ADVERTISEMENT

ಕಂಪ್ಲಿ: ಸ್ವಂತ ಖರ್ಚಿನಲ್ಲಿ ರೈತರಿಂದ ರಸ್ತೆ ದುರಸ್ತಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:35 IST
Last Updated 16 ಸೆಪ್ಟೆಂಬರ್ 2025, 4:35 IST
ಕಂಪ್ಲಿ ತಾಲ್ಲೂಕು ಹೊಸ ನೆಲ್ಲೂಡಿಯಿಂದ ತಾಯಮ್ಮನಕಟ್ಟೆಯವರೆಗೆ ಗುಂಡಿಗಳಿಂದ ಕೂಡಿದ್ದ 1.5ಕಿ.ಮೀ ರಸ್ತೆಯನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿಪಡಿಸಿಕೊಂಡಿದ್ದಾರೆ
ಕಂಪ್ಲಿ ತಾಲ್ಲೂಕು ಹೊಸ ನೆಲ್ಲೂಡಿಯಿಂದ ತಾಯಮ್ಮನಕಟ್ಟೆಯವರೆಗೆ ಗುಂಡಿಗಳಿಂದ ಕೂಡಿದ್ದ 1.5ಕಿ.ಮೀ ರಸ್ತೆಯನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿಪಡಿಸಿಕೊಂಡಿದ್ದಾರೆ   

ಕಂಪ್ಲಿ: ತಾಲ್ಲೂಕಿನ ಹೊಸ ನೆಲ್ಲೂಡಿಯಿಂದ ತಾಯಮ್ಮನಕಟ್ಟೆಯವರೆಗೆ ಗುಂಡಿಗಳಿಂದ ಕೂಡಿದ್ದ 1.5 ಕಿ.ಮೀ ರಸ್ತೆಯನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿಪಡಿಸಿಕೊಂಡಿದ್ದಾರೆ.

ಚಿಕ್ಕಜಾಯಿಗನೂರು ಗ್ರಾಮದಿಂದ ತಾಯಮ್ಮನಕಟ್ಟೆವರೆಗೆ ಈಗಾಗಲೇ ರಸ್ತೆ ಅಭಿವೃದ್ಧಿಗೊಂಡಿದ್ದು, ಮುಂದಿನ ಭಾಗದ ರಸ್ತೆ ಅಭಿವೃದ್ಧಿ ಕುಂಠಿತಗೊಂಡಿತ್ತು. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ರೈತರು ದೂರಿದರು.

ಹಾಳಾದ ಈ ರಸ್ತೆ ತುಂಬಾ ಗುಂಡಿಗಳಿಂದ ಕೂಡಿದ್ದು, ಮಳೆ ಬಂದಾಗ ರಸ್ತೆಯೇ ಕಾಣದೆ ಕೆಸರು ಗದ್ದೆಯಂತಾಗುತ್ತಿತ್ತು. ಇಂಥ ರಸ್ತೆಯಲ್ಲಿ ಬೈಕ್ ಸವಾರರು ಆಯ ತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಕೆಲ ವಾಹನ ಚಾಲಕರು ಈ ರಸ್ತೆ ಮೂಲಕ ಸಾಗಲು ಹರಸಾಹಸಪಡುವುದು ಸಾಮಾನ್ಯ. ಇನ್ನು ಟ್ರ್ಯಾಕ್ಟರ್‌ಗಳು ರಸ್ತೆಯಲ್ಲಿಯೇ ಸಿಲುಕಿ ಹೊಲ ಗದ್ದೆಗಳನ್ನು ತಲುಪದೆ ತೊಂದರೆ ಅನುಭವಿಸುವುದು ನಿತ್ಯ ಗೋಳಾಟವಾಗಿತ್ತು ಎಂದು ರೈತರು ಬೇಸರದಿಂದ ತಿಳಿಸಿದರು.

ಅದರಿಂದ ಬೇಸತ್ತು ಜೆಸಿಬಿ ಯಂತ್ರದಿಂದ ಸದ್ಯ ತಾತ್ಕಾಲಿಕವಾಗಿ ರಸ್ತೆ ದುರಸ್ತಿಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಂಡಿರುವುದಾಗಿ ರೈತರಾದ ವೆಂಕಟರಾಮರೆಡ್ಡಿ, ಈಶ್ವರರೆಡ್ಡಿ, ರಮೇಶ, ನಾರಾಯಣರೆಡ್ಡಿ, ವೆಂಕಟೇಶರೆಡ್ಡಿ, ಗೋಪಾಲ, ಇಸ್ಮಾಯಿಲ್, ಕೃಷ್ಣರೆಡ್ಡಿ, ರಮೇಶ, ಅಚ್ಚಿರೆಡ್ಡಿ, ಶ್ರೀನಿವಾಸರೆಡ್ಡಿ ಇತರರು ತಿಳಿಸಿದರು.

ಪಿಡಬ್ಲ್ಯುಡಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಶಾಶ್ವತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಲ್ಲಿ ಮುಂದಿನ ದಿನ ಹೊಲದಲ್ಲಿ ಬೆಳೆದ ಫಸಲು ಸಾಗಾಟಕ್ಕೆ ಅನುಕೂಲವಾಗಲಿದೆ ಎಂದು ರೈತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.