ADVERTISEMENT

'ರೈತ ವಿರೋಧಿ ಕೃಷಿ ಕಾಯ್ದೆ' ವಾಪಸು ಪಡೆಯಲು ಆಗ್ರಹ; 22 ರಂದು ಬೆಂಗಳೂರು‌ ಚಲೋ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 5:59 IST
Last Updated 17 ಜನವರಿ 2021, 5:59 IST
ಜ.22 ರಂದು ರಾಜ್ಯಮಟ್ಟದ ಪ್ರತಿಭಟನಾ ಮೆರವಣಿಗೆ
ಜ.22 ರಂದು ರಾಜ್ಯಮಟ್ಟದ ಪ್ರತಿಭಟನಾ ಮೆರವಣಿಗೆ   

ಬಳ್ಳಾರಿ: 'ರೈತ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ವಿರೋಧಿಯಾದ‌ ನಾಲ್ಕು ಲೇಬರ್ ಕೋಡ್ ಗಳನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿ ಜ.22 ರಂದು ರಾಜ್ಯಮಟ್ಟದ ಪ್ರತಿಭಟನಾ ಮೆರವಣಿಗೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ' ಎಂದು ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದರು.

'ದೇಶವ್ಯಾಪಿ ಪ್ರತಿಭಟನೆಗೆ ಎಐಯುಟಿಯುಸಿ ನೀಡಿರುವ ಕರೆಯ ಮೇರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ‌ ಪ್ರತಿಭಟನೆ ಯಲ್ಲಿ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು, ಸ್ಕೀಮ್ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ' ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಜ. 26 ರಂದು ನಡೆಯಲಿರುವ ರೈತ, ಕಾರ್ಮಿಕರ ಪರ್ಯಾಯ ಪರೇಡ್‌ನಲ್ಲಿ ಕೂಡ ಎಐಯುಟಿಯುಸಿ ತನ್ನ ಎಲ್ಲ ಕ್ಷೇತ್ರದ ಕಾರ್ಮಿಕರೊಂದಿಗೆ ಪಾಲ್ಗೊಳ್ಳಲಿದೆ. ಮುಂದಿನ ಎಲ್ಲ ಹಂತದ ಐಕ್ಯ ಚಳುವಳಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಪ್ರತಿಭಟನೆಯಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ' ಎಂದರು.

ADVERTISEMENT

'‌ದೆಹಲಿಯ ಗಡಿಯಲ್ಲಿ ಕೊರೆವ ಚಳಿಯ ನಡುವೆಯೂ ಒಂದೂವರೆ ತಿಂಗಳಿಂದ ಹೋರಾಟ ನಡೆಸಿರುವ ರೈತರ ಏಕೈಕ ಆಗ್ರಹವೆಂದರೆ ವಿದ್ಯುತ್ ಮಸೂದೆ ಸೇರಿ 3 ಕೃಷಿ ಕಾಯ್ದೆಗಳನ್ನು ಬೇಷರತ್ತಾಗಿ ವಾಪಸು ಪಡೆಯಬೇಕೆಂಬುದು. ಅದೇ ರೀತಿ 4 ಲೇಬರ್ ಕೋಡ್ ಗಳ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ, ಪ್ರತಿಭಟನೆ ಗಳೂ ನಡೆದಿವೆ. ಆದರೆ ಸರ್ಕಾರ ಈ ಕಾಯ್ದೆಗಳನ್ನು ವಾಪಸು ಪಡೆಯುವುದಿಲ್ಲ ಎಂದು ಹಠಮಾರಿ ಧೋರಣೆಯನ್ನು ತಳೆದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಗೌಡ, ಸಮಿತಿ‌ ಸದಸ್ಯ ಶರ್ಮಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.