
ಹೂವಿನಹಡಗಲಿ: ತಾಲ್ಲೂಕಿನ ಮುದೇನೂರು ಗ್ರಾಮದ ಯುವ ಪ್ರತಿಭೆ, ಕಡಾರಿ ನವೀನಕುಮಾರ್ ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಜನ್ಮಭೂಮಿ ಪಂಜಾಬ್ ರಾಜ್ಯದ ‘ಬಂಗಾ’ ಗ್ರಾಮಕ್ಕೆ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
ತಮ್ಮ ಸ್ವಗ್ರಾಮದಿಂದ 2,300 ಕಿ.ಮೀ. ದೂರದ ಸೈಕಲ್ ಪಯಣ ಆರಂಭಿಸಿರುವ 26 ವರ್ಷದ ಯುವ ಸಾಹಸಿಯನ್ನು ಸ್ನೇಹಿತರು, ಹಿತೈಷಿಗಳು ಬುಧವಾರ ಪಟ್ಟಣದಲ್ಲಿ ಶುಭ ಹಾರೈಸಿ ಬೀಳ್ಕೊಟ್ಟರು.
ಕಳೆದ ವರ್ಷ ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಜನ್ಮ ಸ್ಥಳ ಓಡಿಸ್ಸಾದ ಕಟಕ್ ಗೆ 1600 ಕಿ.ಮೀ. ಸೈಕಲ್ ಜಾಥಾವನ್ನು ಯಶಸ್ವಿಯಾಗಿ ಪೂರೈಸಿ, ಈಗ ಮತ್ತೊಂದು ಪರ್ಯಾಟನೆ ಆರಂಭಿಸಿದ್ದಾರೆ.
ಪರಿಸರ ಹಾಗೂ ಜೀವವೈವಿದ್ಯ ಅಭಿಯಾನದ ಇವರ ಸೈಕಲ್ ಪಯಣದೊಂದಿಗೆ ಕೊಪ್ಪಳ ಜಿಲ್ಲೆ ಹಿರೇಸಿಂಧೋಗಿಯ ಶಿವರಾಯಪ್ಪ ನೀರಲೋಟಿ ಜೊತೆಯಾಗಿದ್ದಾರೆ.
ಕೃಷಿಕರಾದ ಕಡಾರಿ ಮಲ್ಲಿಕಾರ್ಜುನ ಮಂಜಮ್ಮ ದಂಪತಿಯ ಪುತ್ರ ನವೀನಕುಮಾರ್ ಅವರು ಚಿತ್ರಕಲೆ ಡಿಪ್ಲೊಮಾ ಮುಗಿಸಿ ರಂಗಭೂಮಿ, ಸಿನಿಮಾ ಕ್ಷೇತ್ರದ ಒಲವು ಬೆಳೆಸಿಕೊಂಡಿದ್ದಾರೆ. ನೀನಾಸಂ, ರಂಗಾಯಣ ಸಂಸ್ಥೆಗಳಲ್ಲಿ ತರಬೇತಿ ಪಡೆದು ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಪರಿಸರ ಕಾಳಜಿ, ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.
‘ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಅವರ ಜನ್ಮ ಸ್ಥಳಕ್ಕೆ ಸೈಕಲ್ ನಲ್ಲಿ ಹೋಗುತ್ತಿದ್ದೇವೆ. ಪ್ರತಿದಿನ 120 ರಿಂದ 150 ಕಿ.ಮೀ. ಕ್ರಮಿಸಿ ದೇವಸ್ಥಾನ, ಶಾಲೆ, ಪೆಟ್ರೋಲ್ ಬಂಕ್ ಗಳಲ್ಲಿ ವಾಸ್ತವ್ಯ ಹೂಡಿ, 15 ದಿನಗಳಲ್ಲಿ ಪಂಜಾಬ್ ತಲುಪಲಿದ್ದೇವೆ. ಮಾರ್ಗಮಧ್ಯೆ ದಾನಿಗಳು ವಾಸ್ತವ್ಯಕ್ಕೆ ವ್ಯವಸ್ಥೆ, ಊಟೋಪಚಾರ ನೀಡಿ ಸತ್ಕರಿಸುತ್ತಾರೆ’ ಎಂದು ಸೈಕಲ್ ಯಾತ್ರಿ ನವೀನ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.