ADVERTISEMENT

ಕರ್ಫ್ಯೂ: ಎಂಟು ಕಡೆ ಚೆಕ್‌ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 15:45 IST
Last Updated 19 ಏಪ್ರಿಲ್ 2021, 15:45 IST
ಹೊಸಪೇಟೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಡಿವೈಎಸ್ಪಿ ವಿ. ರಘುಕುಮಾರ ಮಾತನಾಡಿದರು. ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್ ಇದ್ದಾರೆ
ಹೊಸಪೇಟೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಡಿವೈಎಸ್ಪಿ ವಿ. ರಘುಕುಮಾರ ಮಾತನಾಡಿದರು. ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್ ಇದ್ದಾರೆ   

ಹೊಸಪೇಟೆ (ವಿಜಯನಗರ): ‘ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ನಗರದ ಎಂಟು ಭಾಗಗಳಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ’ ಎಂದು ಡಿವೈಎಸ್ಪಿ ವಿ. ರಘುಕುಮಾರ ತಿಳಿಸಿದರು.

ಸೋಮವಾರ ಸಂಜೆ ನಗರದಲ್ಲಿ ನಡೆದ ವರ್ತಕರ ಸಂಘ, ವಿವಿಧ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೆ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಕರ್ಫ್ಯೂ ಸಮಯದಲ್ಲಿ ನಿಷೇಧಿಸಿದೆ. ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸದ ಹವಾನಿಯಂತ್ರಿತ ಮಳಿಗೆ, ಹೋಟೆಲ್‌ಗಳವರಿಗೆ ₹10 ಸಾವಿರ, ಹವಾನಿಯಂತ್ರಿತವಲ್ಲದವರಿಗೆ ₹5 ಸಾವಿರ ದಂಡ ಹೇರಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ವರ್ತಕರು ತಮ್ಮ ವಾಣಿಜ್ಯ ಕೇಂದ್ರಗಳಿಗೆ ಬರುವ ಗ್ರಾಹಕರು ಮಾಸ್ಕ್ ಮತ್ತು ಅಂತರವನ್ನು ಪಾಲಿಸಲು ಕಟ್ಟುನಿಟ್ಟಾಗಿ ಸೂಚಿಸಬೇಕು. ಇಲ್ಲವಾದಲ್ಲಿ ದಂಡ ಹಾಕಲಾಗುವುದು. ನಗರದ ಪ್ರಮುಖ ಭಾಗಗಳು, ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರು, ಅಂತರ ಇರದೆ ವಹಿವಾಟು ನಡೆಸುವವರು, ಮಾಸ್ಕ್‌ ಇಲ್ಲದೆ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುವರು. ಮಧ್ಯರಾತ್ರಿ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ. ಆದರೆ, ಮಳಿಗೆಗಳಲ್ಲಿ ವಸ್ತುಗಳನ್ನು ಇಳಿಸಬಹುದು’ ಎಂದರು.

ADVERTISEMENT

‘ಎಲ್ಲ ಮಳಿಗೆಗಳ ಮುಂದೆ ಅಂತರ ಕಾಯ್ದುಕೊಳ್ಳಲು ಗುರುತು ಮಾಡಬೇಕು. ಫಲಕ ಹಾಕಬೇಕು. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ‘ವೈದ್ಯರ ಚೀಟಿ ತರದೇ ಜ್ವರ, ನೆಗಡಿಯ ಮಾತ್ರೆಗಳನ್ನು ಕೇಳುವ ಗ್ರಾಹಕರಿಗೆ ಮಾತ್ರೆಗಳನ್ನು ಮೆಡಿಕಲ್‌ ಶಾಪ್‌ನವರು ನೀಡಬಾರದು’ ಎಂದು ಸೂಚಿಸಿದರು. ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.