಲ್ ಬರೆಯಿಸಿ ಹಣ ಪಡೆಯುವವರು ಅವರೇ ಆಗಿದ್ದಾರೆ’ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಯಾರ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಟೀಕಿಸಿದರು. ಕ್ಷೇತ್ರದ ಜನರು ಸಮಯಕ್ಕಾಗಿ ಕಾಯುತ್ತಿದ್ದಾರೆ. ಎಂ.ಪಿ.ಪ್ರಕಾಶ್ ನನ್ನಂಥವರಿಗೆ ನೀರು ಕುಡಿಸಿದ ಪ್ರಬುದ್ಧ ಜನರು ಇಂತವರನ್ನು ಬಿಡುತ್ತಾರೆಯೇ? ಸಮಯ ಬಂದಾಗ ಅಸಲಿನ ಜತೆಗೆ ಬಡ್ಡಿ ಸೇರಿಸಿ ಇನ್ನೊಮ್ಮೆ ಹಡಗಲಿ ಕ್ಷೇತ್ರದ ಕಡೆ ಮುಖ ಮಾಡದಂತೆ ತೀರ್ಪು ಕೊಡಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.