ADVERTISEMENT

ನೆಲದ ಮೇಲೆ ಮೃತದೇಹಗಳು

ವಿಮ್ಸ್‌ ಶವಾಗಾರದಲ್ಲಿ ಹಾಳಾದ ಕೋಲ್ಡ್‌ ಸ್ಟೋರೇಜ್ ಪೆಟ್ಟಿಗೆಗಳು

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:44 IST
Last Updated 27 ಮೇ 2020, 19:44 IST
ನೆಲದ ಮೇಲೆ ಮೃತ ದೇಹ
ನೆಲದ ಮೇಲೆ ಮೃತ ದೇಹ   

ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಕೋಲ್ಡ್‌ ಸ್ಟೋರೇಜ್‌ ಪೆಟ್ಟಿಗೆಗಳು ಕಾರ್ಯನಿರ್ವಹಿಸದಕಾರಣ ಉಸಿರಾಟ ಸೇರಿ ಇತರೆ ಕಾರಣಗಳಿಂದ ಮೃತಪಟ್ಟವರ ಕೋವಿಡ್‌ ಪರೀಕ್ಷೆ ವರದಿ ಬರುವವರೆಗೂ, ಆ ಮೃತದೇಹಗಳನ್ನು ಕೋಣೆಯೊಂದರಲ್ಲಿ ನೆಲದ ಮೇಲೆ ಇರಿಸಲಾಗುತ್ತಿದೆ.

ಪ್ರತಿದಿನ ನೂರಾರು ಜನರು ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಅದರಲ್ಲಿ ಕೆಲವರು ಮೃತರಾಗುತ್ತಾರೆ. ಆದರೆ, ಉಸಿರಾಟ ಸೇರಿ ನಾನಾ ಕಾರಣಗಳಿಂದ ರೋಗಿಗಳು ಮೃತಪಟ್ಟರೆ, ಕೋವಿಡ್‌ ಪರೀಕ್ಷೆ ಅನಿವಾರ್ಯ. 48 ಗಂಟೆ (ಎರಡು ದಿನ) ಬಳಿಕ ವರದಿ ಬಂದನಂತರ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುತ್ತದೆ. ಅಲ್ಲಿವರೆಗೆ ಮೃತದೇಹವನ್ನು ಕಾಪಾಡುವ ಜವಾಬ್ದಾರಿ ಆಸ್ಪತ್ರೆಯದ್ದಾದರೂ, ಅದನ್ನು ನಿರ್ವಹಿಸುತ್ತಿಲ್ಲ.

ಶವಾಗಾರದಲ್ಲಿ ಎಂಟು ಶವಗಳನ್ನು ಕೋಲ್ಡ್‌ ಮಾಡಿ ಭದ್ರಪಡಿಸುವ ಎರಡು ರೆಫ್ರಿಜರೇಟರ್‌ಗಳು ದುರಸ್ತಿಗೆ ಬಂದಿವೆ. ಇದರಿಂದ ಮೃತದೇಹಗಳನ್ನು ಕೋಣೆಯೊಂದರ ನೆಲದ ಮೇಲೆ ಇಡಲಾಗುತ್ತಿದೆ. ಇದರಿಂದ ನೊಂದ ಕೆಲವರು,ಶವಪೆಟ್ಟಿಗೆಗಳನ್ನು ಬಾಡಿಗೆಗೆ ತಂದು ತಮ್ಮವರ ಮೃತದೇಹ ಸಂರಕ್ಷಿಸಿಕೊಳ್ಳುತ್ತಿದ್ದಾರೆ. ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಇಂತಹ ದುಃಸ್ಥಿತಿಗೆ ವಿಮ್ಸ್‌ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ADVERTISEMENT

‘ಶವಗಾರದಲ್ಲಿನ ಕೋಲ್ಡ್‌ ಸ್ಟೋರೇಜ್‌ಗಳು ಸರಿಯಿಲ್ಲ. ಸಂಬಂಧಿಸಿದವರಿಗೆದುರಸ್ತಿಗೊಳಿಸುವಂತೆ ತಿಳಿಸಲಾಗಿದೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ. 12 ಶವಗಳನ್ನು ಸಂಗ್ರಹಿಸುವ ಮೂರು ಕ್ಯಾಬಿನ್‌ಗಳ ಖರೀದಿಗಾಗಿ ₹21 ಲಕ್ಷ ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಜಿಲ್ಲೆಯ ಜಿಂದಾಲ್‌ ಆಸ್ಪತ್ರೆಯಿಂದ ಕೋಲ್ಡ್‌ ಸ್ಟೋರೇಜ್‌ ಕ್ಯಾಬಿನ್‌ ಅನ್ನು ತರಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ವಿಮ್ಸ್‌ ನಿರ್ದೇಶಕ ಡಾ.ದೇವಾನಂದ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.