ADVERTISEMENT

ಬುರ್ರಕಥಾ ದರೋಜಿ ಈರಮ್ಮ ಪುಣ್ಯಸ್ಮರಣೆ- 9 ವರ್ಷ ಕಳೆದರೂ ತಲೆ ಎತ್ತದ ಸ್ಮಾರಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 7:10 IST
Last Updated 12 ಆಗಸ್ಟ್ 2023, 7:10 IST
ಕಂಪ್ಲಿ ಸಮೀಪದ ಹಳೇ ದರೋಜಿ ಗ್ರಾಮದಲ್ಲಿನ ಬುರ‍್ರಕಥಾ ಈರಮ್ಮ ಸಮಾಧಿ ಸ್ಥಳ
ಕಂಪ್ಲಿ ಸಮೀಪದ ಹಳೇ ದರೋಜಿ ಗ್ರಾಮದಲ್ಲಿನ ಬುರ‍್ರಕಥಾ ಈರಮ್ಮ ಸಮಾಧಿ ಸ್ಥಳ   

–ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ

ಕಂಪ್ಲಿ: ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥನ, ಕಾವ್ಯಗಳ ಗಣಿ, ಕಂಚಿನ ಕಂಠದ ನಾಡೋಜ ಬುರ‍್ರಕಥಾ ಈರಮ್ಮ ಅಸ್ತಂಗತರಾಗಿ ಒಂಬತ್ತು ವರ್ಷ ಕಳೆದಿದೆ. ಆದರೆ ಅವರ ಸಮಾಧಿ ಸ್ಥಳದ ಅಭಿವೃದ್ಧಿ ಮಾತ್ರ ಅನುಷ್ಠಾನಕ್ಕೆ ಬಂದಿಲ್ಲ.

ಸಂಡೂರು ತಾಲ್ಲೂಕಿನ ಹಳೇ ದರೋಜಿ ಗ್ರಾಮದಲ್ಲಿರುವ ಅವರ ಸಮಾಧಿ ಸ್ಥಳದ ಎರಡು ಎಕರೆ ಸುತ್ತ ಕಾಂಪೌಂಡ್ ಮತ್ತು ಸಿ.ಸಿ ರಸ್ತೆ ನಿರ್ಮಾಣವಾಗಿರುವುದು ಬಿಟ್ಟರೆ ಅಲ್ಲಿ ಸಾಂಸ್ಕೃತಿಕ ಸಮುಚ್ಚಯ ಕಟ್ಟಡ, ಬುರ‍್ರಕಥಾ ತರಬೇತಿ ಕೇಂದ್ರ, ಸ್ಮಾರಕ, ಉದ್ಯಾನ ನಿರ್ಮಾಣ ಕನಸಾಗಿಯೇ ಉಳಿದಿದೆ.

ADVERTISEMENT

ಈರಮ್ಮ ಹಿನ್ನೆಲೆ: ಗಂಡುಗಲಿ ಕುಮಾರರಾಮ, ಕೃಷ್ಣಗೊಲ್ಲ, ಬಾಲನಾಗಮ್ಮ, ಯಲ್ಲಮ್ಮ, ಬಲಿ ಚಕ್ರವರ್ತಿ, ಬಬ್ಬುಲಿ ನಾಗರೆಡ್ಡಿ, ಆದೋನಿ ಲಕ್ಷ್ಮಮ್ಮ, ಗಂಗಿ ಗೌರಿ, ಜೈಸಿಂಗ್‍ರಾಜ್, ನ್ಯಾಸಿ ಚಿನ್ನಮ್ಮ, ಮಾರ್ವಾಡಿ ಸೇಠಿ ಇನ್ನು ಮುಂತಾದ ಮಹಾಕಾವ್ಯಗಳು ಅವರ ನಾಲಗೆಯ ಮೇಲೆ ನಲಿದಾಡುತ್ತಿದ್ದವು. ಇವರು ಅಕ್ಷರ ಕಲಿಯದಿದ್ದರೂ ಬುರ್ರಕಥಾ ಪ್ರಕಾರದಲ್ಲಿ ಅದ್ಭುತ ಕಥೆಗಳನ್ನು ಜನಜನಿತಗೊಳಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಜನಪದ ಶ್ರೀ, ನಾಡೋಜ, ವಿಜಯ ವಿಠ್ಠಲ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಇವರ ಜೀವನ ಚರಿತ್ರೆ ಗುಲಬರ್ಗಾ ವಿಶ್ವವಿದ್ಯಾಲಯದ ಬಿಎ ಪ್ರಥಮ ಸೆಮಿಸ್ಟರ್‌ ಗೆ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಎರಡನೆಯ ಸೆಮಿಸ್ಟರ್‌ ಗೆ ಪಠ್ಯಕ್ರಮವಾಗಿತ್ತು.

