ADVERTISEMENT

ಕಾಟಾಚಾರಕ್ಕೆ ಪರಿಸರ ದಿನ: ವಾರದೊಳಗೆ ಒಣಗಿದ ಸಸಿಗಳು

‘ಪ್ರಜಾವಾಣಿ’ ರಿಯಾಲ್ಟಿ ಚೆಕ್‌ನಲ್ಲಿ ಕಂಡು ಬಂದ ಸತ್ಯಾಂಶ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಜೂನ್ 2022, 19:30 IST
Last Updated 15 ಜೂನ್ 2022, 19:30 IST
ಹೊಸಪೇಟೆಯ ಎಚ್‌ಎಲ್‌ಸಿ ಕಾಲುವೆ ಬಳಿ ಇತ್ತೀಚೆಗೆ ನೆಡಲಾಗಿದ್ದ ಸಸಿಗಳು ಬಿಸಿಲಿಗೆ ಒಣಗಿ ಹೋಗಿದ್ದು, ಅಸ್ತಿತ್ವವನ್ನೇ ಕಳೆದುಕೊಂಡಿವೆ –ಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.
ಹೊಸಪೇಟೆಯ ಎಚ್‌ಎಲ್‌ಸಿ ಕಾಲುವೆ ಬಳಿ ಇತ್ತೀಚೆಗೆ ನೆಡಲಾಗಿದ್ದ ಸಸಿಗಳು ಬಿಸಿಲಿಗೆ ಒಣಗಿ ಹೋಗಿದ್ದು, ಅಸ್ತಿತ್ವವನ್ನೇ ಕಳೆದುಕೊಂಡಿವೆ –ಪ್ರಜಾವಾಣಿ ಚಿತ್ರ: ಅಭಿಷೇಕ್‌ ಸಿ.   

ಹೊಸಪೇಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ಹಚ್ಚಿದ ಸಸಿಗಳು ವಾರ ಕಳೆಯುವಷ್ಟರಲ್ಲಿ ಒಣಗಿ ಹೋಗಿವೆ.

ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಜೂ. 5ರಿಂದ 12ರವರೆಗೆ ಜಿಲ್ಲೆಯಾದ್ಯಂತ ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ, ಜೂ.2 ರಿಂದ 7ರವರೆಗೆ ಅರಣ್ಯ ಇಲಾಖೆಯು ವಿಶೇಷ ಅಭಿಯಾನ ನಡೆಸಿ, ಸಸಿಗಳನ್ನು ನೆಟ್ಟಿತ್ತು. ಆದರೆ, ಎರಡು ವಾರ ಕಳೆಯುವಷ್ಟರಲ್ಲಿ ಸಸಿಗಳು ಒಣಗಿ ಹಾಳಾಗಿ ಹೋಗಿವೆ. ಕೆಲವೆಡೆಯಂತೂ ವಾರದ ಹಿಂದೆಯಷ್ಟೇ ಸಸಿಗಳನ್ನು ನೆಡಲಾಗಿತ್ತು. ಈಗ ಅವುಗಳು ಸುಡುವ ಬಿಸಿಲಿಗೆ ಅಸ್ತಿತ್ವವನ್ನೇ ಕಳೆದುಕೊಂಡಿವೆ. ‘ಪ್ರಜಾವಾಣಿ’ ನಡೆಸಿದ ರಿಯಾಲ್ಟಿ ಚೆಕ್‌ನಿಂದ ಈ ಸತ್ಯಾಂಶ ಗೊತ್ತಾಗಿದೆ.

ಜೂ. 5ರಂದು ಎಚ್ಎಲ್‌ಸಿ ಕಾಲುವೆ ಬಳಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಎಸ್ಪಿ ಡಾ. ಅರುಣ್‌ ಕೆ. ಸೇರಿದಂತೆ ಇತರೆ ಗಣ್ಯರು ಸೇರಿಕೊಂಡು ಸಸಿಗಳನ್ನು ಹಚ್ಚಿದ್ದರು. ಆದರೆ, ಈಗ ಆ ಸಸಿಗಳೆಲ್ಲ ಬಾಡಿ ಹೋಗಿವೆ. ಗಣ್ಯರು ಸೇರಿಕೊಂಡು ಹಚ್ಚಿದ ಸಸಿಗಳನ್ನು ಜತನ ಮಾಡುವ ಕೆಲಸವಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ADVERTISEMENT

