ADVERTISEMENT

ತೆಕ್ಕಲಕೋಟೆ | ನಾರುತ್ತಿರುವ ಕೆರೆಯೇ ನೀರೇ ಆಧಾರ

ಅಕ್ಕಲಕೋಟೆ: ನೆನೆಗುದಿಗೆ ಬಿದ್ದ 24x7 ಕಾಮಗಾರಿ–ಪಾಚಿಗಟ್ಟಿ ಕಪ್ಪಾದ ನೀರು

ಚಾಂದ್ ಪಾಷ ಎನ್.ಎಸ್
Published 18 ಅಕ್ಟೋಬರ್ 2023, 7:20 IST
Last Updated 18 ಅಕ್ಟೋಬರ್ 2023, 7:20 IST
ತೆಕ್ಕಲಕೋಟೆ ಸಮೀಪದ ಮೈಲಾಪುರ ಕ್ಯಾಂಪ್ ನ ಕುಡಿಯುವ ನೀರಿನ ಕೆರೆ ಪಾಚುಗಟ್ಟಿ ಹಸಿರು ಬಣ್ಣಕ್ಕೆ ತಿರುಗುವುದು
ತೆಕ್ಕಲಕೋಟೆ ಸಮೀಪದ ಮೈಲಾಪುರ ಕ್ಯಾಂಪ್ ನ ಕುಡಿಯುವ ನೀರಿನ ಕೆರೆ ಪಾಚುಗಟ್ಟಿ ಹಸಿರು ಬಣ್ಣಕ್ಕೆ ತಿರುಗುವುದು   

–ಚಾಂದ್ ಬಾಷ

ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಸುತ್ತಲಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಉಲ್ಬಣಿಸುತ್ತಿದ್ದು, ಸಾರ್ವಜನಿಕರು ಕಾಲುವೆ ಹಾಗೂ ಬೋರ್ ವೆಲ್ ನೀರನ್ನು ಅವಲಂಬಿಸುವ ಅನಿವಾರ್ಯತೆ ಒದಗಿದೆ.

ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಾಪುರ ಗ್ರಾಮದ ಕೆರೆಯ ನೀರು ಪಾಚುಗಟ್ಟಿ ಹಸಿರು ಬಣ್ಣಕ್ಕೆ ತಿರುಗಿದ್ದು ಗಬ್ಬು ನಾರುತ್ತಿದೆ. ಸ್ಥಳೀಯ ಆಡಳಿತ ಇದೇ ನೀರನ್ನು ಸರಬರಾಜು ಮಾಡುತ್ತಿದೆ.

ADVERTISEMENT

'ಎರಡು ತಿಂಗ್ಳ ಕೆಳಗೆ ಪಿಡಿಒ ಅವರಿಗೆ ಮನವಿ ಕೊಟ್ಟು ಕೆರೆ ಸ್ವಚ್ಛಗೊಳಿಸಿ ನೀರು ತುಂಬಿಸಲು ಹೇಳಿದ್ವಿ. ಆದ್ರ ಅರ್ಧಂಬರ್ಧ ಸ್ವಚ್ಛ ಮಾಡಿ ಎರಡು ಅಡಿ ನೀರು ತುಂಬಿಸ್ಯಾರ್ರಿ. ಅವು ಗಬ್ಬು ನಾರ್ತವ' ಎಂದು ಗ್ರಾಮಸ್ಥ ನಾಗರಾಜ ಅಲವತ್ತುಕೊಂಡರು.

ವಿದ್ಯುತ್ ಸಮಸ್ಯೆಯಿಂದಾಗಿ ವಾರ್ಡ್ ಗಳಿಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈ ಸಮಸ್ಯೆ ಬಗೆಹರಿದಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ
–ಪರಶುರಾಮ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ತೆಕ್ಕಲಕೋಟೆ