ಪ್ರವಾಸಿ ತಾಣವಾಗಿ ಸಮಾಧಿ ಸ್ಥಳ: ‘ಈರಮ್ಮ ಸಮಾಧಿ ಸ್ಥಳದಲ್ಲಿ ನಡೆಸಬೇಕಾದ ವಿವಿಧ ಪ್ರಗತಿ ಕಾಮಗಾರಿಗಳ ಪ್ರಸ್ತಾವ ಕಡತ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದಲೂ ಅನುದಾನ ಪಡೆದು ಸುಂದರ ಪ್ರವಾಸಿತಾಣವಾಗಿ ರೂಪಿಸಲಾಗುವುದು’ ಎಂದು ಸಂಡೂರು ಶಾಸಕ ಇ. ತುಕಾರಾಂ ಹೇಳಿದ್ದಾರೆ.

ಸಂಸ್ಮರಣೆ ಇಂದು: ‘ನಾಡೋಜ ಬುರ‍್ರಕಥಾ ಈರಮ್ಮ ಫೌಂಡೇಷನ್, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಆಶ್ರಯದಲ್ಲಿ ಆ.12ರಂದು ಈರಮ್ಮ ಅವರ 9ನೇ ಸಂಸ್ಮರಣೆ, ಬುರ‍್ರಕಥಾ ಹಾಗೂ ಜಾನಪದ ಕಲಾಪ್ರದರ್ಶನವನ್ನು ಸಮಾಧಿ ಸ್ಥಳದ ಬಳಿ ಆಯೋಜಿಸಲಾಗಿದೆ’ ಎಂದು ಫೌಂಡೇಷನ್ ಅಧ್ಯಕ್ಷ ಡಾ.ವಿ. ರಾಮಾಂಜಿನೇಯ ತಿಳಿಸಿದರು.

ದರೋಜಿ ಈರಮ್ಮ

ಈರಮ್ಮನವರ ಸಮಾಧಿ ಸ್ಥಳದಲ್ಲಿ ಹಮ್ಮಿಕೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವ ಕಡತ 2022ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಸ್.ಆರ್. ಸುರೇಶ್‍ಬಾಬು ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ

ದತ್ತಿನಿಧಿ ಸ್ಥಾಪನೆ ಪೋಷಕರಾದ ಬಿ. ನಾರಾಯಣರಾವ್ ಅವರ ನೆನಪಿಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಈರಮ್ಮ ಅವರ ಹೆಸರಿನಲ್ಲಿ ₹2ಲಕ್ಷ ವೈಯಕ್ತಿಕ ದತ್ತಿನಿಧಿ ಸ್ಥಾಪಿಸಿದ್ದೇನೆ. ಈ ಮೂಲಕ ಅಳಿವಿನಂಚಿನಲ್ಲಿರುವ ಅಲೆಮಾರಿ ಬುಡಕಟ್ಟು ಕಲಾಪ್ರದರ್ಶನಗಳನ್ನು ಉಳಿಸಿ ಬೆಳೆಸಲು ವಿಚಾರ ಸಂಕಿರಣ ಅಲೆಮಾರಿ ಜನಾಂಗ ಕುರಿತು ಅಧ್ಯಯನ ಮಾಡುವವರಿಗೆ ಶಿಷ್ಯವೇತನ ಫೆಲೋಶಿಪ್ ಅರ್ಹ ವಿದ್ವಾಂಸರಿಗೆ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು’ ಎಂದು ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಕೆ.ಎಂ. ಮೇತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.