ಬಳ್ಳಾರಿ: ವರ್ಷದ ಬಳಿಕ ಇದೇ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಜಿಲ್ಲಾ ಮಟ್ಟದ ಜನಸ್ಪಂದನ, ಜಿಲ್ಲಾ ಪಂಚಾಯಿತಿಯ ವರ್ಷದ ಮೊದಲ ‘ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ (ಕೆಡಿಪಿ)’ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಗಳಿಗಾಗಿ ಅಧಿಕಾರಿಗಳು ಕಡೇ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾಹಿತಿ ಒಪ್ಪಮಾಡುಕೊಂಡಿದ್ದಾರೆ. ಉಸ್ತುವಾರಿ ಸಚಿವರೂ ಸಿದ್ಧರಾಗಿಯೇ ಬಳ್ಳಾರಿಗೆ ಬರುತ್ತಿದ್ದು, ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆ, ಸವಾಲುಗಳನ್ನು ಪಟ್ಟಿಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
2024ರ ಅಕ್ಟೋಬರ್ 9ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿತ್ತು. ಅದಾದ ಬಳಿಕ ಈ ವರೆಗೆ ಎರಡು ಬಾರಿ ಸಭೆ ನಿಗದಿಯಾಯಿತಾದರೂ, ಸಭೆ ಮಾತ್ರ ನಡೆಯಲಿಲ್ಲ. ಇದೀಗ ಸಭೆ ನಿಗದಿಯಾಗಿದ್ದು, ಸಚಿವರು ಬರುವುದೂ ನಿಚ್ಚಳವಾಗಿದೆ. ಬಹುತೇಕ ಎಲ್ಲ ಶಾಸಕರು, ಸಂಸದರೂ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳು ಇವೆ ಎಂದು ಗೊತ್ತಾಗಿದೆ. ಇದಕ್ಕೂ ಮೊದಲು ಡಾ. ರಾಜ್‌ಕುಮಾರ್ ರಸ್ತೆಯಲ್ಲಿನ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ನಡೆಸಲಿದ್ದಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ ರಸ್ತೆಗಳು ಹದಗೆಟ್ಟಿವೆ. ಗ್ರಾಮೀಣ ಭಾಗದ ರಸ್ತೆಗಳಂತೂ ತೀರ ಅದ್ವಾನದ ಸ್ಥಿತಿಗೆ ಬಂದು ತಲುಪಿವೆ. ಪ್ರತಿ ಹಳ್ಳಿಗಳಲ್ಲೂ ನೈರ್ಮಲ್ಯದ ಸಮಸ್ಯೆಗಳು ಇದ್ದೇ ಇವೆ. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಮನೆ, ಬೆಳೆ ಹಾನಿಯಾಗಿದೆ. ಹಲವು ಶಾಲೆಗಳು ಮಳೆಗೆ ಸೋರುತ್ತಿವೆ. ಜಿಲ್ಲೆಯ ಶೈಕ್ಷಣಿಕ ಸಾಧನೆ ಇನ್ನೂ ಕೆಳ ಮಟ್ಟದಲ್ಲೇ ಇದೆ. ಮಟ್ಕಾ , ಇಸ್ಪೀಟ್, ಗಾಂಜಾ ದಂಧೆಗಳು ಬುಸುಗುಡುತ್ತಿವೆ. ಪಡಿತರ ಅಕ್ಕಿ ಕಳ್ಳ ಸಾಗಾಣೆಯಂಥ ಪಿಡುಗು ಜಿಲ್ಲೆಯನ್ನು ಬಾಧಿಸುತ್ತಿವೆ.
ಇನ್ನೊಂದೆಡೆ, ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳು ಉತ್ತಮವಾದಂತೆ ಕಾಣುತ್ತಿಲ್ಲ. ಕಂಪ್ಲಿಯಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಶಿಶು ಮತ್ತು ಬಾಣಂತಿ ಸಾವು ಪ್ರಕರಣವು ವರ್ಷದ ಹಿಂದಿನ ಬಾಣಂತಿಯರ ಸಾವಿನ ಘಟನೆಯನ್ನು ನೆನಪಿಸುವಂತಿದೆ. ಆಸ್ಪತ್ರೆಗಳಲ್ಲಿ ಔಷದಿಗಳನ್ನು ತರಲು ಹೊರಗೆ ಚೀಟಿ ಬರೆದುಕೊಡುವ ಪರಿಪಾಠ ಇನ್ನೂ ನಿಂತಿಲ್ಲ. ನಗರಗಳ ಸಮಸ್ಯೆ ಹೇಳತೀರದು. ಹೀಗೆ ಹತ್ತು ಹಲವು ಸಮಸ್ಯೆಗಳು ಜಿಲ್ಲೆಯನ್ನು ಬಾಧಿಸುತ್ತಲೇ ಇವೆ.
ಜಿಲ್ಲೆಯಲ್ಲಿ 15 ವರ್ಷಗಳಿಂದಲೂ ಕುಂಟುತ್ತಿರುವ ಕಾಮಗಾರಿಗಳಿವೆ. ವಿಮ್ಸ್‌ನ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಹೆಸರಿಗೆ ಎಂಬಂತೆ ಆರಂಭಿಸಲಾಗಿದೆ. ಜಿಲ್ಲೆಯ ರಸ್ತೆಗಳು ಗುಂಡಿಬಿದ್ದಿವೆ. ಮಂತ್ರಿಗಳು ಇವುಗಳತ್ತ ಗಮನಹರಿಸಿ ಪರಿಹಾರ ಸೂಚಿಸಬೇಕು.ರೆಕ್ಕಲ ವೆಂಕಟರೆಡ್ಡಿ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.