ADVERTISEMENT

ಪಕ್ಷ ಸೇರುವ ಮೊದಲೇ ಹಿಡಿತ ಸಾಧಿಸುತ್ತಿದ್ದಾರೆಯೇ ಆನಂದ್ ಸಿಂಗ್!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಸೆಪ್ಟೆಂಬರ್ 2019, 3:34 IST
Last Updated 25 ಸೆಪ್ಟೆಂಬರ್ 2019, 3:34 IST
   

ಹೊಸಪೇಟೆ: ಅನರ್ಹ ಶಾಸಕ ಆನಂದ್‌ ಸಿಂಗ್‌ ಇನ್ನಷ್ಟೇ ಬಿಜೆಪಿ ಸೇರಿ, ಆ ಪಕ್ಷದಿಂದ ಸ್ಪರ್ಧಿಸಬೇಕಿದೆ. ಆದರೆ, ಅದಕ್ಕೂ ಮುನ್ನವೇ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂಬ ಆರೋಪ ಆ ‍‍ಪಕ್ಷದ ವಲಯದೊಳಗೆ ಬಲವಾಗಿ ಕೇಳಿ ಬಂದಿದೆ.

ಸರ್ಕಾರದ ಮೇಲೆ ಒತ್ತಡ ಹೇರಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಮ್ಮ ಬೆಂಬಲಿಗರಾದ ನಟರಾಜ ಪೂಜಾರ್‌ ಆಂಜಿನಪ್ಪ, ಎನ್‌. ನಾಗರೆಡ್ಡಿ ವೀರಭದ್ರಪ್ಪ ಎಂಬುವರನ್ನು ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಿಸಿದ್ದಾರೆ ಎಂಬುದು ಕೆಲ ಬಿಜೆಪಿ ಮುಖಂಡರ ದೂರು.

ಈ ಇಬ್ಬರನ್ನೂ ಸದಸ್ಯರಾಗಿ ನೇಮಕ ಮಾಡಿ ಸರ್ಕಾರವು ಸೆ. 22ರಂದು ಅಧಿಕೃತ ಆದೇಶ ಹೊರಡಿಸಿದ್ದು, ಅವರ ದೂರನ್ನು ಪುಷ್ಟೀಕರಿಸಿದೆ. ಆ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಹಾಲಿ ಸದಸ್ಯರಿಬ್ಬರೂ ಈ ಹಿಂದೆ ಆನಂದ್‌ ಸಿಂಗ್‌ ಜತೆ ಕಾಂಗ್ರೆಸ್‌ನಲ್ಲಿದ್ದರು. ಈಗ ಸಿಂಗ್‌ ಬಿಜೆಪಿ ಕಡೆ ವಾಲಿದ್ದು, ಅವರ ಬೆಂಬಲಿಗರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ಬಿಜೆಪಿಯ ಮೂಲ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಪಕ್ಷದ ಮುಖಂಡರು ಹಿರಿಯ ನಾಯಕರಿಗೆ ದೂರು ಸಲ್ಲಿಸಿದ್ದಾರೆ.

ADVERTISEMENT

ಇನ್ನಷ್ಟೇ ಆನಂದ್‌ ಸಿಂಗ್‌ ಬಿಜೆಪಿ ಸೇರಬೇಕು. ಆದರೆ, ಅದಕ್ಕೂ ಮುಂಚೆಯೇ ಅವರ ಬೆಂಬಲಿಗರು ಹಾಗೂ ಮೂಲ ಬಿಜೆಪಿಗರ ನಡುವೆ ಜಟಾಪಟಿಗೆ ಕಾರಣವಾಗಿದೆ. ‘ಒಂದುವೇಳೆ ಪಕ್ಷ ಸಿಂಗ್‌ ಬೆಂಬಲಿಗರಿಗೆ ಮಣೆ ಹಾಕುವುದು ಮುಂದುವರೆಸಿದರೆ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ. ಉಪಚುನಾವಣೆಯಲ್ಲಿ ಅದರ ಬೆಲೆ ತೆರಬೇಕಾಗುತ್ತದೆ’ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.

‘ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನಾಮನಿರ್ದೇಶನ ಮಾಡುವುದಕ್ಕೂ ಮೊದಲು ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದುಕೊಳ್ಳಬೇಕು. ಸಿಂಗ್‌ ಬೆಂಬಲಿಗರಿಗೆ ಮಣೆ ಹಾಕುವುದನ್ನು ತಕ್ಷಣವೇ ನಿಲ್ಲಿಸಬೇಕು. ಇದರಿಂದ ನಿಷ್ಠಾವಂತ ಕಾರ್ಯಕರ್ತರು ಕೆರಳುವಂತಾಗಿದೆ. ಸ್ಥಳೀಯವಾಗಿ ಕೋರ್‌ ಕಮಿಟಿ ರಚಿಸಬೇಕು. ಅದು ಮಾಡುವ ಶಿಫಾರಸು ಆಧರಿಸಿ ಸೂಕ್ತರಾದವರಿಗೆ ಅವಕಾಶ ಕೊಡಬೇಕು’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನಂದ್‌ ಸಿಂಗ್‌ ಪಕ್ಷದಿಂದ ಶಾಸಕರಾಗಿ, ಮಂತ್ರಿಯಾದರೂ ಪಕ್ಷ ತೊರೆದರು. ಈಗ ಮತ್ತೆ ಬಂದಿದ್ದಾರೆ. ಆದರೆ, ಅನೇಕ ಕಾರ್ಯಕರ್ತರು ಕಷ್ಟಕಾಲದಲ್ಲಿ ಪಕ್ಷ ಕಟ್ಟಿ, ಸಂಘಟಿಸಿದ್ದಾರೆ. ಅಂತಹವರಿಗೆ ಮೊದಲ ಆದ್ಯತೆ ಸಿಗಬೇಕು ಎಂಬುದು ಎಲ್ಲ ಸ್ಥಳೀಯ ನಾಯಕರ ಅಭಿಪ್ರಾಯವಾಗಿದೆ. ಅದಕ್ಕೆ ಮನ್ನಣೆ ಸಿಗಬೇಕು. ಸಿಂಗ್‌ ಪಕ್ಷ ಸೇರುವುದಕ್ಕೆ ದೊಡ್ಡ ವಿರೋಧವಿದೆ. ಅಂತಹದ್ದರಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗುವುದಕ್ಕೆ ಮೊದಲೇ ಅವರ ಬೆಂಬಲಿಗರಿಗೆ ಮಣೆ ಹಾಕಿದ್ದು, ಕಾರ್ಯಕರ್ತರಿಗೆ ನೋವಾಗಿದೆ’ ಎಂದರು.

ಎರಡನೇ ದಿನವೂ ನಾಮಪತ್ರ ಇಲ್ಲ:

ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿ ಮಂಗಳವಾರ ಎರಡು ದಿನಗಳಾದರೂ ಇದುವರೆಗೆ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ.

ನಗರದ ಸಂಡೂರು ರಸ್ತೆಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳಿಂದ ಯಾರೊಬ್ಬರೂ ಕಚೇರಿಯತ್ತ ಸುಳಿಯದ ಕಾರಣ ಚುನಾವಣಾ ಸಿಬ್ಬಂದಿಗೆ ಕೆಲಸವಿಲ್ಲದೇ ಸುಮ್ಮನೆ ಕೂರುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.