ADVERTISEMENT

15 ವರ್ಷ ಹಳೆಯ ವಾಹನ ಓಡಿಸುವಂತಿಲ್ಲ: ಡಿ.ವೈ.ಎಸ್ಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:40 IST
Last Updated 3 ಅಕ್ಟೋಬರ್ 2019, 13:40 IST
ಸಭೆಯಲ್ಲಿ ಡಿ.ವೈ.ಎಸ್ಪಿ. ವಿ. ರಘುಕುಮಾರ ಮಾತನಾಡಿದರು
ಸಭೆಯಲ್ಲಿ ಡಿ.ವೈ.ಎಸ್ಪಿ. ವಿ. ರಘುಕುಮಾರ ಮಾತನಾಡಿದರು   

ಹೊಸಪೇಟೆ: ‘ಹದಿನೈದು ವರ್ಷಗಳಿಗಿಂತ ಹಳೆಯ ವಾಹನಗಳನ್ನು ಯಾರೂ ಕೂಡ ಓಡಿಸಬಾರದು. ಒಂದುವೇಳೆ ನಿಯಮ ಉಲ್ಲಂಘಿಸಿ ಓಡಿಸಿದರೆ ಕ್ರಮ ಜರುಗಿಸಲಾಗುವುದು’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿನ ಪಟ್ಟಣ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಪ್ರಯಾಣಿಕ ಮತ್ತು ಸರಕು ಸಾಗಣೆ ಆಟೊ ಚಾಲಕರು ಮತ್ತು ಮಾಲೀಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಹಳೆಯ ವಾಹನಗಳನ್ನು ಬದಲಿಸಿಕೊಳ್ಳಬಹುದು. ಅದಾದ ನಂತರವೂ ಹಳೆಯ ವಾಹನಗಳನ್ನೇ ರಸ್ತೆಗೆ ಇಳಿಸಿದರೆ ಕ್ರಮ ಖಚಿತ’ ಎಂದು ತಿಳಿಸಿದರು.

‘ಪ್ರಯಾಣಿಕರ ಆಟೊಗಳಲ್ಲಿ ಯಾರೂ ಕೂಡ ಸರಕನ್ನು ಸಾಗಿಸಬಾರದು. ಚಾಲಕರಿಗೆ ಮೀಸಲಾಗಿರುವ ಆಸನದಲ್ಲಿ ಅವರನ್ನು ಬಿಟ್ಟು ಪ್ರಯಾಣಿಕರನ್ನು ಕೂರಿಸಿಕೊಳ್ಳುವಂತಿಲ್ಲ. ಕಡ್ಡಾಯವಾಗಿ ಎಲ್ಲ ವಾಹನ ಚಾಲಕರು ಅಗತ್ಯ ದಾಖಲೆಗಳನ್ನು ಜತೆಯಲ್ಲಿ ಇಟ್ಟುಕೊಳ್ಳಬೇಕು. ಸಂಚಾರ ಪೊಲೀಸರು ಕೇಳಿದಾಗ ಅವುಗಳನ್ನು ತೋರಿಸಬೇಕು’ ಎಂದು ಹೇಳಿದರು.

ADVERTISEMENT

‘ನಗರದಲ್ಲಿ 50ಕ್ಕೂ ಹೆಚ್ಚು ಕಡೆ ಆಟೊ ಸ್ಟ್ಯಾಂಡ್‌ಗಳನ್ನು ನಿರ್ಮಿಸಿಕೊಡಬೇಕು ಎಂಬ ಬೇಡಿಕೆ ಇದೆ. ಈ ಕುರಿತು ನಗರಸಭೆಯ ಪೌರಾಯುಕ್ತರೊಂದಿಗೆ ಚರ್ಚಿಸಿ, ಅಗತ್ಯ ಇರುವ ಕಡೆ ಮಾಡಿಕೊಡಲಾಗುವುದು. ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸಂಚಾರ ಅಸ್ತವ್ಯಸ್ತ ಆಗದಂತೆ ಆಟೊ ಚಾಲಕರು ಎಚ್ಚರ ವಹಿಸಬೇಕು. ಸಾಲಿನಲ್ಲಿ ಓಡಾಡಬೇಕು’ ಎಂದು ತಿಳಿಸಿದರು.

ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಕಾಶಿನಾಥ, ಸಬ್‌ ಇನ್‌ಸ್ಪೆಕ್ಟರ್‌ ರಜಪೂತ, ಎ.ಆರ್‌.ಟಿ.ಒ. ಮಂಜುನಾಥ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.