ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಲಿತ ಸಮುದಾಯದ ಮುಖಂಡರು ಶಾಸಕ ನಾರಾ ಭರತ್ ರೆಡ್ಡಿ ಗೃಹ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು
ಬಳ್ಳಾರಿ: ‘ಬೀದಿಗೆ ಇಳಿದಾದರೂ, ರಕ್ತ ಚೆಲ್ಲಿಯಾದರೂ ನಾವು ಒಳಮೀಸಲಾತಿಯನ್ನು ಪಡೆದೇ ತೀರುತ್ತೇವೆ’ ಎಂದು ಮಾದಿಗ ಸಮುದಾಯದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ರಾಜ್ಯದಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನಿವಾಸಗಳ ಎದುರು ಭಾನುವಾರ ತಮಟೆ ಚಳವಳಿ ನಡೆಸಿದರು. ಅದರ ಭಾಗವಾಗಿ ಬಳ್ಳಾರಿಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ನಿವಾಸದ ಎದುರು ಪ್ರತಿಭಟನೆ ನಡೆಯಿತು.
ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಹನುಮಂತಪ್ಪ ಮಾತನಾಡಿ, ‘ಹಲವು ವರ್ಷಗಳಿಂದ ಒಳಮೀಸಲಾತಿ ಹೋರಾಟ ನಡೆಯುತ್ತಿದೆ. ಒಳಮೀಸಲಾತಿ ಕುರಿತು ಚರ್ಚಿಸಲು 19ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಸರ್ಕಾರ ನಿಗದಿ ಮಾಡಿದೆ. ಈ ಸಭೆಯಲ್ಲಿ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಅದಕ್ಕಾಗಿಯೇ ರಾಜ್ಯದಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಮನೆಗಳ ಎದುರು ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಒಳಮೀಸಲಾತಿ ಜಾರಿ ಮಾಡುವ ಕುರಿತು 19ರಂದು ತೀರ್ಮಾನ ಕೈಗೊಳ್ಳಲೇಬೇಕು. ಶಾಸಕರು, ಸಚಿವರಿಗೆ ಅದನ್ನೇ ಮನವರಿಕೆ ಮಾಡುತ್ತಿದ್ದೇವೆ. ಒಂದು ವೇಳೆ ಸೂಕ್ತ ತೀರ್ಮಾ ಕೈಗೊಳ್ಳದೇ ಹೋದರೆ, ಮಾದಿಗ ಸಮುದಾಯ ಬೀದಿಗೆ ಇಳಿಯಲಿದೆ. ರಕ್ತ ಚೆಲ್ಲಿಯಾದರೂ ಒಳಮೀಸಲಾತಿ ಪಡೆಯಲಿದೆ’ ಎಂದು ಎಚ್ಚರಿಸಿದರು.
ಶಾಸಕರ ಮನೆ ಎದುರು ತಮಟೆ ಚಳವಳಿ ನಡೆಸಿದ ಹೋರಾಟಗಾರರು, ‘ಜೈ ಮಾದಿಗ, ಜೈ ಜೈ ಮಾದಿಗ’ ಎಂಬ ಘೋಷಣೆ ಕೂಗಿದರು. ಅನುಮತಿ ಇಲ್ಲದೆ ಪ್ರತಿಭಟನೆ ಹಮ್ಮಿಕೊಂಡಿದ್ದಕ್ಕಾಗಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ಮುಖಂಡರಾದ ಈಶ್ವರಪ್ಪ, ಸೋಮಶೇಖರ್, ನಾರಾಯಣಸ್ವಾಮಿ, ತಿಪ್ಪೇಸ್ವಾಮಿ, ಶಿವರಾಜ್, ಅನಿಲ್, ಮೇಘನಾಥ್, ಪ್ರೇಮಕುಮಾರ್, ರಾಮು ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.