ADVERTISEMENT

ಒಂಬತ್ತು ಒಂಟೆ ವಶಕ್ಕೆ, ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 14:41 IST
Last Updated 19 ಜುಲೈ 2019, 14:41 IST
ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರಿಸಿರುವ ಒಂಟೆಗಳು
ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರಿಸಿರುವ ಒಂಟೆಗಳು   

ಹೊಸಪೇಟೆ: ಅಲೆಮಾರಿ ಜನ ಹಾಗೂ ಅವರ ಒಂಬತ್ತು ಒಂಟೆಗಳನ್ನು ಇಲ್ಲಿನ ಟಿ.ಬಿ. ಡ್ಯಾಂ ಪೊಲೀಸರು ಗುರುವಾರ ವಶಕ್ಕೆ ಪಡೆದು, ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಇರಿಸಿದ್ದಾರೆ.

ಒಂಟೆಗಳನ್ನು ಕಡಿದು, ಅವುಗಳ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಪೊಲೀಸರುಮಹಾರಾಷ್ಟ್ರದ ಪುಣೆ, ಅಹಮ್ಮದ್‌ ನಗರ ಮತ್ತು ಸೊಲ್ಲಾಪುರದಿಂದ ಬಂದಿರುವ ಒಂಬತ್ತು ಅಲೆಮಾರಿ ಜನ ಹಾಗೂ ಅಷ್ಟೇ ಸಂಖ್ಯೆಯ ಒಂಟೆಗಳನ್ನು ವಶಕ್ಕೆ ಪಡೆದಿದ್ದಾರೆ.

‘ಮಾರ್ಚ್‌ನಲ್ಲಿ ಹಂಪಿ ಉತ್ಸವದಲ್ಲಿ ಸಂದರ್ಭದಲ್ಲಿ ಬಂದಿದ್ದ ಈ ಅಲೆಮಾರಿ ಕುಟುಂಬಗಳು ಜಿಲ್ಲೆಯಾದ್ಯಂತ ಓಡಾಡಿ ಒಂಟೆ ಆಡಿಸುತ್ತ ಬದುಕು ನಡೆಸುತ್ತಿದ್ದಾರೆ. ಗುರುವಾರ ಟಿ.ಬಿ. ಡ್ಯಾಂ ಕಾಲೇಜು ಮೈದಾನದಲ್ಲಿ ಬೀಡು ಬಿಟ್ಟಿದ್ದಾಗ ಅವರನ್ನು ಕಂಡು ಪೊಲೀಸರು ವಶಕ್ಕೆ ಪಡೆದು, ವಾಜಪೇಯಿ ಉದ್ಯಾನದಲ್ಲಿ ಇರಿಸಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಗೌರವ ಅಧ್ಯಕ್ಷ ಕೆ.ಎಂ. ಮೇತ್ರಿ, ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ ಆಗ್ರಹಿಸಿದ್ದಾರೆ.

ADVERTISEMENT

‘ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಕೂಡಲೇ ಗಮನಹರಿಸಿ ಎಲ್ಲರನ್ನೂ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.