ಹೊಸಪೇಟೆ ನಗರವೊಂದರಲ್ಲೇ 5,000 ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದೆ. ಇದುವರೆಗೆ 900 ಸಸಿ ನೆಡಲಾಗಿದೆ. ಬಳ್ಳಾರಿ ರಸ್ತೆ, ಎಚ್‌ಎಲ್‌ಸಿ, ಸಂಡೂರು ಬೈಪಾಸ್‌, ಜಂಬುನಾಥಹಳ್ಳಿ ಬೈಪಾಸ್‌ನಲ್ಲಿ ಬೇವು, ಆಲ, ಅರಳೆ, ಹೊಂಗೆ ಜಾತಿಯ ಸಸಿಗಳನ್ನು ಹಚ್ಚಲಾಗಿದೆ. ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಗರದೊಳಗೆ ಸಂಪಿಗೆ, ಮಹಾಗನಿ, ಬಸವನಪಾದ, ಕದಂಬ, ನೇರಳೆ ಜಾತಿಯ ಸಸಿಗಳನ್ನು ಆಯ್ಕೆ ಮಾಡಿ ನೆಡಲಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಕನಿಷ್ಠ 2ರಿಂದ 4 ಸಾವಿರದ ವರೆಗೆ ಸಸಿಗಳನ್ನು ಹಚ್ಚಲು ಗುರಿ ನಿಗದಿಪಡಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಕೆಲಸ ಪೂರ್ಣಗೊಳ್ಳಲು ಬಂದಿದೆ. ಆದರೆ, ಹಚ್ಚಿದ ಸಸಿಗಳತ್ತ ಗಮನ ವಹಿಸದ ಕಾರಣ ಅವುಗಳು ಬೆಳೆಯುವ ಹಂತದಲ್ಲೇ ನೆಲಕ್ಕೊರಗಿವೆ.

ಪರಿಸರ ದಿನಾಚರಣೆಯ ನೆಪದಲ್ಲಿ ಶಾಲಾ, ಕಾಲೇಜು, ಸಂಘ ಸಂಸ್ಥೆಗಳವರು ಕೂಡ ಅನೇಕ ಕಡೆಗಳಲ್ಲಿ ಸಸಿಗಳನ್ನು ಹಚ್ಚಿದ್ದಾರೆ. ಸಸಿ ನೆಡುವಾಗ ಇದ್ದ ಉತ್ಸಾಹ ಅವುಗಳ ಪೋಷಣೆಯಲ್ಲಿ ಕಾಣುತ್ತಿಲ್ಲ. ಬಿಡಾಡಿ ದನಗಳು, ಕುರಿಗಳಿಂದ ಸಸಿಗಳಿಗೆ ಕನಿಷ್ಠ ರಕ್ಷಣೆ ಒದಗಿಸುವುದಾಗಲಿ, ಸುಡುವ ಬಿಸಿಲಲ್ಲಿ ನಿತ್ಯ ನೀರುಣಿಸುವ ಕೆಲಸವಾಗುತ್ತಿಲ್ಲ. ಪರಿಸರ ದಿನಾಚರಣೆ ಛಾಯಾಚಿತ್ರ ತೆಗೆಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.

‘ಪತ್ರಿಕೆಯಲ್ಲಿ, ಟಿ.ವಿ.ಯಲ್ಲಿ ಕಾಣಿಸಿಕೊಳ್ಳಲು ಪರಿಸರ ದಿನಾಚರಣೆ ಸೀಮಿತವಾಗಿದೆ. ಹಚ್ಚಿದ ಸಸಿಗಳನ್ನು ಸಂರಕ್ಷಿಸದ ಕಾರಣ ಅವುಗಳು ಬೆಳೆಯುವುದಿಲ್ಲ. ಪ್ರತಿ ವರ್ಷ ಸಾರ್ವಜನಿಕರ ತೆರಿಗೆ ಹಣದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗುತ್ತದೆ. ಆದರೆ, ಬೆರಳೆಣಿಕೆಯಷ್ಟು ಗಿಡಗಳು ಬೆಳೆದು ಮರಗಳಾಗುತ್ತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಕೆ.ಎಂ. ಸಂತೋಷ್‌ ಕುಮಾರ್‌ ಟೀಕಿಸಿದರು.

‘ಮಳೆ ಬಂದರೆ ಸರಿ. ಇಲ್ಲದಿದ್ದರೆ ನಿತ್ಯ ಸಸಿಗಳಿಗೆ ಟ್ಯಾಂಕರ್‌ನಿಂದ ನೀರು ಹರಿಸಿ ಪೋಷಿಸಲಾಗುತ್ತದೆ. ಮೈಕ್ರೊ ನ್ಯೂಟ್ರಿಯೆಂಟ್ಸ್‌ ಕೂಡ ಕೊಡಲಾಗುತ್ತದೆ. ಎಲ್ಲೆಲ್ಲಿ ಸಸಿಗಳು ಒಣಗಿದೆಯೋ ಅವುಗಳ ಜಾಗದಲ್ಲಿ ಹೊಸದಾಗಿ ಸಸಿ ನೆಡಲಾಗುತ್ತದೆ. ಶೇ 10ರಿಂದ 15ರಷ್ಟು ಸಸಿಗಳು ಹಾಳಾಗುವುದು ಸಾಮಾನ್ಯ ಎನ್ನುತ್ತಾರೆ’ ಎಂದು ವಲಯ ಅರಣ್ಯ ಅಧಿಕಾರಿ ಕೆ.ಸಿ. ವಿನಯ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.