ವಿಜಯನಗರ (ಹೊಸಪೇಟೆ): ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮವು ಶನಿವಾರ ತಾಲೂಕಿನ ತಿಮ್ಮಲಾಪುರದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರಿಸಿದ್ದ ವಿವಿಧ ಇಲಾಖೆಯ ಮಾಹಿತಿಗಳುಳ್ಳ ವಸ್ತು ಪ್ರದರ್ಶನವು ಗ್ರಾಮಸ್ಥರ ಗಮನ ಸೆಳೆಯಿತು.
ಆರೋಗ್ಯ, ಪಶು ಸಂಗೋಪನೆ, ತೋಟಗಾರಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಿದ್ದ ಜನಜಾಗೃತಿಯುಳ್ಳ ವಸ್ತುಪ್ರದರ್ಶನಗಳು ಸೂಕ್ತ ಮಾಹಿತಿಗಳನ್ನು ನೋಡುಗರಿಗೆ ಒದಗಿಸಿಕೊಟ್ಟವು.
ಕೃಷಿ ಫಲ ಪ್ರದರ್ಶನ
ಕಂಪ್ಲಿ ಸೇರಿದಂತೆ ತಿಮ್ಮಲಾಪುರ, ಕಮಲಾಪುರ, ದೇವಸಮುದ್ರ ಭಾಗದ ರೈತರು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದು ಸಾವಯವ ಪದ್ಧತಿಯಿಂದ ಬೆಳೆದ ಜಿ-9, ಸುಗಂಧಿ ತಳಿಯ ಬಾಳೆ, ತೆಂಗು, ಪಪ್ಪಾಯ, ಪೇರಲ ಹಾಗೂ ತರಕಾರಿ ಬೆಳೆಗಳಾದ ದೊಣ್ಣೆಮೆಣಸಿನಕಾಯಿ, ಮೂಲಂಗಿ, ಬೀನ್ಸ್ ಹಾಗೂ ಮೆಣಸಿನಕಾಯಿಯನ್ನು ಪ್ರದರ್ಶನಕ್ಕೆ ಇಟ್ಟು ಇತರ ರೈತರಿಗೂ ಇಲಾಖೆಯ ಸಹಾಯಧನದಿಂದ ಬೆಳೆ ಬೆಳೆಯಬಹುದು ಎಂಬ ಮಾಹಿತಿಯನ್ನು ನೀಡುತ್ತಿದ್ದೇವೆ, ರೈತರು ಸಹ ಆಸಕ್ತಿ ವಹಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ತೋಟಗಾರಿಕೆ ಇಲಾಖೆಯ ಎಲ್.ಇ.ಡಿ ತಿರ್ಲಾಪುರ ಅವರು ತಿಳಿಸಿದರು.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮುದಾಯ ಆಧಾರಿತ ಚಟುವಟಿಕೆಗಳಾದ ಸೀಮಂತ ಕಾರ್ಯಕ್ರಮ, ಅನ್ನ ಪ್ರಾಶನ ಹಾಗೂ ಸುಪೋಷಣಾ ದಿನ ಯೋಜನೆಗಳ ಕುರಿತಂತೆ ಮಾಹಿತಿಗಳನ್ನು ಗ್ರಾಮಸ್ಥರಿಗೆ ನೀಡಿದರು.
ಅಂಗನವಾಡಿ ಕಲಿಕಾ ಶಿಕ್ಷಣ, ಶಾಲಾ ಪೂರ್ವ ಶಿಕ್ಷಣ ತರಬೇತಿ, ಬಾಣಂತಿಯರು ಅನುಸರಿಸಬೇಕಾದ ಪೌಷ್ಟಿಕ ಆಹಾರ ಪದ್ಧತಿ, ಮಕ್ಕಳ ಪೌಷ್ಟಿಕ ಕೈತೋಟ ಸೇರಿದಂತೆ ಇಲಾಖೆಯ ಕಾರ್ಯಕ್ರಮಗಳ ಕುರಿತು ವಸ್ತುಪ್ರದರ್ಶನ ಮೂಲಕ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಗ್ರಾಮದ ಮಹಿಳೆಯರು ಇದರಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.