ADVERTISEMENT

ಮತದಾನ ದಿನ ವೇತನ ಸಹಿತ ರಜೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:37 IST
Last Updated 17 ಮೇ 2022, 13:37 IST

ಹೊಸಪೇಟೆ (ವಿಜಯನಗರ): ಗ್ರಾಮ ಪಂಚಾಯಿತಿ ಉಪಚುನಾವಣೆ ಹಿನ್ನೆಲೆಯಲ್ಲಿ ಮೇ 20ರಂದು ವೇತನ ಸಹಿತ ರಜೆ ಘೋಷಿಸಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಅನುದಾನಿತ-ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ, ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೈಗಾರಿಕೆಗಳು, ಸಹಕಾರಿ ರಂಗದ ಸಂಘ-ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾಯಂ, ದಿನಗೂಲಿ ಅರ್ಹ ಮತದಾರ ನೌಕರರಿಗೆ ರಜೆ ಅನ್ವಯವಾಗಲಿದೆ.

ಮೇ 18ರಿಂದ ಮೇ 20ರ ವರೆಗೆ ಹಾಗೂ ಮೇ 22ರಂದು ಮದ್ಯ ಮಾರಾಟ, ಸಾಗಾಟ ನಿಷೇಧಿಸಲಾಗಿದೆ. ಮತಗಟ್ಟೆಯ 100ಮೀ. ಹಾಗೂ ಮತ ಎಣಿಕೆ ಕೇಂದ್ರಗಳ ಸುತ್ತ 200ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚುನಾವಣೆಯಲ್ಲಿ ಗೊಂದಲ ಉಂಟಾಗದಂತೆ ತಡೆಯಲು ಚುನಾವಣೆ ನಡೆಯಲಿರುವ ಗ್ರಾಮಗಳಲ್ಲಿ ಸಂತೆ, ಜಾತ್ರೆ ರದ್ದುಪಡಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯವರು ಆಯುಧಗಳನ್ನು ಹತ್ತಿರದ ಪೊಲೀಸ್‌ ಠಾಣೆಗೆ ಒಪ್ಪಿಸಿ, ಚುನಾವಣೆ ನಂತರ ಮರಳಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ADVERTISEMENT

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ 18-ಶಿವಪುರ, 22-ಚೌಡಾಪುರ, 24-ಬೆಳ್ಳಿಗಟ್ಟ ಮತ್ತು ಹಡಗಲಿ ತಾಲ್ಲೂಕಿನ 16-ನಂದಿಹಳ್ಳಿ, 21-ಇಟ್ಟಿಗಿ, ಹೊಸಪೇಟೆ ತಾಲ್ಲೂಕಿನ 8-ಡಣಾಯಕನಕೆರೆ, ಹರಪನಹಳ್ಳಿ ತಾಲ್ಲೂಕಿನ 8-ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೇ 20ರಂದು ಚುನಾವಣೆ ನಡೆಯಲಿದೆ. 22ರಂದು ಮತ ಎಣಿಕೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.