ADVERTISEMENT

ಆರೋಗ್ಯ ಕರ್ನಾಟಕ:ಖಾಸಗಿ‌ ಆಸ್ಪತ್ರೆಗಳ ಹಿಂಜರಿಕೆ: ಓಲೈಕೆ ಯತ್ನ - ಡಿಎಚ್‌ಒ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 5:58 IST
Last Updated 29 ಸೆಪ್ಟೆಂಬರ್ 2018, 5:58 IST

ಬಳ್ಳಾರಿ: ಆರೋಗ್ಯ ಕರ್ನಾಟಕ ಯೋಜನೆಯಲ್ಲಿ‌ ವಿವಿಧ ‌‌ಚಿಕಿತ್ಸೆಗಳಿಗೆ‌ ನಿಗದಿ‌ ಮಾಡಿರುವ ದರಗಳಿಂದ ನಷ್ಟವಾಗುತ್ತದೆ ಎಂಬ ಕಾರಣ‌ ಒಡ್ಡಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಕಾರ್ಡ್ ದಾರರಿಗೆ‌ ಚಿಕಿತ್ಸೆ ನೀಡಲು‌ ಹಿಂಜರಿಯುತ್ತಿದ್ದಾರೆ. ಅವರ‌ ಮನ ಒಲಿಸುವ ಪ್ರಯತ್ನ ನಡೆದಿದೆ‌ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವರಾಜ ಹೆಡೆ ತಿಳಿಸಿದರು.

ಸರ್ಕಾರ ಹೆಚ್ಚಿನ ದರ‌ ನಿಗದಿ ಮಾಡಬೇಕು ಎಂಬುದು ಖಾಸಗಿ ಆಸ್ಪತ್ರೆಗಳ ‌ಆಗ್ರಹ. ರಾಜ್ಯದಾದ್ಯಂತ ಇದೇ ಪರಿಸ್ಥಿತಿ ಇದೆ ಎಂದು‌ ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಶಸ್ವಿನಿ ಯೋಜನೆ ಅಡಿ ನೀಡಿದ‌ ಚಿಕಿತ್ಸೆ ವೆಚ್ಷವನ್ನು‌ ಸರ್ಕಾರ ಇನ್ನೂ ಖಾಸಗಿ‌ ಆಸ್ಪತ್ರೆಗಳಿಗೆ ಪಾವತಿಸದೇ ಇರುವುದು ‌ಕೂಡ, ಅವು‌ ಹೊಸ ಯೋಜನೆ ಅಡಿ‌ ಚಿಕಿತ್ಸೆ ನೀಡದೇ ಇರಲು ಕಾರಣ ಎಂದರು.

ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆ ನೀಡುವಂತೆ‌ ನೀಡಲಾಗುವ ಶಿಫಾರಸು ‌ಪತ್ರದ ಅನ್ವಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವ‌ ಮುನ್ನ ಆರೋಗ್ಯ ‌ಕಾರ್ಡ್ ಕಡ್ಡಾಯ ಎನ್ನುವಂತಿಲ್ಲ. ರೋಗಿಯ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಆಧರಿಸಿ‌ ಚಿಕಿತ್ಸೆ‌‌‌‌ ನೀಡಬೇಕು. ಇಲ್ಲದಿದ್ದರೆ ನೋಂದಣಿಯನ್ನು‌ ರದ್ದುಪಡಿಸಲಾಗುವುದು ‌ಎಂದು ಎಚ್ಚರಿಕೆ‌ ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕಾರ್ಡ್ ‌ನೋಂದಣಿ‌ ಕೆಲ‌ ದಿನಗಳಿಂದ‌ ಸ್ಥಗಿತಗೊಂಡಿದ್ದು‌ ನಿಜ. ಅರ್ಜಿಗಳು ಖಾಲಿಯಾಗಿದ್ದವು. ಈಗ ‌ವಿತರಣೆ‌ ನಡೆದಿದ್ದು, ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು‌ ಎಂದರು.

ಆರೋಗ್ಯ ಕರ್ನಾಟಕ ಯೋಜನೆ ಅಡಿ 24,184 ಮಂದಿ‌ ಹೆಸರು ನೋಂದಾಯಿಸಿದ್ದು ಅವರಲ್ಲಿ 23,140 ಬಿಪಿಎಲ್ ಮತ್ತು 1044 ಎಪಿಎಲ್ ಕಾರ್ಡ್‌ದಾರರಿದ್ದಾರೆ. 736 ಮಂದಿ‌ ಚಿಕಿತ್ಸೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.