ADVERTISEMENT

ದಸರೆಯಲ್ಲಿ ಮನೆಗೆ ಬರುವ ದೇವಿ!

ಮೇಲ್ವರ್ಗದ ಜನ ದೇಗುಲಕ್ಕೆ ಪ್ರವೇಶ ನಿರಾಕರಿಸಿದಾಗ ಆರಂಭವಾದ ಆಚರಣೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಅಕ್ಟೋಬರ್ 2019, 9:34 IST
Last Updated 3 ಅಕ್ಟೋಬರ್ 2019, 9:34 IST
ಹೊಸಪೇಟೆಯ ಮ್ಯಾಸಕೇರಿಗೆ ಪಲ್ಲಕ್ಕಿಯಲ್ಲಿ ಕರೆತಂದ ಹುಲಿಗೆಮ್ಮ ದೇವಿಯನ್ನು ಸ್ಥಳೀಯರು ಬರಮಾಡಿಕೊಂಡರು–ಪ್ರಜಾವಾಣಿ ಚಿತ್ರ 
ಹೊಸಪೇಟೆಯ ಮ್ಯಾಸಕೇರಿಗೆ ಪಲ್ಲಕ್ಕಿಯಲ್ಲಿ ಕರೆತಂದ ಹುಲಿಗೆಮ್ಮ ದೇವಿಯನ್ನು ಸ್ಥಳೀಯರು ಬರಮಾಡಿಕೊಂಡರು–ಪ್ರಜಾವಾಣಿ ಚಿತ್ರ    

ಹೊಸಪೇಟೆ: ದಸರಾ ಹಬ್ಬದಲ್ಲಿ ಇಲ್ಲಿನ ಏಳುಕೇರಿಗಳ ಬೇಡ ನಾಯಕರ ಮನೆಗಳಿಗೆ ಸ್ವತಃ ದೇವಿಯೇ ಬರುತ್ತಾಳೆ!

ಹೌದು ಇದು ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ ನಿಜ. ಇಂತಹದ್ದೊಂದು ಪದ್ಧತಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಹಾಗೆ ಮನೆಗೆ ಬರುವ ದೇವತೆಯನ್ನು ಮನೆ ಮಂದಿಯೆಲ್ಲ ಪೂಜಿಸಿ ಧನ್ಯತೆ ಮೆರೆಯುತ್ತಾರೆ.

ನವರಾತ್ರಿಯ ಮೊದಲ ದಿನ ಆರಂಭಗೊಳ್ಳುವ ಈ ಆಚರಣೆ ಆಯುಧ ಪೂಜೆಯ ದಿನ ಕೊನೆಗೊಳ್ಳುತ್ತದೆ. ಅಂದಹಾಗೆ, ಈ ಆಚರಣೆಗೆ ಸ್ಥಳೀಯ ಗ್ರಾಮ್ಯ ಭಾಷೆಯಲ್ಲಿ ‘ದೇವತೆಗಳು ಊರು ಆಡುತ್ತವೆ’ ಎನ್ನಲಾಗುತ್ತದೆ.

ADVERTISEMENT

ವಿಶೇಷ ರೀತಿಯಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯನ್ನು ಹೊತ್ತು, ತಮಟೆ ಬಾರಿಸುತ್ತ ಪ್ರತಿಯೊಂದು ಮನೆಗಳಿಗೆ ಹೋಗುತ್ತಾರೆ. ಮನೆ ಮಂದಿಯೆಲ್ಲ ಸ್ವಾಗತಿಸಿ, ಹೂ, ಕಾಯಿ ಒಡೆದು, ನೈವೇದ್ಯ ಸಮರ್ಪಿಸುತ್ತಾರೆ. ಹೀಗಾಗಿ ಕೇರಿಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಈ ಸಂದರ್ಭಕ್ಕಾಗಿಯೇ ಕಾಯುವ ಕೇರಿಯ ಜನ ತಳಿರು, ತೋರಣಗಳಿಂದ ಇಡೀ ಕೇರಿಯನ್ನು ಅಲಂಕರಿಸುತ್ತಾರೆ. ಆಯುಧ ಪೂಜೆಯ ದಿನ ಎಲ್ಲ ದೇವತೆಗಳನ್ನು ಒಟ್ಟಿಗೆ ಬೀಳ್ಕೊಡುವುದು ವಿಶೇಷ. ಮರುದಿನ ಬನ್ನಿ ಮುಡಿದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ಅಂದಹಾಗೆ ಏಳುಕೇರಿಗಳಿಗೆ ಏಳು ಬೇರೆ ಬೇರೆ ದೇವಿಯವರನ್ನು ಕರೆ ತರಲಾಗುತ್ತದೆ. ಮ್ಯಾಸಕೇರಿಯಲ್ಲಿ ಹುಲಿಗೆಮ್ಮ, ಉಕ್ಕಡಕೇರಿಯಲ್ಲಿ ಕೊಂಗಮ್ಮ, ಚಿತ್ರಕೇರಿಯಲ್ಲಿ ಜಲದುರ್ಗಮ್ಮ, ಬಾಣದಕೇರಿಯಲ್ಲಿ ಬಳ್ಳಾರಿ ದುರ್ಗಮ್ಮ, ತಳವಾರಕೇರಿಯಲ್ಲಿ ನಿಜಲಿಂಗಮ್ಮ, ಜಂಬಾನಹಳ್ಳಿ ಕೇರಿಯಲ್ಲಿ ರಾಂಪುರ ದುರ್ಗಮ್ಮ, ಬಂಡಿಕೇರಿಯಲ್ಲಿ ತಾಯಮ್ಮ– ಮರಿಯಮ್ಮ ದೇವತೆ ಬರುತ್ತಾರೆ. ಈ ಆಚರಣೆ ತಾಲ್ಲೂಕಿನ ಕಮಲಾಪುರ ಏಳುಕೇರಿಗಳಲ್ಲೂ ಇದೆ.

‘ನೂರಾರು ವರ್ಷಗಳ ಹಿಂದೆ ಆರಂಭಗೊಂಡ ಈ ಆಚರಣೆ ಇಂದಿಗೂ ಜೀವಂತವಾಗಿದೆ. ಏಳುಕೇರಿಗಳಲ್ಲಿ ಬೇಡ ನಾಯಕ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದವರಿಗೆ ಮೇಲ್ವರ್ಗದ ಜನ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿದಾಗ ಅವರು ಸ್ಥಳೀಯ ದೇವತೆಗಳನ್ನು ಪೂಜಿಸಲು ಆರಂಭಿಸಿದರು’ ಎನ್ನುತ್ತಾರೆ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.

‘ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ಏಳು ಸಾವಿರ ಬೇಡ ನಾಯಕರ ಬಲಿಷ್ಠ ಪಡೆ ಇತ್ತು. ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಈ ಪಡೆ ಏಳು ಕೇರಿಗಳಿಗೆ ಸೀಮಿತವಾಯಿತು. ಅವುಗಳೇ ಇಂದಿನ ಏಳು ಕೇರಿಗಳು. ನಾಯಕರಿಗೆ ನವರಾತ್ರಿ ಎಲ್ಲಕ್ಕಿಂತ ದೊಡ್ಡ ಹಬ್ಬ’ ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಶಿವಕುಮಾರ ಮಾಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.