ಸಂಡೂರು(ಬಳ್ಳಾರಿ ಜಿಲ್ಲೆ): ‘ರಾಜ್ಯದಲ್ಲಿ ರೈತರಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಎಷ್ಟು ಭೂಮಿ ಪಡೆಯಲಾಗಿದೆ? ಅವುಗಳಲ್ಲಿ ನೈಜ ಬಳಕೆ ಎಷ್ಟು? ಉದ್ಯೋಗ ಸೃಷ್ಟಿ ಎಷ್ಟು? ಕೃಷಿಭೂಮಿ ಕಳೆದುಕೊಂಡ ಕೃಷಿಕರ ಪರಿಸ್ಥಿತಿ ಏನಾಗಿದೆ? ಎಂಬುದರ ಕುರಿತು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶ್ವೇತ ಪತ್ರ ಹೊರಡಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
ಸಂಡೂರಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇವರಿಬ್ಬರೂ ಅವಿವೇಕಿ ರಾಜಕಾರಣಿಗಳು. ಆಡಳಿತ ಪ್ರಜ್ಞೆ ಇಲ್ಲದವರು ಮತ್ತು ಹಸಿವಿನ ಜ್ಞಾನ ಇಲ್ಲದವರು’ ಎಂದು ಡಿಕೆಶಿ ಹಾಗೂ ಎಂ.ಬಿ ಪಾಟೀಲ ವಿರುದ್ಧ ಹರಿಹಾಯ್ದರು.
‘ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ಮಂಜೂರು ವಿಚಾರಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೂಡಿಕೆದಾರರಿಗೆ ತಪ್ಪು ಮಾಹಿತಿ ಹೋಗಬಾರದೆಂದು ಭೂಮಿ ಮಂಜೂರು ಮಾಡಿದ್ದೇವೆ ಎನ್ನುತ್ತಾರೆ. ಈ ನೆಲದ ಬದುಕು ಸರ್ಕಾರಿ ಸಂಪತ್ತಲ್ಲ. ಕೈಗಾರಿಕಾ ಸಚಿವರಾಗಿ ಎಷ್ಟು ದಾಸ್ಯದ ಮನೋಭಾವ ಹೊಂದಿದ್ದೀರಿ?’ ಎಂದು ಟೀಕಿಸಿದರು.
‘ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ, ‘ರಾಜ್ಯದಲ್ಲಿ ಕೈಗಾರಿಕೆ ಬೆಳೆದರೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಜಿಂದಾಲ್ ಕಂಪನಿಯು ₹ 90 ಸಾವಿರ ಕೋಟಿ ಬಂಡವಾಳ ಹಾಕಿ,50 ಸಾವಿರ ಜನರಿಗೆ ಉದ್ಯೋಗ ಒದಗಿಸಿದೆ. ಹೀಗಾಗಿ ಮಂಜೂರು ಮಾಡಿದ್ದೇವೆ’ ಎನ್ನುತ್ತಾರೆ. ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವುದು ಕೃಷಿ ಕ್ಷೇತ್ರ ಎಂಬುದನ್ನು ಅವರು ಅರಿಯಬೇಕು. ಶೇ 63 ರಷ್ಟು ಕೃಷಿ ಕ್ಷೇತ್ರವೇ ಉದ್ಯೋಗ ಸೃಷ್ಟಿಸುತ್ತಿದೆ. ಒಂದು ಎಕರೆ ಜಮೀನಿದ್ದರೆ ವಂಶ ಪಾರಂಪರ್ಯವಾಗಿ ಐವರು ಬದುಕುತ್ತಾರೆ. ಕೃಷಿ ಕ್ಷೇತ್ರ ಯಾವತ್ತೂ ಪರಿಸರಕ್ಕೆ ಹಾನಿ ಮಾಡಲ್ಲ. ಸಮಾಜಕ್ಕೂ ಆಹಾರ ಭದ್ರತೆ ನೀಡುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.