ADVERTISEMENT

ಕುರುಗೋಡು: ದೀಪೋತ್ಸವ ಸೊಬಗು ಕಣ್ತುಂಬಿಕೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:13 IST
Last Updated 22 ನವೆಂಬರ್ 2025, 5:13 IST
ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ದೀಪೋತ್ಸವದಲ್ಲಿ ಭಕ್ತರು ಹಣತೆ ಬೆಳಗಿದರು
ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ದೀಪೋತ್ಸವದಲ್ಲಿ ಭಕ್ತರು ಹಣತೆ ಬೆಳಗಿದರು   

ಕುರುಗೋಡು: ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ದೀಪೋತ್ಸವ ಜರುಗಿತು.

ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರುದ್ರಹೋಮ ಜರುಗಿತು. ಬುಕ್ಕಸಾಗರದ ವಿಶ್ವನಾಥ ಸ್ವಾಮಿ ಮತ್ತು ತಂಡ ರುದ್ರಹೋಮದ ಪೌರೋಹಿತ್ಯ ನೆರವೇರಿಸಿದರು.

ದೇವಸ್ಥಾನದಲ್ಲಿ ಸಂಜೆ ಮಹಾಮಂಗಳಾರತಿ ನೆರವೇರುತ್ತಿದ್ದಂತೆ ದೊಡ್ಡಬಸವೇಶ್ವರ ಸ್ವಾಮಿ ಪಲ್ಲಕ್ಕಿ ಮೆರವಣಿಗೆ ನೀಲಮ್ಮನ ಮಠಕ್ಕೆ ತೆರಳಿ, ಸ್ವಸ್ಥಳಕ್ಕೆ ಮರಳುತ್ತಿದ್ದಂತೆ ಹೋಮ ಹವನ ಜರುಗಿತು. ಮಂತ್ರಘೋಷ ಮೊಳಗಿದವು. ಮಂಗಳ ವಾದ್ಯಗಳ ಸದ್ದಿನೊಂದಿಗೆ ದೀಪೋತ್ಸವಕ್ಕೆ ಚಾಲನೆ ದೊರೆಯಿತು.

ADVERTISEMENT

ಪಟ್ಟಣವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರು ವೈಭವದ ಲಕ್ಷದೀಪೋತ್ಸವ ಸೊಬಗು ಕಣ್ತುಂಬಿಕೊಂಡರು. ಸ್ವಾಮಿಗೆ ಜಯಕಾರ ಕೂಗಿದರು.

ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್. ಗಣೇಶ್, ‘ಮನುಷ್ಯರಲ್ಲಿನ ಅಜ್ಞಾನದ ಅಂಧಕಾರ ಕಳೆದ ಸುಜ್ಞಾನದ ಬೆಳಕು ಹರಿಸುವ ಗುಣ ದೀಪೋತ್ಸವ ಹೊಂದಿದೆ. ನಾಡಿನ ರೈತಾಪಿ ವರ್ಗ ಖುಷಿಯಾಗಿರಲಿ ಎಲ್ಲರ ಬದುಕು ಹಸನಾಗಲಿ ಎನ್ನುವ ಸದುದ್ದೇಶದಿಂದ ದೀಪೋತ್ಸವ ಆಯೋಜಿಸಲಾಗಿದೆ’ ಎಂದರು.

ದೀಪೋತ್ಸವದ ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಾಳು ಆನಂದ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ.ಹನುಮಂತಪ್ಪ, ಎಸ್.ಪ್ರಭುಲಿಂಗಯ್ಯ ಸ್ವಾಮಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇದ್ದರು.