ADVERTISEMENT

ಮರಿಯಮ್ಮನಹಳ್ಳಿ: ನಿರಂತರ ಮಳೆಯಿಂದ ರೈತರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:05 IST
Last Updated 5 ಸೆಪ್ಟೆಂಬರ್ 2025, 6:05 IST
ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಕೊಂಚ ಬಿಡುವು ನೀಡುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾ ಬಳಿ ಕಟಾವು ಮಾಡಿ ರಾಶಿ ಹಾಕಿದ ಜೋಳದ ತೆನೆಗಳನ್ನು ರೈತ ಮಹಿಳೆಯರು ಒಣಗಿಸಲು ಪ್ರಯತ್ನಿಸುತ್ತಿರುವ ದೃಶ್ಯ ಗುರುವಾರ ಕಂಡು ಬಂದಿತು
ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಕೊಂಚ ಬಿಡುವು ನೀಡುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾ ಬಳಿ ಕಟಾವು ಮಾಡಿ ರಾಶಿ ಹಾಕಿದ ಜೋಳದ ತೆನೆಗಳನ್ನು ರೈತ ಮಹಿಳೆಯರು ಒಣಗಿಸಲು ಪ್ರಯತ್ನಿಸುತ್ತಿರುವ ದೃಶ್ಯ ಗುರುವಾರ ಕಂಡು ಬಂದಿತು   

ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜೋಳ ಬೆಳೆದ ರೈತರಲ್ಲಿ ಆತಂಕ ಮನೆ ಮಾಡಿದೆ.

ಮೇ, ಜೂನ್ ತಿಂಗಳಲ್ಲಿ ಸುರಿದ ಉತ್ತಮ ಮುಂಗಾರು ಮಳೆಗೆ ಈ ಬಾರಿ ಅತಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತಿದ್ದ ಜೋಳದ ಬೆಳೆಗಳು ಈಗಾಗಲೇ ಬಹುತೇಕ ಕಟಾವು ಹಂತಕ್ಕೆ ಬಂದಿದ್ದರೆ, ಅನೇಕ ರೈತರು ಕಟಾವು ಮಾಡಿ ತೆನೆಗಳನ್ನು ರಾಶಿ ಹಾಕಿದ್ದಾರೆ.

ಈ ಬಾರಿ ಡಣಾಯಕನಕೆರೆ ಮಾಗಾಣಿ, ಹಾರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಲಾಪುರ ಭಾಗ ಸೇರಿದಂತೆ ಇತರೆಡೆ ಒಂದು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಉತ್ತಮ ಇಳುವರಿ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತರು.

ADVERTISEMENT

ಆದರೆ ದಿನ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಿ ರಾಶಿ ಹಾಕಿದ ತೆನೆಗಳನ್ನು ಒಣಗಿಸಲು ಆಗದೆ ರೈತರು ಪರದಾಡುವಂತಾಗಿದ್ದು, ಬೆಳೆ ರಕ್ಷಣೆಗೆ ಪ್ಲಾಸ್ಟಿಕ್ ತಾಡಪಾಲುಗಳ ಮೊರೆ ಹೋಗುವಂತಾಗಿದೆ.

ಗುರುವಾರ ಮಧ್ಯಾಹ್ನ ಮಳೆ ಕೊಂಚ ಬಿಡುವು ನೀಡುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾ ಬಳಿ ನೂರಕ್ಕು ಹೆಚ್ಚು ರೈತರು ಕಟಾವು ಮಾಡಿ ರಾಶಿ ಹಾಕಿ ತಾಟಪಾಲುಗಳಿಂದ ಮುಚ್ಚಿದ್ದ ಗೂಡುಗಳನ್ನು ತೆರೆದು ತೆನೆಗಳನ್ನು ಒಣಗಿಸಲು ಮುಂದಾಗುತ್ತಿದ್ದ ದೃಶ್ಯ ಕಂಡು ಬಂದಿತು.

ನಿರಂತರ ಮಳೆಗೆ ಜೋಳಕ್ಕೆ ಕಾಡಿಗೆ ರೋಗ, ಫಂಗಸ್ ಕಾಣಿಸಿಕೊಳ್ಳುವ ಹಾಗೂ ತೆನೆಗಳಲ್ಲಿಯೇ ಕಾಳುಗಳು ಮೊಳಕೆಯೊಡಿಯುವ ಆತಂಕ ಎದುರಾಗಿದೆ. ಅಲ್ಲದೆ ಕಳೆದ ವರ್ಷವೂ ಸಹ ಜೋಳ ಕಟಾವು ಸಂದರ್ಭದಲ್ಲಿ ಇದೇ ರೀತಿ ಮಳೆ ಹತ್ತಿಕೊಂಡು ನಷ್ಟ ಅನುಭವಿದ್ದೆವು ಎನ್ನುತ್ತಾರೆ ತಾಂಡಾ ರೈತರು.

‘ನೋಡ್ರಿ ಈ ಬಾರಿ ಮಳಿ ಚೆನ್ನಾಗಿ ಆತು ಅಂತ ಜೋಳ ಬೆಳದ್ವಿ, ಬೆಳೆನೂ ಚೆನ್ನಾಗಿ ಬಂದೈತಿ, ಆದ್ರ ಕಟಾವು ಮಾಡಿ ರಾಶಿ ಹಾಕಿ ಇನ್ನೇನೆ ಕಾಳ ಮಾಡಬೇಕು, ಆದ್ರ ಮಳಿ ಬಿಡುವು ಕೊಡ್ತಿಲ್ಲ’ ಎನ್ನುತ್ತಾರೆ ತಾಂಡಾದ ರೈತರಾದ ರಾಮಾನಾಯ್ಕ, ಲಕ್ಷ್ಮಣನಾಯ್ಕ ಹಾಗೂ ಇತರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.