'ಈಗ ಕಾಲುವೆಗೆ ನೀರು ಅದಾವ್ರಿ ಅವೇ ನೀರು ಕುಡೀತಿವಿ ನಾಳೆ ನೀರು ಬಂದ್ ಆದ್ರೆ ನಮ್ದು ಬಿಡ್ರಿ ಜಾನುವಾರುಗಳ ಗತಿ ಏನ್ರಿ' ಎಂದು ಹುಸೇನ್ ಬಾಷಾ ಕಳವಳ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ 50 ಮನೆಗಳಿವೆ,  300ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಎರಡು ಕೈ ಬೊರವೆಲ್ ಇದ್ದು ಒಂದು ಮಾತ್ರ ಕೆಲಸ ಮಾಡುತ್ತದೆ’ ಎಂದು ಮೈಲಾಪುರ ಕ್ಯಾಂಪ್ ನ ಹುಲುಗಪ್ಪ, ಹಾಗಲೂರಪ್ಪ, ಸಣ್ಣ ಹನುಮಂತಪ್ಪ, ಮೂಕಣ್ಣ, ಯಲ್ಲಪ್ಪ, ಮಂಜು, ರವಿಕುಮಾರ್, ಯೋಗಾನಂದ, ಖಲೀಲ್ ಕುಡಿಯುವ ನೀರಿನ ಸಮಸ್ಯೆ ಬಿಚ್ಚಿಟ್ಟರು.

ತೆಕ್ಕಲಕೋಟೆ ಪಟ್ಟಣದ ಕೋಟೆ ಮುಂಭಾಗದ ಡಾಕ್ಟರ್ ವಾಟರ್ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸದೇ ಪಾಳು ಬಿದ್ದಿರುವುದು.
ಕೆರೆ ತುಂಬಿಸುವ ಕೆಲಸ ಶೀರ್ಘವೇ ಪ್ರಾರಂಭಿಸುತ್ತಿದ್ದು ಅಲ್ಲಿಯವರೆಗೆ ನಾಲ್ಕು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ
–ವೀರಪ್ಪ ಪಿಡಿಒ ಬಲಕುಂದಿ ಗ್ರಾ.ಪಂ

ನಿರಂತರ ನೀರು ಇನ್ನೂ ಮರೀಚಿಕೆ

₹ 21.72 ಕೋಟಿ ವೆಚ್ಚದ 24x7 ಕಾಮಗಾರಿ 2018ರಲ್ಲಿ ಪ್ರಾರಂಭವಾಗಿ ಐದು ವರ್ಷ ಕಳೆದರೂ ಶೇ 50ರಷ್ಟು ಕಾರ್ಯ ಪೂರ್ಣಗೊಂಡಿಲ್ಲ. ಪಟ್ಟಣದಲ್ಲಿ ಒಟ್ಟು 20 ವಾರ್ಡ್ ಗಳಿದ್ದು ಸುಮಾರು 40 ಸಾವಿರ ಜನಸಂಖ್ಯೆ ಇದೆ. ನೀರು ಸರಬರಾಜು ಮಾಡುವ ದೇವಿನಗರ ಕೆರೆ ತುಂಬುವ ಹಂತದಲ್ಲಿದ್ದರೂ ಸಾರ್ವಜನಿಕರಿಗೆ ವಾರಕ್ಕೊಮ್ಮೆ ನೀರು ಬಿಡುವುದರಿಂದ ಎಲ್ಲ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಕಾಯುವ ಅನಿವಾರ್ಯತೆ ಒದಗಿದೆ. ಹತ್ತು ಆರ್.ಓಪ್ಲಾಂಟ್ ಗಳಿದ್ದು ಇನ್ನೂ ಮೂರು ಪ್ಲಾಂಟ್‌ಗಳು ಆರಂಭವಾಗಿಲ್ಲ. ಹಿಂದೆ ಕಾರ್ಯನಿರ್ವಹಿಸುತ್ತಿದ್ದ 10ನೇ ವಾರ್ಡಿನ ಕೋಟೆ ಮುಂಭಾಗದ ಡಾಕ್ಟರ್ ವಾಟರ್ ನೀರಿನ ಘಟಕ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಇದರಿಂದಾಗಿ ಈ ಭಾಗದ ಜನ ನಿತ್ಯವೂ ನೀರಿನ ಬಾಟಲಿಗೆ ₹ 20 ಕೊಟ್ಟು ಖರೀದಿಸಿ ಸುಸ್ತಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.